ಬಜೆಟ್ 2026: ರೇರ್ ಅರ್ತ್ ಕಾರಿಡಾಡ್‌ಗಳ ರಚನೆ ಘೋಷಣೆ; ಏನಿದು REPM ಕಾರಿಡಾರ್?
ನಾಲ್ಕು ರಾಜ್ಯಗಳನ್ನೇಕೆ ಆರಿಸಲಾಗಿದೆ?; ಇಲ್ಲಿದೆ ಮಾಹಿತಿ...
Photo Credit : PTI
ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಮೀಸಲಾದ REPM ಕಾರಿಡಾರ್‌ಗಳನ್ನು ಸ್ಥಾಪಿಸಲು ಬೆಂಬಲ ನೀಡಲು ಪ್ರಸ್ತಾಪಿಸುವುದಾಗಿ ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.
ಖನಿಜಗಳಿಗೆ ಸಂಬಂಧಿಸಿ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವ ಮತ್ತು ದೇಶೀಯ ಉತ್ಪಾದನಾ ನೆಲೆಯನ್ನು ಬಲಪಡಿಸುವ ಉದ್ದೇಶದಿಂದ ರೇರ್ ಅರ್ತ್ ಕಾರಿಡಾಡ್‌ಗಳನ್ನು (ಅಪರೂಪದ ಖನಿಜಗಳಿರುವ ಭೂಭಾಗದ ಕಾರಿಡಾರ್) ಸ್ಥಾಪಿಸುವುದಾಗಿ ಕೇಂದ್ರ ಬಜೆಟ್‌ನ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಖನಿಜ ಸಮೃದ್ಧವಾಗಿರುವ ರಾಜ್ಯಗಳಿಗೆ ಅರ್ಪಿತವಾದ ರೇರ್ ಅರ್ತ್ ಕಾರಿಡಾರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ. ಈ ಕಾರಿಡಾರ್‌ಗಳು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನು ಸಂಪರ್ಕಿಸಲಿವೆ.
“ರೇರ್ ಅರ್ತ್ ಪರ್ಮನೆಂಟ್ ಮ್ಯಾಗ್ನೆಟ್‌ಗಳಿಗಾಗಿ (ಬಾಹ್ಯ ಒತ್ತಡದ ನಂತರವೂ ಕಾಂತಗುಣವನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತದೆ) ಅಥವಾ REPM (ನಿಯೋಡೈಮಿಯಮ್ (Nd), ಸಮರಿಯಮ್ (Sm), ಡಿಸ್ಪ್ರೋಸಿಯಮ್ (Dy) ನಂತಹ ಅಪರೂಪದ ಭೂಮಿಯ ಎಲಿಮೆಂಟ್‌ಗಳಿಂದ ತಯಾರಾದ ಶಾಶ್ವತ ಕಾಂತ) ಒಂದು ಯೋಜನೆಯನ್ನು 2025ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಇದೀಗ ನಾವು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಮೀಸಲಾದ REPM ಕಾರಿಡಾರ್‌ಗಳನ್ನು ಸ್ಥಾಪಿಸಲು ಬೆಂಬಲ ನೀಡಲು ಪ್ರಸ್ತಾಪಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
REPM ಕಾರಿಡಾರ್ ಎಂದರೇನು?
ರೇರ್ ಅರ್ತ್ ಎಲಿಮೆಂಟ್‌ಗಳು ಅನೇಕ ಆಧುನಿಕ ತಂತ್ರಜ್ಞಾನಗಳಲ್ಲಿ ಬಳಸುವ ಖನಿಜಗಳಾಗಿವೆ. ಇವುಗಳಲ್ಲಿ ವಿದ್ಯುತ್ ವಾಹನಗಳು, ಪವನ ಯಂತ್ರಗಳು, ಮೊಬೈಲ್ ಫೋನ್‌ಗಳು, ರಕ್ಷಣಾ ಉಪಕರಣಗಳು ಮತ್ತು ಇತರ ಸುಧಾರಿತ ಎಲೆಕ್ಟ್ರಾನಿಕ್ಸ್‌ಗಳು ಸೇರಿವೆ. ಅಪರೂಪದ ಭೂಮಿಯ ಖನಿಜಗಳಿಂದ ಮಾಡಿದ ಶಾಶ್ವತ ಅಯಸ್ಕಾಂತಗಳು ಶುದ್ಧ ಇಂಧನ ಮತ್ತು ಉನ್ನತ ಮಟ್ಟದ ಉತ್ಪಾದನೆಗೆ ಮುಖ್ಯವಾಗಿವೆ.
ಪ್ರಸ್ತಾಪಿತ ಕಾರಿಡಾರ್‌ಗಳಿಂದ ಗಣಿಗಾರಿಕೆ, ಪ್ರಕ್ರಿಯೆ ಮತ್ತು ದೇಶದೊಳಗೆ ರೇರ್ ಅರ್ತ್ ಖನಿಜಗಳ ಚಲಾವಣೆಗೆ ಸಂಘಟಿತ ಜಾಲವನ್ನು ರಚಿಸುವ ಉದ್ದೇಶ ಹೊಂದಿದೆ. ಖನಿಜ ಸಮೃದ್ಧ ರಾಜ್ಯಗಳನ್ನು ಸಂಪರ್ಕಿಸುವ ಮೂಲಕ ಸರ್ಕಾರವು ಪೂರೈಕೆ ಸರಪಳಿಯನ್ನು ಸುಧಾರಿಸಲು, ವೆಚ್ಚ ಕಡಿಮೆ ಮಾಡಲು ಮತ್ತು ದೇಶಿ ಉತ್ಪಾದನೆಗೆ ವೇಗ ನೀಡಲು ಬಯಸಿದೆ.
ನಾಲ್ಕು ರಾಜ್ಯಗಳನ್ನೇಕೆ ಆರಿಸಲಾಗಿದೆ?
ಒಡಿಶಾ, ಕೇರಳ, ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮುಖ್ಯವಾಗಿ ಕರಾವಳಿ ಮತ್ತು ಖನಿಜಗಳ ವಲಯದಲ್ಲಿ ರೇರ್ ಅರ್ತ್ ಖನಿಜಗಳನ್ನು ಹೊಂದಿವೆ. ಈ ರಾಜ್ಯಗಳಲ್ಲಿ ಬಂದರುಗಳು, ಕೈಗಾರಿಕಾ ವಲಯಗಳಿವೆ. ಮೂಲಸೌಕರ್ಯಗಳು ಅಸ್ತಿತ್ವದಲ್ಲಿವೆ. ಇವು ಪ್ರಕ್ರಿಯೆಗೊಳಿಸಲು ಮತ್ತು ಸಾಗಾಟಕ್ಕೆ ನೆರವಾಗುತ್ತವೆ. ಹೀಗಾಗಿ ಈ ಪ್ರದೇಶಗಳಿಗೆಂದೇ ಉದ್ದೇಶಿತ ನೆರವನ್ನು ನೀಡುವುದರಿಂದ ರೇರ್ ಅರ್ತ್ ಖನಿಜಗಳಿಗಾಗಿ ದೇಶಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಯೋಜಿಸಲಾಗಿದೆ.
ಬಜೆಟ್‌ನಲ್ಲಿ ಉದ್ದೇಶಿತ ವಿಸ್ತೃತ ಗುರಿಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಇಂಧನ ಭದ್ರತೆಯನ್ನು ಸುಧಾರಿಸಲು ದೇಶಿ ಉತ್ಪಾದನಾ ಸಾಮರ್ಥ್ಯವನ್ನು ಏರಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಭಾರತದ ಪ್ರಗತಿಯಲ್ಲಿ ಸ್ಥಿರವಾದ ಪ್ರಗತಿ, ನಿಯಂತ್ರಿತ ಹಣದುಬ್ಬರ, ಬೆಂಬಲಿತ ನೀತಿ ನಿರೂಪಣೆಗಳಿವೆ. ಹೀಗಾಗಿ ಮ್ಯಾಕ್ರೋಅರ್ಥವ್ಯವಸ್ಥೆಯನ್ನು ಸ್ಥಿರವಾಗಿ ನಿರ್ಧರಿಸಲು ಸಾಧ್ಯವಾಗಿದೆ.
“ಹೊಸ ತಂತ್ರಜ್ಞಾನಗಳು ಸರಕುಗಳನ್ನು ಉತ್ಪಾದಿಸುವ ವಿಧಾನವನ್ನು ಬದಲಾಯಿಸುತ್ತಿವೆ ಮತ್ತು ನಿರ್ಣಾಯಕ ಖನಿಜಗಳು ಮತ್ತು ನೀರಿನ ಬೇಡಿಕೆಯನ್ನು ಏರಿಸಿವೆ. ಹೀಗಾಗಿ ಸರಿಯಾದ ವ್ಯವಸ್ಥೆಗಳ ಬೆಂಬಲ ಸಿಕ್ಕರೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಬಲಪಡಿಸಬಹುದು” ಎಂದು ಅವರು ಹೇಳಿದ್ದಾರೆ.
ಭಾರತವು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕದಲ್ಲಿರಬೇಕು. ಆದರೆ ಆಮದು ಅವಲಂಬನೆ ಕಡಿಮೆಯಾಗಬೇಕು. ಸರ್ಕಾರವು ಕೌಟುಂಬಿಕ ಹಣಕಾಸು, ಕೃಷಿ ಮತ್ತು ಖರೀದಿ ಶಕ್ತಿಯನ್ನು ಸುಧಾರಿಸಲು ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.