"ಪೈರೇಟೆಡ್ ಕಾಪಿಯಲ್ಲಾದ್ರೂ ಸಿನಿಮಾ ನೋಡಿ": ದಿಲ್ಜಿತ್ ರ 'Satluj' ಚಿತ್ರ ನೋಡಲು ಜನರಿಗೆ ಅನುರಾಗ್ ಕಶ್ಯಪ್ ಕರೆ
Satluj ಚಿತ್ರ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು ಏಕೆ?
Photo Credit : indiatoday.in
‘ಸಟ್ಲಜ್’ ಸಿನಿಮಾವನ್ನು ತೆಗೆದುಹಾಕಿರುವುದು ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ, ಶೀರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಮತ್ತು ಪಂಜಾಬ್ ಮೂಲದ ರಾಜಕೀಯ ಪಕ್ಷಗಳು ನಿಷೇಧವನ್ನು ವಿರೋಧಿಸಿದ್ದಾರೆ.
ಭಾರತದಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ 48 ಗಂಟೆಗಳಲ್ಲಿ ZEE5ನಿಂದ ತೆಗೆದುಹಾಕಲಾದ ದಿಲ್ಜಿತ್ ದೋಸಾಂಜ್ ಅವರ ‘ಸಟ್ಲಜ್’ ಸಿನಿಮಾವನ್ನು ಎಲ್ಲರೂ ನೋಡಬೇಕು ಎಂದು ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ಫೈರಸಿ ವೀಡಿಯೋಗಳಲ್ಲಾದರೂ ಸಿನಿಮಾ ನೋಡಿ ಎಂದು ಸಲಹೆ ನೀಡಿರುವ ಅವರು, ಸಿನಿಮಾವನ್ನು ಸ್ಟ್ರೀಮಿಂಗ್ ವೇದಿಕೆಯಿಂದ ಏಕೆ ತೆಗೆದು ಹಾಕಲಾಗಿದೆ ಎಂದು ಪ್ರಶ್ನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೊದಲಿಗೆ ಒಂದು ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿದ್ದಾರೆ. “ನಿಷೇಧದ ಬಗ್ಗೆ ಹೇಳಬೇಕೆಂದು ಬಂದರೆ, ಒಂದು ವಿಷಯವನ್ನು ನಿಷೇಧಿಸಿದರೆ ಜನರಿಗೆ ಅದನ್ನು ನೋಡುವ ಆಸಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ನಾನು ಈ ಸಿನಿಮಾವನ್ನು ನೋಡಬೇಕೆಂದು ಯೋಜಿಸಿರಲಿಲ್ಲ. ಆದರೆ ಅದನ್ನು ಏಕೆ ನಿಷೇಧಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಲು ಅದನ್ನು ನೋಡಬೇಕಾಗುತ್ತದೆ” ಎಂದು ಅವರು ಬರೆದಿದ್ದಾರೆ.
ನಂತರ ಅವರು ‘ಸಟ್ಲಜ್’ ಅನ್ನು ಪ್ರಚಾರ ಮಾಡುವ ಮತ್ತೊಂದು ಇನ್‌ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡು, ಸಾರ್ವಜನಿಕರು ಸಿನಿಮಾವನ್ನು ವೀಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ. “ದಯವಿಟ್ಟು ಎಲ್ಲರೂ ನೋಡಿ. ಪೈರೇಟ್ ಆಗಿಯಾದರೂ ನೋಡಿ” ಎಂದು ಅವರು ಬರೆದಿದ್ದಾರೆ.
ರಾಷ್ಟ್ರವ್ಯಾಪಿ ಚರ್ಚೆಗೊಳಗಾದ ಸಿನಿಮಾ:
‘ಸಟ್ಲಜ್’ ಸಿನಿಮಾವನ್ನು ತೆಗೆದುಹಾಕಿರುವ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (DSGMC) ನಿಷೇಧವನ್ನು ವಿರೋಧಿಸಿದೆ. ಸಿಖ್ ಸಂಸ್ಥೆಯು ಸಿನಿಮಾದ ಸಾರ್ವಜನಿಕ ಪ್ರದರ್ಶನಗಳನ್ನು ನಡೆಸುವುದಾಗಿ ಮತ್ತು ಜಸ್ವಂತ್ ಸಿಂಗ್ ಖಲ್ರಾ ಅವರ ಪರಂಪರೆ ದೀರ್ಘಕಾಲ ಉಳಿಯುವಂತೆ ಗಮನಿಸಲು ವಿಚಾರ ಸಂಕಿರಣಗಳನ್ನು ನಡೆಸುವುದಾಗಿ ಘೋಷಿಸಿದೆ.
“ಈ ಸಿನಿಮಾವು ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನ ಚರಿತ್ರೆಯ ಚಿತ್ರಣವಾಗಿರುವುದರಿಂದ ಸಾಮಾಜಿಕ ಕಾರ್ಯಕರ್ತನೊಬ್ಬ ಜನರಿಗೆ ಹೇಗೆ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾನೆ ಎನ್ನುವುದನ್ನು ಚಿತ್ರಿಸುತ್ತದೆ. ಅವರು 25000 ದೇಹಗಳನ್ನು ದಹನ ಮಾಡಲಾದ ಪುರಾವೆ ಮುಂದಿಟ್ಟರು. ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಷಯವನ್ನು ಎತ್ತಿದ್ದರು. ಪಂಜಾಬ್‌ನ ಭೀಕರ ಸ್ಥಿತಿ ಎತ್ತಿ ತೋರಿಸಿದರು. ಆ ಕರಾಳ ಯುಗದ ಘಟನೆಗಳು ಸಾರ್ವಜನಿಕರಿಗೆ ತಲುಪದಂತೆ ತಡೆಯುವುದು ತಪ್ಪು. ಇದು ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಗುರುದ್ವಾರ ಸಮಿತಿ ಸದಸ್ಯರು ಸಿನಿಮಾವನ್ನು ಡೌನ್‌ಲೋಡ್ ಮಾಡಿ ಸಾರ್ವಜನಿಕರಿಗೆ ತಲುಪುವಂತೆ ಗಮನಿಸಲು ಆಯಾ ಪ್ರದೇಶದಲ್ಲಿ ಪ್ರದರ್ಶಿಸುವಂತೆ ಕೇಳಿಕೊಂಡಿದ್ದೇವೆ. ಶೀಘ್ರದಲ್ಲಿಯೇ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಿದ್ದೇವೆ. ಜಸ್ವಂತ್ ಸಿಂಗ್ ಖಲ್ರಾ ಜೀವನವನ್ನು ಚರ್ಚಿಸಲು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ಒಬ್ಬ ಸಾಮಾಜಿಕ ಕಾರ್ಯಕರ್ತ ಸಮಾಜದ ಮೇಲೆ ಬೀರುವ ಪರಿಣಾಮವನ್ನು ಜನರು ಅರಿತುಕೊಳ್ಳಬೇಕು ಎಂದು ನಾವು ಬಯಸುತ್ತೇವೆ” ಎಂದು ಸಮಿತಿ ಹೇಳಿದೆ.
ಜಸ್ವಂತ್ ಸಿಂಗ್ ಖಲ್ರಾ ಜೀವನ ಕತೆ:
ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಚರಿತ್ರೆ ಆಧರಿಸಿದ ‘ಸಟ್ಲಜ್’ ಸಿನಿಮಾವು 1980 ಮತ್ತು 1990 ರ ದಶಕಗಳಲ್ಲಿ ಸಾವಿರಾರು ಗುರುತಿಸಲಾಗದ ಶವಗಳ ಕಣ್ಮರೆ ಮತ್ತು ಅಕ್ರಮ ದಹನದ ಮೇಲೆ ಕೇಂದ್ರೀಕರಿಸಿದೆ. 1995ರಲ್ಲಿ ಅವರು ಕಣ್ಮರೆಯಾಗುವ ಮೂಲಕ ದುರಂತ ಅಂತ್ಯ ಕಂಡಿದ್ದರು.
ಈ ಸಿನಿಮಾಗೆ ಪ್ರಮಾಣಪತ್ರ ನೀಡದೆ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನಿರ್ಮಾಪಕರು ಇದನ್ನು 2022ರ ಕೊನೆಯಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಸಲ್ಲಿಸಿದ್ದರು. ಸುಮಾರು 6 ತಿಂಗಳ ನಂತರ ಮಂಡಳಿ 21 ಕಡಿತಗಳೊಂದಿಗೆ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿತು. ನಂತರ ಶೀರ್ಷಿಕೆಯನ್ನು ಘಲ್ಲುಘರದಿಂದ ‘ಪಂಜಾಬ್ 95’ ಎಂದು ಬದಲಿಸಲು ಕೇಳಿದೆ ಎಂದು ವರದಿಯಾಗಿದೆ.
ಹೆಸರು ಬದಲಾವಣೆಯ ನಿರ್ಧಾರವನ್ನು ನಿರ್ಮಾಣ ಸಂಸ್ಥೆಯು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಅದೇ ಸಮಯದಲ್ಲಿ 2023ರ ಟೊರಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರದ ನಿಗದಿತ ಪ್ರೀಮಿಯರ್ ಅನ್ನು ಸಹ ರದ್ದುಗೊಳಿಸಲಾಯಿತು. ನ್ಯಾಯಾಲಯದ ವಿಚಾರಣೆಯ ನಂತರ ಸಿನಿಮಾವನ್ನು ಸಿಬಿಎಫ್‌ಸಿಯ ಪರಿಷ್ಕರಣಾ ಸಮಿತಿಗೆ ಉಲ್ಲೇಖಿಸಲಾಯಿತು. ನಂತರ ಸೂಚಿತ ಕಡಿತಗಳ ಸಂಖ್ಯೆಯನ್ನು 21ರಿಂದ 127ಕ್ಕೆ ಹೆಚ್ಚಿಸಿದೆ ಎಂದು ವರದಿಯಾಗಿದೆ. ಚಿತ್ರದ ನಾಯಕ ಜಸ್ವಂತ್ ಸಿಂಗ್ ಖಲ್ರಾ ಅವರ ಹೆಸರು ಬದಲಿಸಲು ಕೇಳಲಾಗಿದೆ. ಈ ಬದಲಾವಣೆಗಳನ್ನು ಸ್ವೀಕರಿಸಲು ನಿರಾಕರಿಸಿದ ನಂತರ ಭಾರತದಲ್ಲಿ ವರ್ಷಗಳ ಕಾಲ ಬಿಡುಗಡೆಯಾಗದೆ ಉಳಿಯಿತು.
‘ಸಟ್ಲಜ್’ ಅಂತಿಮವಾಗಿ ಜುಲೈ 3ರಂದು ಕತ್ತರಿಸದ ಆವೃತ್ತಿಯಲ್ಲಿ ZEE5ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಆದರೆ 48 ಗಂಟೆಗಳ ಒಳಗೆ ವೇದಿಕೆಯಿಂದ ಅದನ್ನು ತೆಗೆದು ಹಾಕಲಾಯಿತು. ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಕೇಂದ್ರವು ZEE5ಗೆ ಚಿತ್ರವನ್ನು ತೆಗೆದು ಹಾಕಲು ನಿರ್ದೇಶಿಸಿತು.
ಈ ಕ್ರಮವು ಶೀರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಮತ್ತು ಪಂಜಾಬ್ ಮೂಲದ ರಾಜಕೀಯ ಪಕ್ಷಗಳಿಂದ ಆಕ್ಷೇಪಣೆಗೆ ಒಳಗಾಯಿತು. ದಿಲ್ಜಿತ್ ದೋಸಾಂಜ್ ಕೂಡ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದರು.
ZEE5 ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ “ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ಸೂಚನೆ ಬರುವವರೆಗೂ ‘ಸಟ್ಲಜ್’ ಭಾರತದಲ್ಲಿ ಲಭ್ಯವಿಲ್ಲ. ಸಿನಿಮಾವನ್ನು ನಮ್ಮ ಪ್ರೇಕ್ಷಕರಿಗೆ ಸಾಧ್ಯವಾದಷ್ಟು ಬೇಗ ಮರಳಿ ತರಲು ನಾವು ಸೂಕ್ತ ಪ್ರಕ್ರಿಯೆ ಮೂಲಕ ಪ್ರತಿ ಸೂಕ್ತ ಮಾರ್ಗವನ್ನು ಅನ್ವೇಷಿಸಲು ಬದ್ಧರಾಗಿದ್ದೇವೆ” ಎಂದು ಬರೆದುಕೊಂಡಿದೆ.
ಹನಿ ಟ್ರೆಹಾನ್ ನಿರ್ದೇಶನದ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್, ಕನ್ವಲ್ಜಿತ್ ಸಿಂಗ್, ಸುವಿಂದರ್ ವಿಕ್ಕಿ ಮತ್ತು ಗೀತಿಕಾ ವಿದ್ಯಾ ಓಹ್ಲ್ಯಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.