×
Ad

ಭಾರತದಲ್ಲಿ ಹವಾಮಾನ ಬದಲಾವಣೆ ಜಾನುವಾರುಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?

Update: 2026-01-30 22:06 IST

ಸಾಂದರ್ಭಿಕ ಚಿತ್ರ | Photo Credit ; PTI

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪರಿಣಾಮಗಳನ್ನು ಜಾನುವಾರುಗಳೂ ಎದುರಿಸುತ್ತಿವೆ. ಉದಾಹರಣೆಗೆ, ಹೆಚ್ಚಿನ ರೋಗ ಪ್ರಮಾಣ, ಮರಣ ಮತ್ತು ಶಾಖದ ಒತ್ತಡವು ಭಾರತದಾದ್ಯಂತ ಜಾನುವಾರು ಸಾಕಣೆದಾರರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಶೇ. 50 ಕ್ಕಿಂತ ಹೆಚ್ಚು ಎಮ್ಮೆ ಮತ್ತು ಮಿಶ್ರತಳಿ ಜಾನುವಾರು ಸಾಕಣೆದಾರರು ಹಾಗೂ ಶೇ. 40 ಕ್ಕಿಂತ ಹೆಚ್ಚು ಸ್ಥಳೀಯ ಜಾನುವಾರು ಸಾಕಣೆದಾರರು ಹೆಚ್ಚುತ್ತಿರುವ ತಾಪಮಾನದ ಈ ಪ್ರತಿಕೂಲ ಪರಿಣಾಮಗಳನ್ನು ವರದಿ ಮಾಡಿದ್ದಾರೆ.

ದಿಲ್ಲಿ ಮೂಲದ ಚಿಂತಕರ ಚಾವಡಿ ಇಂಧನ, ಪರಿಸರ ಮತ್ತು ನೀರಿನ ಮಂಡಳಿ (CEEW) ಜನವರಿ 20ರಂದು ‘ಬದಲಾಗುತ್ತಿರುವ ಹವಾಮಾನದಲ್ಲಿ ಜಾನುವಾರು ಮತ್ತು ಸಮುದಾಯ’ ಎಂಬ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನೆಗಳು 15 ರಾಜ್ಯಗಳಲ್ಲಿ 7,300 ಕ್ಕೂ ಹೆಚ್ಚು ಜಾನುವಾರು ಸಾಕಣೆದಾರರ ಮನೆಗಳ ಸಮೀಕ್ಷೆಯನ್ನು ಆಧರಿಸಿವೆ. ಇದು ಭಾರತದ ಜಾನುವಾರುಗಳ (ಹಸುಗಳು, ಎಮ್ಮೆಗಳು, ಎತ್ತುಗಳು ಮತ್ತು ಹೋರಿ ಸೇರಿದಂತೆ) ಸಂಖ್ಯೆಯ ಶೇ. 91 ರಷ್ಟನ್ನು ಒಳಗೊಂಡಿದೆ. ಈ ಅಧ್ಯಯನವನ್ನು CEEW ಸಂಶೋಧಕರಾದ ಅಭಿಷೇಕ್ ಜೈನ್, ನಿಕಿತಾ ಟ್ಯಾಂಕ್, ಆಸ್ತಾ ಬಫ್ನಾ, ರುಚಿರಾ ಗೋಯಲ್, ಚಂದನ್ ಝಾ, ಸ್ತುತಿ ಮಂಚಂದ, ಮಧುಮಿತಾ ಶ್ರೀನಿವಾಸನ್, ರೋಹನ್ ಗುಪ್ತಾ, ಸಾರಾ ಹ್ಯಾರಿಸ್, ಆರತಿ ಅಗರ್ವಾಲ್ ಮತ್ತು ಅಪೂರ್ವೆ ಖಂಡೇಲ್ವಾಲ್ ನಡೆಸಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪರಿಣಾಮಗಳು ಜಾನುವಾರು ಸಾಕಣೆದಾರರಿಗೆ ನಷ್ಟ ಮತ್ತು ಆದಾಯದಲ್ಲಿ ಇಳಿಕೆಗೆ ಕಾರಣವಾಗಬಹುದು. ಇದು ದೇಶದ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರುತ್ತದೆ, ಯಾಕೆಂದರೆ ಹಾಲು ರಾಷ್ಟ್ರೀಯ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಸರಿಸುಮಾರು ಶೇ. 5 ರಷ್ಟು ಕೊಡುಗೆ ನೀಡುತ್ತದೆ. ಜಾನುವಾರು ಸಾಕಣೆ 80 ದಶಲಕ್ಷಕ್ಕೂ ಹೆಚ್ಚು ರೈತರ ಜೀವನೋಪಾಯಕ್ಕೆ ದಾರಿಯಾಗಿದೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿದೆ. 2019ರ ಹೊತ್ತಿಗೆ ದೇಶದಲ್ಲಿ ಹಾಲು ಉತ್ಪಾದನೆಯು 188 ಮಿಲಿಯನ್ ಟನ್‌ಗಳಷ್ಟಿತ್ತು. 2023–2024ರ ವೇಳೆಗೆ ಇದು ಸುಮಾರು 242 ಮಿಲಿಯನ್ ಟನ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ವಾರ್ಷಿಕ ವರದಿ (2023–2024) ತಿಳಿಸಿದೆ.

►ಪರಿಣಾಮ

ಹವಾಮಾನ ಬದಲಾವಣೆಯಿಂದ ಜಾನುವಾರುಗಳ ಮೇಲೆ ಉಂಟಾಗುವ ಪ್ರಮುಖ ಪರಿಣಾಮವೆಂದರೆ ರೋಗಗಳ ಹೆಚ್ಚಳ. ಸಮೀಕ್ಷೆ ನಡೆಸಿದ ಜಾನುವಾರು ಸಾಕಣೆದಾರರಲ್ಲಿ ಶೇ. 33 ರಷ್ಟು ಜನರು ಈ ಬಗ್ಗೆ ತಿಳಿಸಿದ್ದಾರೆ ಎಂದು CEEW ವರದಿ ಉಲ್ಲೇಖಿಸಿದೆ. ಹೆಚ್ಚಿನ ತಾಪಮಾನದ ನೇರ ಪರಿಣಾಮವಾಗಿ ಪ್ರಾಣಿಗಳಲ್ಲಿ ಶಾಖದ ಒತ್ತಡ ಮತ್ತು ಬಿಸಿಲಿನ ಹೊಡೆತದಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹವಾಮಾನ ಬದಲಾವಣೆಯ ಪರಿಣಾಮಗಳಲ್ಲಿ ಒಂದಾದ ವೆಟ್-ಬಲ್ಬ್ ತಾಪಮಾನದಲ್ಲಿನ ಏರಿಕೆ (WBT) ರೋಗದ ದರ ಹೆಚ್ಚಳಕ್ಕೂ ಕೊಡುಗೆ ನೀಡುತ್ತದೆ. WBT ತಾಪಮಾನವು ಗಾಳಿಯ ಉಷ್ಣತೆ ಮತ್ತು ಅದರಲ್ಲಿ ಇರುವ ತೇವಾಂಶ ಎರಡನ್ನೂ ಪರಿಗಣಿಸುವ ಹೆಚ್ಚು ಸಮಗ್ರ ಮಾಪನವಾಗಿದೆ.

ಹೆಚ್ಚಿನ ವೆಟ್-ಬಲ್ಬ್ ತಾಪಮಾನವು ನೊಣಗಳು ಮತ್ತು ಉಣ್ಣಿಗಳಂತಹ ವಾಹಕಗಳ ಪ್ರಸರಣಕ್ಕೆ ಕಾರಣವಾಗುತ್ತದೆ. ಇದು ಸಣ್ಣ ಜೀವಿಗಳ ಮೂಲಕ ಹರಡುವ ಗಡ್ಡೆ ಚರ್ಮದ ಕಾಯಿಲೆಯಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದ ಸಹ-ಲೇಖಕರಾದ ಅಭಿಷೇಕ್ ಜೈನ್ ಹೇಳಿರುವುದಾಗಿ ‘The Indian Express’ ವರದಿ ಮಾಡಿದೆ.

ಬೆಚ್ಚಗಿನ ತಾಪಮಾನವು ಹಸುಗಳು ಮತ್ತು ಎಮ್ಮೆಗಳಂತಹ ಪ್ರಾಣಿಗಳ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರರ್ಥ ರೋಗಗಳ ವಿರುದ್ಧ ಹೋರಾಡುವ ಅವುಗಳ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲ ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು.

ಹೆಚ್ಚಿನ ತಾಪಮಾನದ ಮತ್ತೊಂದು ಪರಿಣಾಮವೆಂದರೆ, ವಿಶೇಷವಾಗಿ ಎಮ್ಮೆಗಳಲ್ಲಿ ಚಡಪಡಿಕೆ ಹೆಚ್ಚಾಗುವುದು. ಏಕೆಂದರೆ ಎಮ್ಮೆಗಳಿಗೆ ದಪ್ಪ ಚರ್ಮವಿದ್ದು, ಅವು ಹಸುಗಳಿಗೆ ಹೋಲಿಸಿದರೆ ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತವೆ. ರೋಗದ ಪ್ರಮಾಣ ಮತ್ತು ಚಡಪಡಿಕೆಯ ಹೆಚ್ಚಳವು ದನಗಳ ಹಾಲಿನ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಹಾಲುಣಿಸುವ ಅವಧಿಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಅವುಗಳ ದೇಹ ಕ್ಷೀಣಿಸಿ ಬೇಗನೆ ವಯಸ್ಸಾಗಬಹುದು.

ಹೆಚ್ಚಿನ ಉಷ್ಣತೆ ಇರುವಾಗ ಪ್ರಾಣಿಗಳು ಮನುಷ್ಯರಂತೆ ಕಡಿಮೆ ತಿನ್ನುತ್ತವೆ; ಇದರಿಂದ ಅವುಗಳ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತದೆ. ಹೆಚ್ಚಿನ ತಾಪಮಾನವು ಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ವಿಶೇಷವಾಗಿ ಮಿಶ್ರತಳಿಗಳಲ್ಲಿ ಇದು ಹಾಲು ಉತ್ಪಾದನೆ ಕುಸಿಯಲು ಕಾರಣವಾಗುತ್ತದೆ.

ಸಮೀಕ್ಷೆಯಲ್ಲಿ ಭಾಗಿಯಾದ ಜಾನುವಾರು ಸಾಕಣೆದಾರರಲ್ಲಿ ಶೇ. 12 ರಿಂದ ಶೇ. 14 ರಷ್ಟು ಜನರು ತಾಪಮಾನ ಏರಿಕೆಯಿಂದಾಗಿ ಹಾಲಿನ ಉತ್ಪಾದನೆಯಲ್ಲಿ ಕುಸಿತವನ್ನು ಅನುಭವಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಥಳೀಯ ಹಸುಗಳಿಗೆ ಹೋಲಿಸಿದರೆ ಮಿಶ್ರತಳಿಗಳು ಮತ್ತು ಎಮ್ಮೆಗಳು ಹವಾಮಾನ ಬದಲಾವಣೆಯ ಈ ಪ್ರತಿಕೂಲ ಪರಿಣಾಮಗಳಿಗೆ ಹೆಚ್ಚು ಗುರಿಯಾಗುತ್ತವೆ. “ಸಹಸ್ರಾರು ವರ್ಷಗಳಿಂದ ಉಷ್ಣವಲಯದ ಪರಿಸ್ಥಿತಿಗಳಿಗೆ ಹೊಂದಿಕೊಂಡಿರುವ ಸ್ಥಳೀಯ ತಳಿಗಳಿಗಿಂತ ಭಿನ್ನವಾಗಿ, ಮಿಶ್ರತಳಿ ಹಸುಗಳು ಹೆಚ್ಚುತ್ತಿರುವ ತಾಪಮಾನವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಬ್ರಿಟನ್‌ನಿಂದ ಮಿಶ್ರತಳಿಗಾಗಿ ತರಲಾದ ಜೆರ್ಸಿ ಹಸು ಸ್ಥಳೀಯ ಹಸುಗಳಿಗಿಂತ ದೇಹದ ಮೇಲಿನ ಪ್ರತಿ ಚದರ ಸೆಂಟಿಮೀಟರ್‌ಗೆ ಕಡಿಮೆ ಸಂಖ್ಯೆಯ ಬೆವರು ಗ್ರಂಥಿಗಳನ್ನು ಹೊಂದಿದೆ. ಇದರಿಂದ ಜೆರ್ಸಿ ಹಸುವಿಗೆ ಶಾಖವನ್ನು ಹೊರಹಾಕುವುದು ಕಷ್ಟವಾಗುತ್ತದೆ.”

ಹವಾಮಾನ ಬದಲಾವಣೆ ತೀವ್ರಗೊಳ್ಳುತ್ತಿದ್ದಂತೆ ಆಹಾರ ಮತ್ತು ಮೇವು ಕೂಡ ವಿರಳವಾಗುತ್ತಿದೆ. ಇದರಿಂದ ಜಾನುವಾರು ಸಾಕಣೆ ಇನ್ನಷ್ಟು ದುಬಾರಿಯಾಗುತ್ತಿದೆ. CEEW ಅಧ್ಯಯನದ ಪ್ರಕಾರ, ಜಾನುವಾರು ಸಾಕಣೆದಾರರು ಈಗಾಗಲೇ ಏರುತ್ತಿರುವ ಬೆಲೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಶೇ. 70 ಕ್ಕಿಂತ ಹೆಚ್ಚು ಸಾಕಣೆದಾರರು ಕೈಗೆಟುಕುವ ಆಹಾರ ಮತ್ತು ಮೇವು ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ.

►ಹೊಂದಾಣಿಕೆಯ ಅಗತ್ಯ

ಭಾರತದಲ್ಲಿ ಹೆಚ್ಚಿನ ಜಾನುವಾರು ಸಾಕಣೆದಾರರು ಭವಿಷ್ಯದಲ್ಲಿಯೂ ಸಾಕಣೆಯನ್ನು ಮುಂದುವರಿಸಲು ಬಯಸುತ್ತಿರುವುದರಿಂದ, ಈ ವಲಯವನ್ನು ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಮಾಡುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಶೇ. 75 ರಷ್ಟು ಜಾನುವಾರು ಸಾಕಣೆದಾರರು ತಮ್ಮ ಮುಂದಿನ ಪೀಳಿಗೆಯೂ ಪ್ರಾಣಿಗಳನ್ನು ಸಾಕುವುದನ್ನು ಮುಂದುವರಿಸಬೇಕೆಂದು ಬಯಸಿದ್ದಾರೆ. ಜೊತೆಗೆ ಶೇ. 40 ರಷ್ಟು ಸಾಕಣೆದಾರರು ತಮ್ಮ ಹಿಂಡಿನ ಗಾತ್ರವನ್ನು ವಿಸ್ತರಿಸಲು ಇಚ್ಛಿಸಿದ್ದಾರೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (2019) ಪ್ರಕಾರ, ಗ್ರಾಮೀಣ ಭಾರತದಲ್ಲಿ ಸರಾಸರಿ ಗೋವಿನ ಹಿಂಡಿನ ಗಾತ್ರವು 3.14 ಪ್ರಾಣಿಗಳಾಗಿದ್ದು, ಸಣ್ಣ ಹಿಡುವಳಿದಾರರ ಜಾನುವಾರು ಮಾಲೀಕತ್ವದ ಪ್ರಾಬಲ್ಯವನ್ನು ಇದು ಸೂಚಿಸುತ್ತದೆ.

ಹವಾಮಾನ ಬದಲಾವಣೆಯಿಂದ ಜಾನುವಾರುಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಸಂಶೋಧಕರು ಹಲವು ಕ್ರಮಗಳನ್ನು ಶಿಫಾರಸು ಮಾಡಿದ್ದಾರೆ. ಉದಾಹರಣೆಗೆ, ಸ್ಥಳೀಯ ತಳಿಗಳಲ್ಲಿ ಆಯ್ದ ಸಂತಾನೋತ್ಪತ್ತಿ ಅತ್ಯಂತ ನಿರ್ಣಾಯಕವಾಗಿದೆ.

“ದೇಶಿ ತಳಿಗಳಿಗಿಂತ ಮಿಶ್ರತಳಿ ಮತ್ತು ಎಮ್ಮೆಗಳು ಹೆಚ್ಚಿನ ಹಾಲು ಕೊಡುವುದರಿಂದ ಅನೇಕ ರೈತರು ಅವುಗಳನ್ನು ಇಷ್ಟಪಡುತ್ತಾರೆ. ಆದರೆ ಮಿಶ್ರತಳಿ ಪ್ರಾಣಿಗಳು ಸ್ಥಳೀಯ ಪ್ರಾಣಿಗಳಷ್ಟು ಹವಾಮಾನ ನಿರೋಧಕವಾಗಿರುವುದಿಲ್ಲ. ಆದ್ದರಿಂದ ಸ್ಥಳೀಯ ಜಾನುವಾರುಗಳ ಆಯ್ದ ಸಂತಾನೋತ್ಪತ್ತಿ ಉತ್ಪಾದಕತೆಯನ್ನು ಹೆಚ್ಚಿಸುವುದರ ಜೊತೆಗೆ ಹವಾಮಾನ ಬದಲಾವಣೆಯ ಪರಿಣಾಮಗಳ ವಿರುದ್ಧ ಸ್ಥಿತಿಸ್ಥಾಪಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.”

ಪ್ರಾಣಿಗಳ ಕೊಟ್ಟಿಗೆಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸುಧಾರಿಸುವ ಅಗತ್ಯವೂ ಇದೆ. ಇದು ಹೆಚ್ಚುತ್ತಿರುವ ತಾಪಮಾನದಿಂದ ಜಾನುವಾರುಗಳನ್ನು ರಕ್ಷಿಸುವಲ್ಲಿ ನಿರ್ಣಾಯಕವಾಗಿದೆ. ನಾಲ್ಕು ಜಾನುವಾರು ಸಾಕಣೆದಾರರಲ್ಲಿ ಒಬ್ಬರು ಪಶು ಶೆಡ್‌ಗಳನ್ನು ನಿರ್ಮಿಸಲು ಅಗತ್ಯ ಸಂಪನ್ಮೂಲಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಜಾನುವಾರುಗಳ ಕೊಟ್ಟಿಗೆಗಳನ್ನು ನಿರ್ಮಿಸಲು ಮತ್ತು ಅವುಗಳಿಗೆ ಉತ್ತಮ ಸೂಕ್ಷ್ಮ ಹವಾಮಾನ ಪರಿಸ್ಥಿತಿಗಳನ್ನು ಒದಗಿಸಲು ಸರ್ಕಾರವು ಸಹಾಯಧನಗಳು ಹಾಗೂ ಅಗ್ಗದ ಸಾಲಗಳನ್ನು ನೀಡುವ ಮೂಲಕ ರೈತರಿಗೆ ಬೆಂಬಲ ನೀಡಬಹುದು. ಈ ಶೆಡ್‌ಗಳಲ್ಲಿ ಉತ್ತಮ ಗಾಳಿ ಹರಿವು ಮತ್ತು ಸಮರ್ಪಕ ನೆರಳು ಇರಬಹುದು. ಜೊತೆಗೆ ಪ್ರಾಣಿಗಳಿಗೆ ಆಹಾರ ಮತ್ತು ಮೇವಿನಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಇದರಿಂದ ಅವುಗಳ ರೋಗ ನಿರೋಧಕ ಶಕ್ತಿ ಮತ್ತು ಸ್ಥೈರ್ಯ ಹೆಚ್ಚುತ್ತದೆ ಎಂದು ಜೈನ್ ಹೇಳಿದ್ದಾರೆ.

ಹವಾಮಾನ ಅಪಾಯಗಳ ವಿರುದ್ಧ ಜಾನುವಾರುಗಳನ್ನು ರಕ್ಷಿಸಲು ಸಾಕಣೆದಾರರಿಗೆ ಸೂಕ್ತ ಹಾಗೂ ಸಮಗ್ರ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಅಧ್ಯಯನವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News