ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆ ನೆನಪಿಸಿದ ಸಿಜೆ ರಾಯ್ ಪ್ರಕರಣ
ಸಿ.ಜೆ ರಾಯ್ , ಸಿದ್ದಾರ್ಥ್ | Photo Credit : PTI
ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್ ಜನವರಿ 30 ಶುಕ್ರವಾರ ಮಧ್ಯಾಹ್ನ 3.15ರ ಹೊತ್ತಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆಯೇ ರಾಯ್ ಗುಂಡು ಹಾರಿಸಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ದಾಳಿ ವೇಳೆ ಮಾನಸಿಕ ಒತ್ತಡ ಹೇರಿದ್ದರಿಂದಲೇ ರಾಯ್ ಆತ್ಮಹತ್ಯೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಸಿಜೆ ರಾಯ್ ಆತ್ಮಹತ್ಯೆಗೆ ತೆರಿಗೆ ಭಯೋತ್ಪಾದನೆ ಕಾರಣ ಎಂದು ರಾಜಕೀಯ ಪಕ್ಷಗಳು ಆರೋಪಿಸಿದ್ದು ಈ ಪ್ರಕರಣ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ ಹೆಗ್ಡೆ ಆತ್ಮಹತ್ಯೆ ಪ್ರಕರಣವನ್ನು ನೆನೆಪಿಸುವಂತೆ ಮಾಡಿದೆ.
2019 ಜುಲೈ 29ರಂದು ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಉದ್ಯಮಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹ ಎರಡು ದಿನಗಳ ಬಳಿಕ ನಾಲ್ಕು ಕಿ.ಮೀ. ದೂರದ ಹೊಯ್ಗೆ ಬಜಾರ್ ಎಂಬಲ್ಲಿ ಪತ್ತೆಯಾಗಿತ್ತು. ಬೆಂಗಳೂರಿನಿಂದ ಸಕಲೇಶಪುರಕ್ಕೆ ಹೋಗುವುದಾಗಿ ಹೊರಟಿದ್ದ ಸಿದ್ದಾರ್ಥ, ಮಧ್ಯದಲ್ಲಿ ಮಾರ್ಗ ಬದಲಿಸಿ ಮಂಗಳೂರಿಗೆ ಬಂದಿದ್ದರು. ನಂತರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಯಾರು ಈ ಸಿದ್ದಾರ್ಥ್?
ಸಿದ್ದಾರ್ಥ್ ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಚೇತನ ಹಳ್ಳಿಯ ಉದ್ಯಮಿ. ಅವರ ಅಪ್ಪ ಗಂಗಯ್ಯ ಹೆಗ್ಡೆ ಜಮೀನ್ದಾರರು. ಕುಟುಂಬ ಕಾಫಿ ಕೃಷಿಯಲ್ಲಿ ತೊಡಸಿಕೊಂಡಿತ್ತು. ಅಪ್ಪ ಕಾಫಿ ಕೃಷಿಯಲ್ಲಿ ನಿರತರಾದಾಗ ಮಗ ಸಿದ್ದಾರ್ಥ್, ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಯನ್ನು ಜಗತ್ತಿನಾದ್ಯಂತ ವಿಸ್ತರಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ದಾರ್ಥ್ ಮುಂಬೈನ ಜೆ.ಎಂ. ಫೈನಾನ್ಷಿಯಲ್ಸ್ ಲಿಮಿಟೆಡ್‌ನಲ್ಲಿ ಕೆಲಕಾಲ ಷೇರು ವಹಿವಾಟಿನ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿ ‘ಸಿವನ್ ಸೆಕ್ಯುರಿಟಿಸ್ ಎಂಟರ್‌ಪ್ರೈಸಸ್’ ಸ್ಥಾಪಿಸಿದ್ದ ಅವರು ನಂತರ ಕಾಫಿ ಉದ್ಯಮಕ್ಕೆ ಕಾಲಿಟ್ಟರು.
1993ರಲ್ಲಿ ಮೂಡಿಗೆರೆ ಭಾಗದ ಕುದುರೆಗಂಡಿಯ ಪ್ರದೇಶದಲ್ಲಿ ಅಮಾಲ್ಗಮೇಟೆಡ್ ಬೀನ್ ಕಂಪನಿ ಲಿಮಿಟೆಡ್ (ABCL) ಒಡೆತನದಲ್ಲಿದ್ದ 220 ಎಕರೆ ಕಾಫಿ ತೋಟವನ್ನು ಸಿದ್ದಾರ್ಥ್ ಖರೀದಿಸಿದ್ದರು. ಈ ಕಂಪನಿಯ ಮೂಲಕ ಅವರು ಕಾಫಿ ರಫ್ತು ಮಾರುಕಟ್ಟೆಯಲ್ಲಿ ಉದ್ಯಮಿಯಾಗಿ ಬೆಳೆದರು. ಕಾಫಿ ಕ್ಯೂರಿಂಗ್, ರೋಸ್ಟಿಂಗ್, ಖರೀದಿ, ಮಾರಾಟ ಶುರು ಮಾಡಿದ ಸಿದ್ದಾರ್ಥ ಕಾಫಿ ಕ್ಷೇತ್ರದಲ್ಲಿ ಸಂಶೋಧನೆ, ಅಭಿವೃದ್ಧಿ ಎಲ್ಲದಕ್ಕೂ ವ್ಯವಸ್ಥೆ ಕಲ್ಪಿಸಿದ್ದರು.
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ 1996ರ ಜುಲೈ 11ರಂದು ಮೊದಲ ಕೆಫೆ ಕಾಫಿ ಡೇ (ಸಿಸಿಡಿ)ಆರಂಭಿಸುವ ಮೂಲಕ ಸಿದ್ದಾರ್ಥ ಕಾಫಿ ಸಂಸ್ಕೃತಿಯನ್ನು ಉದ್ಯಮವಾಗಿ ಬೆಳೆಸತೊಡಗಿದರು. ಹೀಗೆ ಶುರುವಾದ ಅವರ ಉದ್ಯಮ ವರ್ಷಕ್ಕೆ 1,600 ಕೋಟಿ ರೂಪಾಯಿ ವ್ಯವಹಾರಗಳ ಉದ್ಯಮವಾಗಿ ವಿಸ್ತರಿಸತೊಡಗಿತು. 2002ರಲ್ಲಿ ಕಾಫಿ ತಯಾರಿ ಯಂತ್ರ ಪರಿಚಯಿಸಿದ್ದರು ಸಿದ್ದಾರ್ಥ್.
‘ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಎ ಕಪ್ ಆಫ್ ಕಾಫಿ’ ‘ಕೆಫೆ ಕಾಫಿ ಡೇ’ಯ ಅಡಿಬರಹ . ಸಿಂಗಾಪುರ ವಿಯೆನ್ನಾ, ಮಲೇಷ್ಯಾ, ಝಕೊಸ್ಲೊವಾಕಿಯ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಸಿಸಿಡಿ ಶಾಖೆಗಳಿವೆ. ಇದು ಬರೀ ಕಾಫಿ ಕುಡಿಯುವ ಜಾಗ ಮಾತ್ರವಲ್ಲ, ಬ್ಯುಸಿನೆಸ್ ಮೀಟಿಂಗ್, ಮದುವೆ ಮಾತುಕತೆ, ಆಫೀಸ್ ಕೆಲಸದ ಮಾತುಕತೆ, ಹರಟೆ ತಾಣ, ಅಷ್ಟೇ ಯಾಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವೇದಿಕೆ ಕೂಡಾ ಆಗಿದೆ. ಭಾರತಕ್ಕೆ ಬರಿಸ್ತಾ, ಸ್ಟಾರ್ ಬಕ್ಸ್ ಮೊದಲಾದ ದೊಡ್ಡ ದೊಡ್ಡ ಕಾಫಿ ಬ್ರ್ಯಾಂಡ್ ಗಳು ಬಂದಾಗ ಸಿಸಿಡಿ ತೀವ್ರ ಪೈಪೋಟಿ ಎದುರಿಸಿತ್ತು.
ಕರ್ನಾಟಕ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಅವರನ್ನು ವಿವಾಹವಾಗಿದ್ದ ಸಿದ್ದಾರ್ಥ್, ಕಾಫಿ ಉದ್ಯಮ ಮಾತ್ರವಲ್ಲದೆ ಎಸ್‌ಐಸಿಎಲ್ ಸರಕು ಸಾಗಣೆ ಕಂಪನಿ, ಪೀಠೋಪಕರಣ ತಯಾರಿಕೆಗಾಗಿ ‘ದಿ ಡಾರ್ಕ್ ಫಾರೆಸ್ಟ್’ ಫರ್ನಿಚರ್ ((Daffco), ಕಂಪನಿಯನ್ನೂ ಸ್ಥಾಪಿಸಿದ್ದರು.
►ವಿವಾದಗಳು
ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ಆಡಳಿತ ಕಾರ್ಯಗಳಲ್ಲಿ ಸಿದ್ದಾರ್ಥ್ ಹಸ್ತಕ್ಷೇಪ ಮಾಡುತ್ತಿದ್ದರು, ಅವರು ಸಾವಿರಾರು ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ದೂರುಗಳೂ ಕೇಳಿ ಬಂದಿತ್ತು . ಕೃಷ್ಣ ಅವರು ಬಿಜೆಪಿಗೆ ಹೋಗಿದ್ದು ಕೂಡಾ ಅಳಿಯನನ್ನು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಸಂಕಷ್ಟಗಳಿಂದ ಪಾರು ಮಾಡುವ ಉದ್ದೇಶದಿಂದ ಎಂಬ ವದಂತಿಯೂ ಕೇಳಿಬಂದಿತ್ತು. ಆದರೆ, ಬಿಜೆಪಿ ಆಡಳಿತದ ಅವಧಿಯಲ್ಲೇ ಸಿದ್ಧಾರ್ಥ್ ಅವರ ಕಂಪನಿಗಳ ಮೇಲೆ 2018 ಮತ್ತು 2019ರಲ್ಲಿ ಆದಾಯ ತೆರಿಗೆ ದಾಳಿ ನಡೆದಿತ್ತು.
►ಐಟಿ ಇಲಾಖೆಯಿಂದ ಕಿರುಕುಳ: ಸಿದ್ಧಾರ್ಥ್ ಬರೆದ ಕೊನೇ ಪತ್ರ
ಆತ್ಮಹತ್ಯೆಗೆ ಮುನ್ನ ಕಾಫಿ ಡೇ ಆಡಳಿತ ಮಂಡಳಿಗೆ ಸಿದ್ಧಾರ್ಥ್ ಪತ್ರವೊಂದನ್ನು ಬರೆದಿದ್ದರು. ಆ ಪತ್ರದ ಸಾರ ಹೀಗಿದೆ
"37 ವರ್ಷಗಳಲ್ಲಿ ಕಠಿಣ ಪರಿಶ್ರಮ, ಬದ್ಧತೆಯೊಂದಿಗೆ, ನಾನು ನಮ್ಮ ಕಂಪನಿಗಳು ಮತ್ತು ಅವುಗಳ ಅಂಗಸಂಸ್ಥೆಗಳಲ್ಲಿ ನೇರವಾಗಿ 30,000 ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ಸ್ಥಾಪನೆಯಾದಾಗಿನಿಂದ ನಾನು ದೊಡ್ಡ ಷೇರುದಾರನಾಗಿರುವ ತಂತ್ರಜ್ಞಾನ ಕಂಪನಿಯಲ್ಲಿ ಇನ್ನೂ 20,000 ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ನನ್ನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಸರಿಯಾದ ಲಾಭದಾಯಕ ವ್ಯವಹಾರ ಮಾದರಿಯನ್ನು ರಚಿಸಲು ನಾನು ವಿಫಲನಾಗಿದ್ದೇನೆ. ನಾನು ನನ್ನ ಎಲ್ಲವನ್ನೂ ಕೊಟ್ಟಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದ ಎಲ್ಲ ಜನರನ್ನು ನಿರಾಸೆಗೊಳಿಸಿದ್ದಕ್ಕೆ ವಿಷಾದವಿದೆ. ನಾನು ಬಹಳ ಸಮಯ ಹೋರಾಡಿದೆ, ಆದರೆ ಇಂದು ನಾನು ಬಿಟ್ಟುಕೊಟ್ಟೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಸಹವರ್ತಿಯೊಬ್ಬರು ನಾನು ಷೇರುಗಳನ್ನು (ಬೈಬ್ಯಾಕ್) ಮರುಖರೀದಿ ಮಾಡಬೇಕೆಂದು ತೀವ್ರ ಒತ್ತಡ ಹೇರುತ್ತಿದ್ದಾರೆ. ಆರು ತಿಂಗಳ ಹಿಂದೆ ನನ್ನ ಸ್ನೇಹಿತನಿಂದ ದೊಡ್ಡಮೊತ್ತದ ಹಣ ಪಡೆದು ನಾನು ಈ ವ್ಯವಹಾರ ಮಾಡಿದ್ದೆ. ನನಗೆ ಸಾಲ ಕೊಟ್ಟಿರುವ ಇತರ ಕೆಲವರೂ ಈಗ ತೀವ್ರ ಒತ್ತಡ ಹೇರುತ್ತಿದ್ದಾರೆ.
ಹಿಂದಿನ ಆದಾಯ ತೆರಿಗೆ ಮಹಾನಿರ್ದೇಶಕರು ನಮ್ಮ ಮೈಂಡ್‌ಟ್ರೀ ಒಪ್ಪಂದವನ್ನು ತಡೆಯಲು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ನಮ್ಮ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ , ಪರಿಷ್ಕೃತ ರಿಟರ್ನ್‌ಗಳನ್ನು ಸಲ್ಲಿಸಿದ್ದರೂ ಕಾಫಿ ಡೇ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಕಿರುಕುಳ ನೀಡಿದರು. ಇದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು. ಹೊಸ ವ್ಯವಸ್ಥಾಪಕ ಸಮಿತಿಯೊಂದಿಗೆ ಈ ವ್ಯವಹಾರಗಳನ್ನು ನಡೆಸುವುದನ್ನು ಮುಂದುವರಿಸಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ಎಲ್ಲಾ ತಪ್ಪುಗಳಿಗೆ ನಾನೊಬ್ಬನೇ ಕಾರಣ. ಪ್ರತಿಯೊಂದು ಹಣಕಾಸಿನ ವಹಿವಾಟಿಗೂ ನಾನೇ ಹೊಣೆಗಾರ. ನನ್ನ ತಂಡ, ಲೆಕ್ಕಪರಿಶೋಧಕರು ಮತ್ತು ಹಿರಿಯ ವ್ಯವಸ್ಥಾಪಕರಿಗೆ ನನ್ನ ವಹಿವಾಟುಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಕಾನೂನು ನನ್ನನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಬೇಕು, ಏಕೆಂದರೆ ನಾನು ಈ ಮಾಹಿತಿಯನ್ನು ನನ್ನ ಕುಟುಂಬ ಸೇರಿದಂತೆ ಯಾರ ಜತೆಗೂ ಹಂಚಿಕೊಂಡಿಲ್ಲ.
ಯಾರಿಗೂ ಮೋಸ ಮಾಡುವುದು ಅಥವಾ ದಾರಿ ತಪ್ಪಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಉದ್ಯಮಿಯಾಗಿ ಸೋತೆ. ಒಂದು ದಿನ ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರಿ, ಕ್ಷಮಿಸುವಿರಿ ಎಂದು ನಾನು ಭಾವಿಸುತ್ತೇನೆ. ನಾನು ನಮ್ಮ ಆಸ್ತಿಗಳ ಪಟ್ಟಿಯನ್ನು ಮತ್ತು ಪ್ರತಿಯೊಂದರ ತಾತ್ಕಾಲಿಕ ಮೌಲ್ಯವನ್ನು ಲಗತ್ತಿಸಿದ್ದೇನೆ. ನಮ್ಮ ಹೊಣೆಗಳಿಗೆ (ಲಿಯಬಿಲಿಟಿ, ಸಾಲ ಇತ್ಯಾದಿ)ಹೋಲಿಸಿದರೆ ನಮ್ಮ ಸ್ವತ್ತುಗಳ ಮೊತ್ತ ಜಾಸ್ತಿ ಇದೆ. ಇದು ಎಲ್ಲರಿಗೂ ಅವರವರಿಗೆ ಸಲ್ಲಬೇಕಾದ ಹಣ ಮರುಪಾವತಿಸಲು ಸಹಾಯ ಮಾಡುತ್ತದೆ"
ಸಿದ್ಧಾರ್ಥ ಅವರು 2019 ಜುಲೈ 27, ರಂದು ಸಹಿ ಹಾಕಿದ ಪತ್ರ ಇದಾಗಿದ್ದು. ಆ ಪತ್ರದ ಪ್ರತಿಯನ್ನು ಕಾಫಿ ಡೇ ಶೇರ್ ಮಾಡಿತ್ತು.
►ಆದಾಯ ಇಲಾಖೆಗೆ ಕ್ಲೀನ್ ಚಿಟ್
ಸಿದ್ಧಾರ್ಥ್ ಅವರ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ ಸಿಬಿಐನ ಮಾಜಿ ಉಪ ಮಹಾ ನಿರ್ದೇಶಕ ಅಶೋಕ್ ಕುಮಾರ್ ಮಲ್ಹೋತ್ರ ಅವರ ನೇತೃತ್ವದಲ್ಲಿ ನಡೆದ ತನಿಖೆಯು ಆದಾಯ ತೆರಿಗೆ ಇಲಾಖೆಗೆ ಕ್ಲೀನ್ ಚಿಟ್ ನೀಡಿತ್ತು.
ಸಿದ್ಧಾರ್ಥ್ ಅವರ ಮಾಲೀಕತ್ವದಲ್ಲಿದ್ದ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ ಕಂಪನಿಯು, ಕಾಫಿ ಡೇ ಎಂಟರ್‌ಪ್ರೈಸಸ್‌ನ (ಸಿಡಿಇಎಲ್) ಅಂಗಸಂಸ್ಥೆಗಳಿಗೆ ಒಟ್ಟು ₹3,535 ಕೋಟಿ ಬಾಕಿ ಇರಿಸಿಕೊಂಡಿದೆ ಎಂಬುದು ಸಿದ್ಧಾರ್ಥ್ ಅವರ ಆತ್ಮಹತ್ಯೆ ಕುರಿತು ನಡೆದ ತನಿಖೆಯಿಂದ ಬಹಿರಂಗವಾಗಿದೆ. ಎಂಎಸಿಇಎಲ್ ನೀಡಬೇಕಿದ್ದ ಈ ಮೊತ್ತದಲ್ಲಿ ಒಟ್ಟು ರೂ. 842 ಕೋಟಿಯ ಬಗ್ಗೆ ಮಾತ್ರ 2019ರ ಮಾರ್ಚ್ 31ರವರೆಗಿನ ಲೆಕ್ಕಪತ್ರಗಳಲ್ಲಿ ಉಲ್ಲೇಖವಿದೆ ಎಂದು ತನಿಖಾ ತಂಡ ಹೇಳಿದೆ. ಎಂಎಸಿಇಎಲ್ ಎಂಬುದು ಸಿದ್ಧಾರ್ಥ ಅವರ ಖಾಸಗಿ ಕಂಪನಿ. ಸಿಡಿಇಎಲ್‌ನ ಅಂಗಸಂಸ್ಥೆಗಳು ಎಂಎಸಿಇಎಲ್‌ಗೆ ಸಾಲ ನೀಡಿದ್ದವು. ಆದಾಯ ತೆರಿಗೆ ಇಲಾಖೆಯ ಕಡೆಯಿಂದ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶ ಇಲ್ಲದೆ ಕಿರುಕುಳ ಉಂಟಾಗಿತ್ತು ಎಂದು ಹೇಳಲು ಯಾವುದೇ ದಾಖಲೆ ಇಲ್ಲ ಎಂದು ತನಿಖಾ ತಂಡ ಹೇಳಿತ್ತು.