100 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆ ಮಾಡಲು G7 ರಾಷ್ಟ್ರಗಳ ನಿರ್ಧಾರ: ಬೆಲೆ ಇಳಿಕೆಗೆ ಇದು ಕಾರಣವಾಗುತ್ತದೆಯೇ?
ಸಾಂದರ್ಭಿಕ ಚಿತ್ರ(AI)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಒತ್ತಡದ ಬಳಿಕ, ಜಾಗತಿಕವಾಗಿ ಗಗನಕ್ಕೇರುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಿಸಲು ಜಿ-7 (G7) ರಾಷ್ಟ್ರಗಳು ತಮ್ಮ ತುರ್ತು ನಿಧಿಯಿಂದ 100 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಮತ್ತು ಡೀಸೆಲ್ ಅನ್ನು ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿಗೊಂಡಿವೆ.
ಅಮೆರಿಕ ಮತ್ತು ಇಸ್ರೇಲ್ ದೇಶಗಳ ನಡುವೆ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ʼಅಲ್ ಜಝೀರಾʼ ಜೊತೆ ಮಾತನಾಡಿದ ಕ್ಯಾಪಿಟಲ್ ಎಕನಾಮಿಕ್ಸ್ ಸಂಸ್ಥೆಯ ಹವಾಮಾನ ಮತ್ತು ಸರಕು ಮಾರುಕಟ್ಟೆ ಅರ್ಥಶಾಸ್ತ್ರಜ್ಞ ಹಮದ್ ಹುಸೇನ್, "ಜಿ-7 ಸದಸ್ಯ ರಾಷ್ಟ್ರಗಳ ಈ ತುರ್ತು ತೈಲ ಬಿಡುಗಡೆಯು ಬೆಲೆ ಏರಿಕೆಯ ಮೇಲೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಲಿದೆ, ಮುಖ್ಯವಾಗಿ ಜಾಗತಿಕ ಡೀಸೆಲ್ ಬೆಲೆ ಇಳಿಯಬಹುದು. ಆದರೆ, ಇದು ಕೇವಲ ತಾತ್ಕಾಲಿಕ ಪರಿಹಾರವಾಗಿರುವುದರಿಂದ ಇದರ ಪ್ರಭಾವ ಅಲ್ಪಕಾಲಿಕ ಮಾತ್ರ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ತೈಲ ಬೆಲೆಯು ಗಗನಕ್ಕೇರಿದ್ದು, ಪ್ರತಿ ಬ್ಯಾರೆಲ್ ಗೆ 4 ಡಾಲರ್‌ಗೂ ಅಧಿಕ ಏರಿಕೆ ಕಂಡುಬಂದಿದೆ. ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ (AAA) ಮಾಹಿತಿಯ ಪ್ರಕಾರ, ಕಳೆದ ಶುಕ್ರವಾರ ಜಾಗತಿಕ ಡೀಸೆಲ್ ಬೆಲೆಯೂ ಸಾರ್ವಕಾಲಿಕ ದಾಖಲೆ ಬರೆದಿದ್ದು, ಒಂದು ಗ್ಯಾಲನ್ (3.79 ಲೀಟರ್) ಡೀಸೆಲ್ ಸರಾಸರಿ ಬೆಲೆ 6.50 ಡಾಲರ್ ತಲುಪಿದೆ. ಇದು ಹಿಂದಿನ ತಿಂಗಳು 5.61 ಡಾಲರ್ ಇತ್ತು.
ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿರುವ ಜಿ-7 ಗುಂಪು ಹಾಗೂ ಯುರೋಪಿಯನ್ ಒಕ್ಕೂಟವು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಮೊದಲ 20 ದಿನಗಳಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬಿಡುಗಡೆ ಮಾಡಲಾಗುವುದು" ಎಂದು ತಿಳಿಸಿದೆ. ಅಲ್ಲದೆ, ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ "ಮತ್ತಷ್ಟು ಡೀಸೆಲ್ ಬಿಡುಗಡೆ ಮಾಡುವ ಕುರಿತು" ಚರ್ಚೆ ನಡೆಸುವುದಾಗಿಯೂ ಹೇಳಿದೆ.
►G-7 ಘೋಷಿಸಿದ್ದೇನು?
ಶುಕ್ರವಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಎಲ್ ಮ್ಯಾಕ್ರಾನ್ ನೇತೃತ್ವದಲ್ಲಿ ನಡೆದ ಜಿ-7 ನಾಯಕರ ವಿಡಿಯೊ ಕಾನ್ಫರೆನ್ಸ್ ಬಳಿಕ, ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಈ ಗುಂಪು, “ಈಗಾಗಲೇ ಈಡೇರಿಸಿರುವ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಮೂಲಕ ಒಟ್ಟು 100 ಮಿಲಿಯನ್ ಬ್ಯಾರೆಲ್ ತೈಲವನ್ನು ಒಟ್ಟಾಗಿ ಬಿಡುಗಡೆ ಮಾಡುವ ನಮ್ಮ ತೀರ್ಮಾನವನ್ನು ಜಾರಿಗೆ ತರುತ್ತೇವೆ” ಎಂದು ತಿಳಿಸಿದೆ.
ಈ ವಾರಾಂತ್ಯದ ಆರಂಭದಲ್ಲಿ ಮಾತನಾಡಿದ್ದ ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಫತಿಹ್ ಬಿರೋಲ್, ಸದಸ್ಯ ರಾಷ್ಟ್ರಗಳು 400 ಮಿಲಿಯನ್ ಬ್ಯಾರೆಲ್ ಒಪ್ಪಂದದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಬಿಡುಗಡೆ ಮಾಡಿವೆ ಎಂದು ಹೇಳಿದ್ದರು.
ಈ ಇಂಧನ ಬಿಡುಗಡೆಯು ತಕ್ಷಣವೇ ಆರಂಭವಾಗಿ ನಾಲ್ಕು ತಿಂಗಳವರೆಗೆ ಮುಂದುವರಿಯಲಿದೆ ಮತ್ತು ಇದರಲ್ಲಿ ಮೊದಲ 20 ದಿನಗಳ ಕಾಲ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬಿಡುಗಡೆಯೂ ಸೇರಿದೆ. ಗುಂಪಿನ ಪ್ರತಿಯೊಂದು ಸದಸ್ಯ ರಾಷ್ಟ್ರವು ಎಷ್ಟು ಪ್ರಮಾಣದ ತೈಲ ಮತ್ತು ಡೀಸೆಲ್ ದಾಸ್ತಾನು ಬಿಡುಗಡೆ ಮಾಡಲಿದೆ ಎಂಬುದು ಸ್ಪಷ್ಟವಾಗಿಲ್ಲ.
“ಅಗತ್ಯವಿದ್ದರೆ ಹೆಚ್ಚುವರಿ ಡೀಸೆಲ್ ಬಿಡುಗಡೆ ಮಾಡುವ ಸಾಧ್ಯತೆ ಕುರಿತು ಚರ್ಚಿಸಲು ನಾವು ಮುಂದಿನ ದಿನಗಳಲ್ಲಿ ಐಇಎ ಅಡಿಯಲ್ಲಿ ಸಭೆ ಸೇರುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಏಕಕಾಲಕ್ಕೆ ರಿಫೈನರಿಗಳು ಸ್ಥಗಿತಗೊಳ್ಳುವುದನ್ನು ತಡೆಯಲು ನಾವು ಜಿ-7 ರಿಫೈನರಿಗಳ ನಡುವೆ ನಿರ್ವಹಣಾ ಕಾರ್ಯಗಳ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಮತ್ತು ಸಾಧ್ಯವಿರುವ ಕಡೆಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತೇವೆ” ಎಂದು ಹೇಳಿಕೆ ತಿಳಿಸಿದೆ.
ಅಲ್ಲದೆ, ಸದಸ್ಯ ರಾಷ್ಟ್ರಗಳು ತಮ್ಮಲ್ಲೇ ಪರಸ್ಪರ ಇಂಧನ ಉತ್ಪನ್ನಗಳ ರಫ್ತಿನ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಬಾರದೆಂದು ಜಿ-7 ಒತ್ತಾಯಿಸಿದೆ.
ಈ ವಾರಾಂತ್ಯದ ಆರಂಭದಲ್ಲಿ, ಟ್ರಂಪ್ ಆಡಳಿತವು ಅಮೆರಿಕದ ಡೀಸೆಲ್ ರಫ್ತಿನ ಮೇಲೆ ನಿಷೇಧ ಹೇರುವುದಾಗಿ ಬೆದರಿಕೆ ಹಾಕಿತ್ತು . ಅದೇ ವೇಳೆ ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ತಮ್ಮ ತುರ್ತು ಡೀಸೆಲ್ ದಾಸ್ತನನ್ನು ಬಿಡುಗಡೆ ಮಾಡುವಂತೆ ಯುರೋಪ್ ಮೇಲೂ ಒತ್ತಡ ಹೇರಿತ್ತು.
►ತೈಲ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲು ಕಾರಣವೇನು?
ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದಾಗಿ ಪರ್ಷಿಯನ್ ಕೊಲ್ಲಿಯಿಂದ ಇಂಧನ ರಫ್ತಿಗೆ ಅಡ್ಡಿಯಾಗಿದ್ದು, ಇದು ಜಾಗತಿಕ ಇಂಧನ ಬೆಲೆಗಳು ಗಗನಕ್ಕೇರಲು ಕಾರಣವಾಗಿದೆ. ಮತ್ತೊಂದೆಡೆ, ರಷ್ಯಾದ ಇಂಧನ ಸ್ಥಾವರಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದಾಳಿಯು ಜಾಗತಿಕ ಇಂಧನ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದೆ.
ಅಲ್ ಜಝೀರಾ ಜೊತೆ ಮಾತನಾಡಿದ ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ತೈಲ ಉದ್ಯಮ ಮತ್ತು ಮಾರುಕಟ್ಟೆ ವಿಭಾಗದ ಮಾಜಿ ಮುಖ್ಯಸ್ಥ ನೀಲ್ ಅಟ್ಕಿನ್ಸನ್ , ಜಾಗತಿಕ ಡೀಸೆಲ್ ಪೂರೈಕೆ ಕುಸಿತಕ್ಕೆ ಪ್ರಮುಖ ಮೂರು ಕಾರಣಗಳಿವೆ ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ, “ಮಧ್ಯಪ್ರಾಚ್ಯದಿಂದ ಯುರೋಪ್‌ಗೆ ಡೀಸೆಲ್ ಪೂರೈಕೆಯಾಗುತ್ತಿಲ್ಲ, ಆದರೆ ಯುರೋಪ್ ಸೌದಿ ಅರೇಬಿಯಾ ಮತ್ತು ಕುವೈತ್‌ನಿಂದ ಸಾಕಷ್ಟು ಪ್ರಮಾಣದಲ್ಲಿ ಡೀಸೆಲ್ ಪಡೆಯುತ್ತಿತ್ತು.”
ಎರಡನೆಯದಾಗಿ, “ಉಕ್ರೇನ್ ರಷ್ಯಾದ ರಿಫೈನರಿಗಳ ಮೇಲೆ ದಾಳಿ ಮಾಡುತ್ತಿರುವ ಕಾರಣ, ರಷ್ಯಾ ಈಗ ಸಂಪೂರ್ಣವಾಗಿ ಡೀಸೆಲ್ ರಫ್ತನ್ನು ನಿಲ್ಲಿಸಿದೆ. ಚೀನಾ ಕೂಡ ಈಗ ಡೀಸೆಲ್ ರಫ್ತು ಮಾಡುತ್ತಿಲ್ಲ” ಎಂದು ಅವರು ಹೇಳಿದರು.
“ಕೃಷಿ ಉತ್ಪನ್ನಗಳ ಕಟಾವಿನ ಹಂಗಾಮು ನಡೆಯುತ್ತಿರುವುದರಿಂದ ಬೇಡಿಕೆ ಈಗಲೂ ತುಸು ಹೆಚ್ಚಾಗಿಯೇ ಇದೆ ಮತ್ತು ಮುಂದೆಯೂ ಹಾಗೆಯೇ ಉಳಿಯುವ ನಿರೀಕ್ಷೆಯಿದೆ.”
ಜಾಯಿಂಟ್ ಆರ್ಗನೈಸೇಷನ್ಸ್ ಡೇಟಾ ಇನಿಷಿಯೇಟಿವ್ (JODI) ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆ (OPEC) ನೀಡಿರುವ ಮಾಹಿತಿಯ ಪ್ರಕಾರ, ಅಮೆರಿಕವು ವಿಶ್ವದಲ್ಲೇ ಅತ್ಯಧಿಕ ಡೀಸೆಲ್ ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶವಾಗಿದೆ. ಇದು ಸುಮಾರು 240.5 ಮಿಲಿಯನ್ ಟನ್ ಡೀಸೆಲ್ ಉತ್ಪಾದಿಸುತ್ತದೆ ಮತ್ತು ಪ್ರತಿದಿನ ಸುಮಾರು 1.26 ಮಿಲಿಯನ್ ಬ್ಯಾರೆಲ್ ಡೀಸೆಲ್ ರಫ್ತು ಮಾಡುತ್ತದೆ.
ರಷ್ಯಾ ವಿಶ್ವದ ಎರಡನೇ ಅತಿ ದೊಡ್ಡ ಡೀಸೆಲ್ ರಫ್ತುದಾರ ದೇಶವಾಗಿದ್ದು, ಜಾಗತಿಕ ಮಾರುಕಟ್ಟೆಗೆ ಪ್ರತಿದಿನ 783,400 ಬ್ಯಾರೆಲ್ ಡೀಸೆಲ್ ಪೂರೈಸುತ್ತದೆ. ಸೌದಿ ಅರೇಬಿಯಾ ವಿಶ್ವದ ಎರಡನೇ ಅತಿ ದೊಡ್ಡ ಡೀಸೆಲ್ ಉತ್ಪಾದಕ ದೇಶವಾಗಿದ್ದು (58.4 ಮಿಲಿಯನ್ ಟನ್), ಆದರೆ ಅದು ತನ್ನ ಡೀಸೆಲ್‌ನ ಹೆಚ್ಚಿನ ಭಾಗವನ್ನು ದೇಶೀಯ ಬಳಕೆಗೆ ಬಳಸಿಕೊಳ್ಳುತ್ತದೆ.
►ಜಿ-7 ಇಂಧನ ಬಿಡುಗಡೆಯಾದರೆ ಬೆಲೆ ಇಳಿಕೆ ಆಗಲಿದೆಯೇ ?
ಜಿ-7 ಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದ ಫ್ರೆಂಚ್ ಅಧ್ಯಕ್ಷ ಎಮ್ಯಾನುಎಲ್ ಮ್ಯಾಕ್ರಾನ್, ತೈಲ ಬಿಡುಗಡೆ ಮಾಡುವ ಗುಂಪಿನ ಈ ನಿರ್ಧಾರವು “ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು, ವಿಶೇಷವಾಗಿ ಡೀಸೆಲ್ ಬೆಲೆಯನ್ನು ತಗ್ಗಿಸಲಿದೆ” ಎಂದು ಹೇಳಿದ್ದಾರೆ.
ಜಿ-7 ಘೋಷಣೆಯ ಬಳಿಕ ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಗೆ ಕುಸಿದಿತ್ತು, ಆದರೆ ಸಂಜೆಯ ವೇಳೆಗೆ ಅದು ಸುಮಾರು 102 ಡಾಲರ್‌ಗೆ ಏರಿಕೆಯಾಯಿತು.
ಝಾಯೆ ಕ್ಯಾಪಿಟಲ್ ಮಾರ್ಕೆಟ್ಸ್‌ನ ಮುಖ್ಯ ಹೂಡಿಕೆ ಅಧಿಕಾರಿ ನಯೀಮ್ ಅಸ್ಲಮ್ ಅಲ್ ಜಝೀರಾ ಜೊತೆ ಮಾತನಾಡಿ, ಜಿ-7 ನ ಇಂಧನ ಬಿಡುಗಡೆಯು ತುಂಬಾ ಅಗತ್ಯವಾಗಿತ್ತು. ಆದರೆ ಇಂಧನ ಮಾರುಕಟ್ಟೆಯ ಮೇಲಿನ ಒತ್ತಡವನ್ನು ತಗ್ಗಿಸಲು ಮಾತ್ರ ಈ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
“ಯಾರು ಇಂಧನ ದಾಸ್ತಾನು ಬಿಡುಗಡೆ ಮಾಡುತ್ತಾರೆ, ಯಾವುದು ಮತ್ತು ಎಲ್ಲಿ ನಿಷೇಧಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ನಿಜವಾದ ರಚನಾತ್ಮಕ ಬದಲಾವಣೆಗಳು ಮಾರುಕಟ್ಟೆಯ ದೃಷ್ಟಿಯಿಂದ ಪ್ರಮುಖ ಅಂಶಗಳಾಗಿವೆ” ಎಂದು ಅವರು ಹೇಳಿದ್ದಾರೆ.
ಇಂಧನ ತಜ್ಞ ಅಟ್ಕಿನ್ಸನ್ ಮಾತನಾಡಿ, ಜಿ-7 ನ ಈ ಇಂಧನ ಬಿಡುಗಡೆಯು ಸ್ವಾಗತಾರ್ಹವಾದರೂ, “ಜಾಗತಿಕ ಪೂರೈಕೆಯು ಸಾಮಾನ್ಯಕ್ಕಿಂತ ಕಡಿಮೆಯಿರುವ ಮೂಲಭೂತ ಸಮಸ್ಯೆಯನ್ನು ಇದು ಬಗೆಹರಿಸುವುದಿಲ್ಲ” ಎಂದಿದ್ದಾರೆ.
“ಮಧ್ಯಪ್ರಾಚ್ಯದಲ್ಲಿ ಈ ಯುದ್ಧ ಪ್ರಾರಂಭವಾಗಿ ಏಳು ತಿಂಗಳಾಗಿದ್ದರೂ, ಕಚ್ಚಾ ತೈಲ ಅಥವಾ ಉತ್ಪನ್ನಗಳ ಜಾಗತಿಕ ಪೂರೈಕೆಯು ಯುದ್ಧಪೂರ್ವದ ಮಟ್ಟಕ್ಕಿಂತ ಗಮನಾರ್ಹವಾಗಿ ಕಡಿಮೆಯಿರುವ ಪರಿಸ್ಥಿತಿಯಲ್ಲೇ ನಾವಿದ್ದೇವೆ” ಎಂದು ಅಟ್ಕಿನ್ಸನ್ ಹೇಳಿರುವುದಾಗಿ ಅಲ್ ಜಝೀರಾ ಉಲ್ಲೇಖಿಸಿದೆ.
“ನಾವು ಈಗ ಉತ್ಪನ್ನಗಳ ಅಂತಿಮ ಬಳಕೆಯ ಮೇಲೆ, ಮುಖ್ಯವಾಗಿ ಇಲ್ಲಿ ನಾವು ಮಾತನಾಡುತ್ತಿರುವ ಡೀಸೆಲ್ ಮೇಲೆ ಗಮನ ಕೇಂದ್ರೀಕರಿಸುವ ಪರಿಸ್ಥಿತಿಯಲ್ಲಿದ್ದೇವೆ” ಎಂದಿದ್ದಾರೆ ಅವರು.
►ಟ್ರಂಪ್ ಹೇಳಿದ್ದೇನು?
ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯು ಮುಂಬರುವ ನವೆಂಬರ್ ಮಧ್ಯಂತರ ಚುನಾವಣೆಯಲ್ಲಿ ತಮ್ಮ ಮತಗಳಿಗೆ ಕುತ್ತು ತರಬಹುದು ಎಂದು ಆತಂಕಗೊಂಡಿರುವ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಮತ್ತು ರಿಪಬ್ಲಿಕನ್ ಪಕ್ಷದವರಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಕಳೆದ ವಾರ, ಯುದ್ಧದ ನಡುವೆ ರಷ್ಯಾದ ಡೀಸೆಲ್ ಸ್ಥಾವರಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವಂತೆ ಟ್ರಂಪ್ ಉಕ್ರೇನ್ ಮೇಲೆ ಒತ್ತಡ ಹೇರಿದ್ದರು.
ನಂತರ ಗುರುವಾರ, ತುರ್ತು ಡೀಸೆಲ್ ದಾಸ್ತನನ್ನು “ತಕ್ಷಣವೇ” ಬಳಸಿಕೊಳ್ಳುವಂತೆ ಯುರೋಪ್ ದೇಶಗಳಿಗೆ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಒತ್ತಾಯಿಸಿದ ಬೆನ್ನಲ್ಲೇ, ಯುರೋಪಿಯನ್ ದೇಶಗಳು ಡೀಸೆಲ್ ದಾಸ್ತಾನು ಬಿಡುಗಡೆ ಮಾಡುವಂತೆ ತಮ್ಮ ಆಡಳಿತವು “ಕೇಳಬಹುದು” ಎಂದು ಅಮೆರಿಕ ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದ್ದರು.
ಯುರೋಪ್ ತುರ್ತು ಡೀಸೆಲ್ ದಾಸ್ತಾನು ಬಿಡುಗಡೆ ಮಾಡದಿದ್ದರೆ ಅಮೆರಿಕದ ಡೀಸೆಲ್ ರಫ್ತಿನ ಮೇಲೆ ನಿಷೇಧ ಹೇರುವುದಾಗಿಯೂ ಟ್ರಂಪ್ ಬೆದರಿಕೆ ಹಾಕಿದ್ದರು.
ಆದರೆ ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ವಾಷಿಂಗ್ಟನ್ ಯಾವುದೇ ಡೀಸೆಲ್ ರಫ್ತು ನಿಷೇಧವನ್ನು ಹೇರುವುದಿಲ್ಲ ಎಂದು ಹೇಳಿದರು. ಈ ಯೋಜನೆ ವಾಸ್ತವವಾಗಿ ಎಂದಿಗೂ ಪರಿಗಣನೆಯಲ್ಲಿರಲಿಲ್ಲ ಎಂದಿದ್ದಾರೆ ಅವರು.
“ಯುರೋಪ್ ಸಾಕಷ್ಟು ಡೀಸೆಲ್ ಹೊಂದಿದೆ ಮತ್ತು ಅವರು ದೊಡ್ಡ ಜಾಗತಿಕ ಕೊಡುಗೆ ನೀಡಲಿದ್ದಾರೆ, ನಾವೂ ಕೂಡ ಹಾಗೆಯೇ ಮಾಡುತ್ತೇವೆ. ನಾವು ರಫ್ತು ನಿಷೇಧವನ್ನು ಮಾಡುವುದಿಲ್ಲ. ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
“ಟ್ರಂಪ್ ಅವರು 6 ಡಾಲರ್‌ಗಿಂತ ಹೆಚ್ಚಿನ ಡೀಸೆಲ್ ಬೆಲೆಗೆ ಕಂಗಾಲಾಗಿದ್ದಾರೆ. ಇದು ಅವರು ಯುದ್ಧ ಆರಂಭಿಸುವುದಕ್ಕಿಂತ ಮುಂಚಿನ ಬೆಲೆಗೆ ಹೋಲಿಸಿದರೆ ಶೇಕಡಾ 70 ರಷ್ಟು ಏರಿಕೆಯಾಗಿದೆ. 1982 ರಲ್ಲಿ ದಾಖಲೆಗಳು ಆರಂಭವಾದಾಗಿನಿಂದಲೂ ಅಮೆರಿಕದ ಡೀಸೆಲ್ ದಾಸ್ತಾನು ಅತ್ಯಂತ ಕನಿಷ್ಠ ಮಟ್ಟದಲ್ಲಿರುವುದರಿಂದ ಇದು ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.”
“ಹಾಗಾಗಿ ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಸಾಕಷ್ಟು ಡೀಸೆಲ್ ಉತ್ಪಾದನೆಯಾಗದಿದ್ದರೆ ಮತ್ತು ಡೀಸೆಲ್ ಮೀಸಲು ನಿಧಿಯು ಖಾಲಿಯಾಗಿದ್ದರೆ, ಅಮೆರಿಕದ ಮಾರುಕಟ್ಟೆಗೆ ಹೆಚ್ಚಿನ ಡೀಸೆಲ್ ತರಲು ಇರುವ ಏಕೈಕ ಮಾರ್ಗವೆಂದರೆ ಕಡಿಮೆ ರಫ್ತು ಮಾಡುವುದು” ಎಂದು ಮಿಡಲ್ ಈಸ್ಟ್ ಕೌನ್ಸಿಲ್ ಆನ್ ಗ್ಲೋಬಲ್ ಅಫೇರ್ಸ್‌ನ ಹಿರಿಯ ಸಂಶೋಧಕ ಫ್ರೆಡೆರಿಕ್ ಶ್ನೀಡರ್ ಹೇಳಿರುವುದಾಗಿ ಅಲ್ ಜಝೀರಾ ವರದಿ ಉಲ್ಲೇಖಿಸಿದೆ.
ಜಿ-7 ಘೋಷಣೆಯ ನಂತರ, ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ, “ಯುರೋಪ್ ತನ್ನಲ್ಲಿರುವ ಅಪಾರ ಪ್ರಮಾಣದ ಡೀಸೆಲ್ ತೈಲವನ್ನು ಬಿಡುಗಡೆ ಮಾಡಲು ಈಗಷ್ಟೇ ಒಪ್ಪಿಗೆ ಸೂಚಿಸಿದೆ. ಈ ಪ್ರಕ್ರಿಯೆಯು ತಕ್ಷಣವೇ ಆರಂಭವಾಗಲಿದೆ.” ಎಂದು ಬರೆದಿದ್ದಾರೆ.
ದಾಖಲೆ ಮಟ್ಟದಲ್ಲಿರುವ ಅಮೆರಿಕದ ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ಶ್ವೇತಭವನವು ಕಾರ್ಯನಿರ್ವಾಹಕ ಆದೇಶವೊಂದನ್ನು ಸಿದ್ಧಪಡಿಸುತ್ತಿದ್ದು, ಮುಂದಿನ ವಾರವೇ ಇದು ಹೊರಬರುವ ಸಾಧ್ಯತೆಯಿದೆ ಎಂದು ಈ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಇಬ್ಬರು ವ್ಯಕ್ತಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಡೀಸೆಲ್ ಮತ್ತು ಗ್ಯಾಸೋಲಿನ್ ಆರ್ಥಿಕತೆಗೆ ಅತ್ಯಂತ ಮುಖ್ಯವಾಗಿದ್ದು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದರಿಂದ, ಅಧಿಕ ಇಂಧನ ಬೆಲೆಯ ಬಗ್ಗೆಯೂ ದೇಶಗಳು ಕಳವಳ ವ್ಯಕ್ತಪಡಿಸಿವೆ ಎಂದು ಶ್ನೀಡರ್ ಹೇಳಿದ್ದಾರೆ.
“ಗ್ಯಾಸೋಲಿನ್ ಕಾರುಗಳಿಗೆ ಇಂಧನ ಒದಗಿಸಿದರೆ, ಡೀಸೆಲ್ ಟ್ರಕ್‌ಗಳು, ಸರಕು ರೈಲುಗಳು, ಹಡಗುಗಳು, ಟ್ರ್ಯಾಕ್ಟರ್‌ಗಳು, ಕೊಯ್ಲು ಯಂತ್ರಗಳು, ನಿರ್ಮಾಣ ಯಂತ್ರೋಪಕರಣಗಳು, ಗಣಿಗಾರಿಕೆ ಉಪಕರಣಗಳು ಮತ್ತು ಬ್ಯಾಕಪ್ ಜನರೇಟರ್‌ಗಳವರೆಗೆ ಎಲ್ಲದಕ್ಕೂ ಇಂಧನ ಒದಗಿಸುತ್ತದೆ. ಇದರರ್ಥ ಗ್ಯಾಸೋಲಿನ್ ಅನ್ನು ಗ್ರಾಹಕರು ಹೆಚ್ಚು ಬಳಸುತ್ತಾರೆ. ಆದರೆ ಡೀಸೆಲ್ ಅನ್ನು ಹೆಚ್ಚಾಗಿ ಉತ್ಪಾದಕರು ಬಳಸುತ್ತಾರೆ. ಅಂದರೆ ಡೀಸೆಲ್ ಬೆಲೆ ಏರಿಕೆಯ ಆಘಾತವು ಇತರೆ ಎಲ್ಲದರ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಆಹಾರ ಪದಾರ್ಥಗಳು, ಕಟ್ಟಡ ಸಾಮಗ್ರಿಗಳು ಮತ್ತು ಟ್ರಕ್ ಮೂಲಕ ಸಾಗಿಸುವ ಪ್ರತಿಯೊಂದು ವಸ್ತುವಿನ ಮೇಲೂ ಇದು ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.
ಹೋರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಡೀಸೆಲ್ ಬೆಲೆ ಮತ್ತು ರಸಗೊಬ್ಬರ ಬೆಲೆ ಎರಡೂ ಏಕಕಾಲದಲ್ಲಿ ಹೆಚ್ಚಾಗುತ್ತಿರುವುದರಿಂದ ರೈತರಿಗೆ ಇದು ಎರಡು ರೀತಿಯ ಹೊಡೆತ ನೀಡಿದೆ.
“ಆದ್ದರಿಂದ ಅಧಿಕ ಡೀಸೆಲ್ ಬೆಲೆಯು ಉತ್ಪಾದನೆ ಮತ್ತು ಸಾಗಣೆಯ ಮೇಲಿನ ತೆರಿಗೆಯಂತೆ ವರ್ತಿಸಿದರೆ, ಅಧಿಕ ಗ್ಯಾಸೋಲಿನ್ ಬೆಲೆಯು ನೇರವಾಗಿ ಗ್ರಾಹಕರ ಮೇಲಿನ ತೆರಿಗೆಯಂತೆ ವರ್ತಿಸುತ್ತದೆ. ಹೆಚ್ಚಿನ ಗ್ಯಾಸೋಲಿನ್ ಬೆಲೆಗಳಂತೆ, ಹೆಚ್ಚಿನ ಡೀಸೆಲ್ ಬೆಲೆಗಳು ಹಣದುಬ್ಬರವನ್ನು ಹೆಚ್ಚಿಸುವ ಮೂಲಕ ಮತ್ತು ಅದೇ ಸಮಯದಲ್ಲಿ ಸಾರಿಗೆ ಮತ್ತು ಕೃಷಿಯಲ್ಲಿ ಲಾಭವನ್ನು ಕುಗ್ಗಿಸುವ ಮೂಲಕ ನಿಶ್ಚಲತೆಯನ್ನು ಉಂಟುಮಾಡುವ ಅಪಾಯವನ್ನು ತಂದಿಡುತ್ತವೆ. ಇದರಿಂದಾಗಿ ಉತ್ಪಾದಕರಿಗೆ ಸಹಾಯ ಮಾಡಲು ಬಡ್ಡಿ ದರಗಳನ್ನು ಕಡಿತಗೊಳಿಸುವುದು ಮತ್ತು ಹಣದುಬ್ಬರವನ್ನು ತಗ್ಗಿಸಲು ಬಡ್ಡಿ ದರಗಳನ್ನು ಹೆಚ್ಚಿಸುವುದು - ಈ ಎರಡರ ನಡುವೆ ಕೇಂದ್ರ ಬ್ಯಾಂಕ್‌ಗಳು ಗೊಂದಲಕ್ಕೀಡಾಗುವಂತಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಕೃಪೆ: aljazeera.com