ಸಾಂದರ್ಭಿಕ ಚಿತ್ರ  (AI-Generated) 

ಬ್ಯಾಂಕ್‌ಗಳು RBIನಿಂದ ಪಡೆದ ಸಾಲಕ್ಕೆ ಹೆಚ್ಚಿನ ಬಡ್ಡಿ ಮರುಪಾವತಿಸಬೇಕಾಗುತ್ತದೆ ಮತ್ತು ಆ ಹೊರೆಯ ಒಂದು ಭಾಗವನ್ನು ಬ್ಯಾಂಕ್‌ ಗಳು ತಮ್ಮ ಗ್ರಾಹಕರ ಮೇಲೆ ವರ್ಗಾಯಿಸುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸಿದಾಗ ಗ್ರಾಹಕರಿಂದ ತೊಡಗಿ ಉದ್ಯಮಗಳವರೆಗೆ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಬ್ಯಾಂಕ್‌ ಗಳು RBIನಿಂದ ಪಡೆದ ಸಾಲಕ್ಕೆ ಹೆಚ್ಚಿನ ಬಡ್ಡಿ ಮರುಪಾವತಿಸಬೇಕಾಗುತ್ತದೆ ಮತ್ತು ಆ ಹೊರೆಯ ಒಂದು ಭಾಗವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರ ಮೇಲೆ ವರ್ಗಾಯಿಸುತ್ತವೆ. ಇಂದು, RBI ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ ಗಳಷ್ಟು ಹೆಚ್ಚಿಸಿದೆ. ಒಂದು ಬೇಸಿಸ್ ಪಾಯಿಂಟ್ ಎಂದರೆ ಶೇಕಡಾವಾರು ಅಂಕದ ನೂರನೇ ಒಂದು ಭಾಗ.

ಗೃಹಸಾಲ ಪಡೆದವರಿಗೆ ಈ ದರ ಏರಿಕೆಯು ಸಾಲದ ಅವಧಿಯ ವಿಸ್ತರಣೆ ಅಥವಾ ಹೆಚ್ಚಿನ EMI ಮೊತ್ತಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ರೆಪೊ ದರದಂತಹ ಬಾಹ್ಯ ಮಾನದಂಡಗಳಿಗೆ ಲಿಂಕ್ ಮಾಡಲಾದ ಬದಲಾಗುವ ಬಡ್ಡಿದರ (floating-rate) ಸಾಲಗಳನ್ನು ಹೊಂದಿರುವವರಿಗೆ ಇದು ಅನ್ವಯಿಸುತ್ತದೆ. ಬಡ್ಡಿ ದರ ಪರಿಷ್ಕರಣಾ ಚಕ್ರಗಳು ಮತ್ತು ಬದಲಾವಣೆಗಳನ್ನು ಜಾರಿಗೆ ತರುವ ಸಮಯದ ಆಧಾರದ ಮೇಲೆ ಬ್ಯಾಂಕ್‌ಗಳು ಈ ಹೆಚ್ಚಳದ ಹೊರೆಯನ್ನು ಹಂತ ಹಂತವಾಗಿ ಗ್ರಾಹಕರಿಗೆ ವರ್ಗಾಯಿಸುವ ನಿರೀಕ್ಷೆಯಿದೆ.

“25 ಬೇಸಿಸ್ ಪಾಯಿಂಟ್‌ಗಳ ರೆಪೊ ದರ ಏರಿಕೆಯು ಜಾಗತಿಕ ಅನಿಶ್ಚಿತತೆಗಳ ನಡುವೆ, ಅಂದರೆ ವಿಶೇಷವಾಗಿ ಕಚ್ಚಾ ತೈಲ ಬೆಲೆಗಳ ಏರಿಳಿತ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹಣದುಬ್ಬರದ ಒತ್ತಡವನ್ನು ನಿರ್ವಹಿಸುವಲ್ಲಿ ಆರ್‌ಬಿಐನ ಗಮನವನ್ನು ಪ್ರತಿಬಿಂಬಿಸುತ್ತದೆ. ವಸತಿ ರಿಯಲ್ ಎಸ್ಟೇಟ್ ವಲಯದ ಮೇಲೆ ಇದರ ತಕ್ಷಣದ ಪರಿಣಾಮವು ಸಾಲ ಪಡೆಯುವ ವೆಚ್ಚದ ಮೂಲಕ ಉಂಟಾಗಲಿದೆಯಾದರೂ, ಇದರಿಂದ ಮೂಲ ಬೇಡಿಕೆಯು ಗಣನೀಯವಾಗಿ ಕುಸಿಯುತ್ತದೆ ಎಂದು ನಿರೀಕ್ಷಿಸುವುದಿಲ್ಲ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

25 ವರ್ಷಗಳ ಅವಧಿಯ 50 ಲಕ್ಷ ರೂ.ಗಳ ಗೃಹಸಾಲದ ಸಂದರ್ಭದಲ್ಲಿ ಬಡ್ಡಿ ದರದಲ್ಲಿನ 25 ಬೇಸಿಸ್ ಪಾಯಿಂಟ್‌ ಗಳ ಏರಿಕೆಯು ಮಾಸಿಕ EMI ಅನ್ನು ಸುಮಾರು 816 ರೂ.ಗಳಷ್ಟು ಹೆಚ್ಚಿಸಬಹುದು. ಸಾಲದ ಅವಧಿಯನ್ನು ಬದಲಿಸದೆ ಮುಂದುವರಿದರೆ ಒಟ್ಟು ಬಡ್ಡಿಯ ಹೊರೆ ಸುಮಾರು 2.45 ಲಕ್ಷ ರೂ.ಗಳಷ್ಟು ಏರಬಹುದು.

“25 ವರ್ಷಗಳ ಅವಧಿಗೆ ಶೇ 7.5ರ ಬಡ್ಡಿದರದಂತೆ ಲೆಕ್ಕ ಹಾಕಿದರೆ, 30 ಲಕ್ಷ ರೂ. ಸಾಲದ ಮೇಲೆ ಮಾಸಿಕ EMI ಸುಮಾರು 490 ರೂ., 40 ಲಕ್ಷ ರೂ. ಸಾಲದ ಮೇಲೆ 654 ರೂ. ಮತ್ತು 50 ಲಕ್ಷ ರೂ. ಸಾಲದ ಮೇಲೆ 816 ರೂ.ಗಳಷ್ಟು ಏರಬಹುದು. ಸಾಲದ ಸಂಪೂರ್ಣ ಅವಧಿಯಲ್ಲಿ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿಯು ಕ್ರಮವಾಗಿ ಸುಮಾರು 1.5 ಲಕ್ಷ ರೂ., 1.96 ಲಕ್ಷ ರೂ. ಮತ್ತು 2.45 ಲಕ್ಷ ರೂ.ಗಳಷ್ಟಾಗಲಿದೆ! ಅಲ್ಲದೆ, ಬಡ್ಡಿದರ ಕಡಿತದ ಸಾಧ್ಯತೆಯಿಲ್ಲ ಮತ್ತು ಮುಂದಿನ ಕ್ರಮವು ದರ ಏರಿಕೆ ಅಥವಾ ಯಥಾಸ್ಥಿತಿಯಾಗಿರಬಹುದು ಎಂದು RBI ಹೇಳಿರುವುದರಿಂದ ಸಾಲಗಾರರು ಕಡಿಮೆ EMI ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬಾರದು” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಸಾಲಗಾರರು 25 ಬೇಸಿಸ್ ಪಾಯಿಂಟ್ ದರ ಏರಿಕೆಯ ನಂತರವೂ ತಮ್ಮ EMI ಅನ್ನು 36,950 ರೂ.ಗಳಲ್ಲೇ ಮುಂದುವರಿಸಿದರೆ, ಸಾಲದ ಅವಧಿ ಸುಮಾರು 22 ತಿಂಗಳುಗಳಷ್ಟು ಹೆಚ್ಚಾಗಬಹುದು. ಇದರಿಂದ ಮರುಪಾವತಿ ಅವಧಿಯು 25 ವರ್ಷಗಳಿಂದ ಸುಮಾರು 27 ವರ್ಷಗಳಿಗೆ ವಿಸ್ತರಣೆಯಾಗಲಿದೆ.

ಫ್ಲೋಟಿಂಗ್ ರೇಟ್ ಸಾಲಗಾರರು ತಮ್ಮ ಸಾಲದ ಬಡ್ಡಿ ದರವು ಹೆಚ್ಚಿನ ಬೆಂಚ್‌ಮಾರ್ಕ್ ದರಕ್ಕೆ ಹೊಂದಿಸಿದಾಗ ಇದರ ಪರಿಣಾಮವನ್ನು ಅನುಭವಿಸುತ್ತಾರೆ. ಕೆಲವು ಸಾಲದಾತರು EMI ಹೆಚ್ಚಿಸುವ ಬದಲು ಸಾಲದ ಅವಧಿ ವಿಸ್ತರಿಸಲು ಸಾಲಗಾರರಿಗೆ ಅವಕಾಶ ನೀಡಬಹುದು. ಇದು ಮಾಸಿಕ ಹಣಕಾಸಿನ ಹರಿವಿನ ಮೇಲಿನ ತಕ್ಷಣದ ಒತ್ತಡವನ್ನು ಕಡಿಮೆ ಮಾಡಬಹುದು. ಸಾಲದ ಅವಧಿಯಲ್ಲಿ ಪಾವತಿಸಬೇಕಾದ ಒಟ್ಟು ಬಡ್ಡಿಯ ಮೊತ್ತವನ್ನು ಹೆಚ್ಚಿಸುತ್ತದೆ. ಮರುಪಾವತಿ ಅವಧಿಯನ್ನು ಬದಲಿಸದೆ ಉಳಿಸಿಕೊಳ್ಳಲು ಸಾಲಗಾರರು ತಮ್ಮ EMI ಹೆಚ್ಚಿಸುವ ಆಯ್ಕೆಯನ್ನೂ ಮಾಡಿಕೊಳ್ಳಬಹುದು.

ಸ್ಥಿರ ಬಡ್ಡಿದರದ ಗೃಹಸಾಲ ಗ್ರಾಹಕರಿಗೆ ತಕ್ಷಣದ ಬದಲಾವಣೆ ಕಂಡುಬರುವುದಿಲ್ಲ. ಆದರೆ ಈ ನೀತಿ ನಿರ್ಧಾರದ ನಂತರ ಮರುಹಣಕಾಸು ಮತ್ತು ಹೊಸ ಸಾಲಗಳ ಮೇಲಿನ ಬಡ್ಡಿ ದರಗಳು ಹೆಚ್ಚಾಗುವ ಸಾಧ್ಯತೆಯಿದೆ.

ತಜ್ಞರ ಪ್ರಕಾರ, ಹೆಚ್ಚಿದ ಬಡ್ಡಿ ವೆಚ್ಚವನ್ನು ನಿರ್ವಹಿಸಲು ಭಾಗಶಃ ಮುಂಗಡ ಪಾವತಿ, ಸಾಲದಾತರನ್ನು ಬದಲಿಸುವುದು ಅಥವಾ ಕಡಿಮೆ ಅವಧಿಯ ಸಾಲವನ್ನು ಆಯ್ಕೆ ಮಾಡಿಕೊಳ್ಳುವಂತಹ ಆಯ್ಕೆಗಳನ್ನು ಪರಿಗಣಿಸಬೇಕು. ಮುಂಬರುವ ನೀತಿ ಪರಿಶೀಲನೆಗಳಲ್ಲಿ RBI ಮತ್ತಷ್ಟು ಕಠಿಣ ಕ್ರಮಗಳ ಸೂಚನೆ ನೀಡುತ್ತದೆಯೇ ಅಥವಾ ಕಾದು ನೋಡುವ ಧೋರಣೆ ಅನುಸರಿಸುತ್ತದೆಯೇ ಎಂಬುದರ ಮೇಲೆ ಹೆಚ್ಚಿನ ವಿಷಯಗಳು ಅವಲಂಬಿತವಾಗಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor