×
Ad

ಹೈ-ಸ್ಪೀಡ್ ರೈಲು ಕಾರಿಡಾರ್‌, ತೆಂಗು, ಗೇರು ಬೆಳೆಗೆ ಉತ್ತೇಜನ; ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಏನೇನು ಸಿಕ್ಕಿದೆ?

Update: 2026-02-01 18:26 IST

Photo : PTI

ರವಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026–27ರ ಕೇಂದ್ರ ಬಜೆಟ್‌ ಮೇಲೆ ಕರ್ನಾಟಕದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೂಲಸೌಕರ್ಯ, ನಗರಾಭಿವೃದ್ಧಿಗೆ ಒತ್ತು, ರಾಜ್ಯದ ರೈತರಿಗಾಗಿ ವಿಶೇಷ ಯೋಜನೆಗಳು ಹೀಗೆ ನಿರೀಕ್ಷೆಗಳ ಪಟ್ಟಿ ಉದ್ದವಾಗಿತ್ತು. ಆದರೆ ಈ ಬಜೆಟ್‌ ನಲ್ಲಿ ಘೋಷಿಸಿದ ಒಂದಿಷ್ಟು ಯೋಜನೆಗಳಿಂದ ಕರ್ನಾಟಕಕ್ಕೆ ಪ್ರಯೋಜನವಾಗಬಹುದು ಎಂಬುದನ್ನು ಬಿಟ್ಟರೆ, ಜನರ ನಿರೀಕ್ಷೆಗಳೇನೂ ಈಡೇರಿಲ್ಲ.

►ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?

►ಹೈ-ಸ್ಪೀಡ್ ರೈಲು ಕಾರಿಡಾರ್‌ ಗಳು

ಕೇಂದ್ರ ಬಜೆಟ್‌ 7 ಹೈ-ಸ್ಪೀಡ್ ರೈಲು ಕಾರಿಡಾರ್‌ ಗಳನ್ನು ‘ಬೆಳವಣಿಗೆಯ ಕನೆಕ್ಟರ್‌’ಗಳಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಇದರಲ್ಲಿ ಕರ್ನಾಟಕಕ್ಕೆ ನೇರವಾಗಿ ಪ್ರಯೋಜನವಾಗುವ ಎರಡು ಪ್ರಮುಖ ಮಾರ್ಗಗಳೆಂದರೆ ಹೈದರಾಬಾದ್–ಬೆಂಗಳೂರು ಮತ್ತು ಚೆನ್ನೈ–ಬೆಂಗಳೂರು.

►ಆಮೆ ವೀಕ್ಷಣಾ ಪ್ರವಾಸೋದ್ಯಮ

ಭಾರತವು ವಿಶ್ವದರ್ಜೆಯ ಚಾರಣ ಮತ್ತು ಹೈಕಿಂಗ್ ಅನುಭವವನ್ನು ನೀಡುವ ಸಾಮರ್ಥ್ಯ ಹಾಗೂ ಅವಕಾಶವನ್ನು ಹೊಂದಿದೆ. ಪರಿಸರ ವಿಜ್ಞಾನಕ್ಕೆ ಸುಸ್ಥಿರವಾಗಿರುವ (i) ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು–ಕಾಶ್ಮೀರದಲ್ಲಿ ಪರ್ವತ ಹಾದಿಗಳು, ಪೂರ್ವ ಘಟ್ಟಗಳಲ್ಲಿ ಅರಕು ಕಣಿವೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಪೊಧಿಗೈ ಮಲೈ; (ii) ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಆಮೆ ಹಾದಿಗಳು; ಮತ್ತು (iii) ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಪುಲಿಕಾಟ್ ಸರೋವರದ ಉದ್ದಕ್ಕೂ ಪಕ್ಷಿ ವೀಕ್ಷಣಾ ಹಾದಿಗಳನ್ನು ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಬಜೆಟ್‌ ನಲ್ಲಿ ಹೇಳಲಾಗಿದೆ. ಈ ಮೂಲಕ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿರುವ ಆಮೆಗಳ ಸಂತಾನೋತ್ಪತ್ತಿ ತಾಣಗಳಲ್ಲಿ ಆಮೆ ವೀಕ್ಷಣಾ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ.

►ತೆಂಗು, ಗೇರು ಬೆಳೆಗೆ ಉತ್ತೇಜನ

ಕೃಷಿ ಉತ್ಪನ್ನಗಳನ್ನು ವೈವಿಧ್ಯಗೊಳಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು, ರೈತರ ಆದಾಯವನ್ನು ವೃದ್ಧಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಬೆಂಬಲ ಸಿಗಲಿದೆ. ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿದೆ. ಸುಮಾರು 10 ಮಿಲಿಯನ್ ರೈತರು ಸೇರಿದಂತೆ 30 ಮಿಲಿಯನ್ ಜನರು ತಮ್ಮ ಜೀವನೋಪಾಯಕ್ಕಾಗಿ ತೆಂಗಿನಕಾಯಿಯನ್ನು ಅವಲಂಬಿಸಿದ್ದಾರೆ. ತೆಂಗಿನ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪ್ರಮುಖ ತೆಂಗಿನಕಾಯಿ ಬೆಳೆಯುವ ರಾಜ್ಯಗಳಲ್ಲಿ ಹಳೆಯ ಹಾಗೂ ಉತ್ಪಾದಕವಲ್ಲದ ಮರಗಳನ್ನು ಹೊಸ ಸಸಿಗಳು/ಸಸ್ಯಗಳು/ಪ್ರಭೇದಗಳೊಂದಿಗೆ ಬದಲಾಯಿಸಲಾಗುವುದು. ಉತ್ಪಾದನೆಯನ್ನು ಹೆಚ್ಚಿಸಲು ತೆಂಗಿನಕಾಯಿ ಉತ್ತೇಜನ ಯೋಜನೆಯನ್ನು ಬಜೆಟ್‌ ನಲ್ಲಿ ಘೋಷಿಸಲಾಗಿದೆ.

2030ರ ವೇಳೆಗೆ ಭಾರತವನ್ನು ಕಚ್ಚಾ ಗೋಡಂಬಿ ಮತ್ತು ಕೋಕೋ ಉತ್ಪಾದನೆ ಹಾಗೂ ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತದ ಗೋಡಂಬಿ ಹಾಗೂ ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್‌ ಗಳಾಗಿ ಪರಿವರ್ತಿಸಲು ಯೋಜನೆ ಪ್ರಸ್ತಾಪಿಸಲಾಗಿದೆ. ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯ ವೈಭವವನ್ನು ಪುನಃಸ್ಥಾಪಿಸಲು ಕೇಂದ್ರೀಕೃತ ಕೃಷಿ ಮತ್ತು ಕೊಯ್ಲಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಿದೆ ಎಂದು ಬಜೆಟ್‌ ನಲ್ಲಿ ಹೇಳಲಾಗಿದೆ. ಶ್ರೀಗಂಧ ಹೆಚ್ಚಾಗಿ ಬೆಳೆಯುವ ಕರ್ನಾಟಕಕ್ಕೆ ಇದರಿಂದ ಲಾಭವಾಗಲಿದೆ. ಅದೇ ರೀತಿ ತೆಂಗು ಪ್ರಚಾರ ಯೋಜನೆ ಹಾಗೂ ಗೇರು ಬೆಳೆಗೆ ಉತ್ತೇಜನ ಕೂಡ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ.

►ನಗರ ಆರ್ಥಿಕ ಪ್ರದೇಶಗಳು (CER)

ಸರ್ಕಾರವು ನಗರ ಆರ್ಥಿಕ ಪ್ರದೇಶಗಳನ್ನು ಅವುಗಳ ನಿರ್ದಿಷ್ಟ ಬೆಳವಣಿಗೆಯ ಆಧಾರದ ಮೇಲೆ ಗುರುತಿಸುವ ಮೂಲಕ ಶ್ರೇಣಿ II ಮತ್ತು ಶ್ರೇಣಿ III ನಗರಗಳ ಮೇಲೆ ಕೇಂದ್ರೀಕರಿಸಲಿದೆ. ಮೂಲಸೌಕರ್ಯಗಳಿಗಾಗಿ ಐದು ವರ್ಷಗಳಲ್ಲಿ ಪ್ರತಿ CERಗೆ 5,000 ಕೋಟಿ ರೂ. ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಈ ಉಪಕ್ರಮವು ಬೆಂಗಳೂರಿನಂತಹ ಮೆಗಾ ನಗರಗಳಿಂದ ಮಂಗಳೂರು, ಹುಬ್ಬಳ್ಳಿ–ಧಾರವಾಡ ಮತ್ತು ಮೈಸೂರಿನಂತಹ ಶ್ರೇಣಿ II ಮತ್ತು ಶ್ರೇಣಿ III ನಗರಗಳ ಸಾಮರ್ಥ್ಯದತ್ತ ಗಮನ ಹರಿಸುತ್ತದೆ.

►ಐಟಿ ವಲಯಕ್ಕೆ ಬೆಂಬಲ

ಸಾಫ್ಟ್‌ವೇರ್ ಅಭಿವೃದ್ಧಿ ಸೇವೆಗಳು, ಐಟಿ ಸೇವೆಗಳು, KPO ಸೇವೆಗಳು ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಗೆ ಸಂಬಂಧಿಸಿದ ಗುತ್ತಿಗೆ ಆರ್ & ಡಿ ಸೇವೆಗಳಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಈ ವ್ಯವಹಾರ ವಿಭಾಗಗಳು ಪರಸ್ಪರ ಸಂಬಂಧ ಹೊಂದಿವೆ. ಈ ಎಲ್ಲಾ ಸೇವೆಗಳನ್ನು ಮಾಹಿತಿ ತಂತ್ರಜ್ಞಾನ ಸೇವೆಗಳ ಒಂದೇ ವರ್ಗದ ಅಡಿಯಲ್ಲಿ ಸಂಯೋಜಿಸಲು ಪ್ರಸ್ತಾಪಿಸಲಾಗಿದೆ. ಕೇಂದ್ರ ಬಜೆಟ್‌ ನಲ್ಲಿ ಐಟಿ ಸೇವೆಗಳಿಗೆ ‘ಸೇಫ್ ಹಾರ್ಬರ್’ ಮಿತಿಯನ್ನು 300 ಕೋಟಿ ರೂ.ವಿನಿಂದ 2,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಬೆಂಗಳೂರಿನ ಟೆಕ್ ಕಂಪೆನಿಗಳಿಗೆ ಇದರಿಂದ ದೊಡ್ಡ ಲಾಭವಾಗಲಿದೆ.

►ಕರಾವಳಿಗೇನು ಸಿಕ್ಕಿತು?

► ಕರಾವಳಿ ಸರಕು ಸಾಗಣೆ ಉತ್ತೇಜನ

ರೈಲು ಮತ್ತು ರಸ್ತೆಯಿಂದ ಕರಾವಳಿ ಸಾಗಣೆ ಹಾಗೂ ಒಳನಾಡಿನ ಜಲಮಾರ್ಗಗಳಿಗೆ ಸರಕು ಸಾಗಣೆಯ ಮಾದರಿ ಬದಲಾವಣೆಯನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. 2047ರ ವೇಳೆಗೆ ಕರಾವಳಿ ಸಾಗಣೆಯ ಪಾಲನ್ನು 6 ಶೇ.ದಿಂದ 12 ಶೇ.ಕ್ಕೆಹೆಚ್ಚಿಸುವುದು ಗುರಿಯಾಗಿದೆ ಎಂದು ಬಜೆಟ್‌ ನಲ್ಲಿ ಹೇಳಲಾಗಿದೆ. ಅದೇ ವೇಳೆ ಮೀನುಗಾರರು ವಿಶೇಷ ಆರ್ಥಿಕ ವಲಯ (EEZ) ಮತ್ತು ಆಳ ಸಮುದ್ರಗಳಲ್ಲಿ ಸಮುದ್ರ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಹಾಯ ಮಾಡಲು ಹಲವಾರು ಕ್ರಮಗಳನ್ನು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಭಾರತೀಯ ಹಡಗುಗಳು ಹಿಡಿಯುವ ಮೀನುಗಳು ಸುಂಕ ರಹಿತವಾಗಿರುತ್ತವೆ. ವಿದೇಶಿ ಬಂದರುಗಳಲ್ಲಿ ಅಂತಹ ಮೀನುಗಳನ್ನು ಇಳಿಸುವುದನ್ನು ರಫ್ತು ಎಂದು ಪರಿಗಣಿಸಲಾಗುತ್ತದೆ ಎಂದು ಬಜೆಟ್‌ ನಲ್ಲಿ ತಿಳಿಸಲಾಗಿದೆ.

►ಸಮುದ್ರಾಹಾರ ಉದ್ಯಮ

ಸಮುದ್ರ ಆಹಾರ ಉತ್ಪನ್ನಗಳ ಸಂಸ್ಕರಣಾ ವಲಯಕ್ಕೆ ನಿರ್ದಿಷ್ಟ ಸರಕುಗಳ ಸುಂಕ ರಹಿತ ಆಮದುಗಳ ಮೌಲ್ಯ ಮಿತಿಯನ್ನು ಹಿಂದಿನ ವರ್ಷದ ರಫ್ತು ವಹಿವಾಟಿನ FOB ಮೌಲ್ಯದ ಪ್ರಸ್ತುತ ಶೇ. 1ರಿಂದ ಶೇ. 3ಕ್ಕೆ ಹೆಚ್ಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ರಶ್ಮಿ ಕಾಸರಗೋಡು

contributor

Similar News