ಉತ್ತರ ಪ್ರದೇಶದ ಮತದಾರರ ಪಟ್ಟಿಗೆ 16.18 ಲಕ್ಷ ನಿಗೂಢ ಮತದಾರರು ಸೇರ್ಪಡೆ: reporters-collective.in ವರದಿ
ಸಾಂದರ್ಭಿಕ ಚಿತ್ರ (AI)
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಆರಂಭಿಕ ಹಂತದಲ್ಲಿ ಉತ್ತರ ಪ್ರದೇಶದ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ಹೇಳಿಕೊಂಡಿರುವ 16.18 ಲಕ್ಷ ಮತದಾರರ ವಿವರಗಳನ್ನು ಆಯೋಗವು ಮುಚ್ಚಿಟ್ಟು, ಕಾನೂನನ್ನು ಉಲ್ಲಂಘಿಸಿದೆ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್' ನ ಆಯುಷಿ ಕೌಲ್ ಮತ್ತು ಸುಮೇಧಾ ಮಿತ್ತಲ್ ವರದಿ ಮಾಡಿದ್ದಾರೆ.
ರಾಜ್ಯವಾರು ಹಕ್ಕುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು “ಫೋಟೋ ಇಲ್ಲದೆ ವೈಯಕ್ತಿಕ ಅರ್ಜಿ ನಮೂನೆಯ ವಿವರಗಳೊಂದಿಗೆ” ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಕಾನೂನು ಕಡ್ಡಾಯಗೊಳಿಸುತ್ತದೆ.
ಆದರೆ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯ ವೆಬ್‌ಸೈಟ್‌ನಲ್ಲಿ ಈ 16.18 ಲಕ್ಷ ಮತದಾರರ ಸೇರ್ಪಡೆಯ ಅರ್ಜಿಗಳ ಪಟ್ಟಿ ಮತ್ತು ವಿವರಗಳು ಲಭ್ಯವಿಲ್ಲ.
ರಾಜ್ಯದ ಎಲ್ಲಾ ಚುನಾವಣಾ ಕಾರ್ಯಗಳ ಉಸ್ತುವಾರಿ ಹೊಂದಿರುವ ಮತ್ತು ದಿಲ್ಲಿಯಲ್ಲಿರುವ ಚುನಾವಣಾ ಆಯೋಗಕ್ಕೆ ನೇರವಾಗಿ ವರದಿ ಮಾಡುವ ಅತ್ಯುನ್ನತ ಅಧಿಕಾರಿಯೇ ಸಿಇಒ.
ಚುನಾವಣೆಗಳು ಸಮೀಪಿಸುತ್ತಿರುವ ದೇಶದ ಅತ್ಯಂತ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿಶ್ಲೇಷಿಸುವಾಗ 'ದಿ ರಿಪೋರ್ಟರ್ಸ್ ಕಲೆಕ್ಟಿವ್' ಈ ಕಾನೂನು ಉಲ್ಲಂಘನೆಯನ್ನು ಪತ್ತೆ ಹಚ್ಚಿದೆ.
ಎಸ್‌ಐಆರ್ ವೇಳೆ ಚುನಾವಣಾ ಆಯೋಗ ಸಿದ್ಧಪಡಿಸಿದ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕಾರಣದಿಂದ ಅಥವಾ ಮತದಾರರ ವಯಸ್ಸಿಗೆ ಬಂದ ಕಾರಣದಿಂದ ಎಷ್ಟು ಜನರು ಮತದಾರರ ಪಟ್ಟಿಗೆ ಮರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ʼದಿ ರಿಪೋರ್ಟರ್ಸ್ ಕಲೆಕ್ಟಿವ್ʼ ಪರಿಶೀಲಿಸಿದೆ.
ಈ ಅರ್ಜಿಗಳ ವಿರುದ್ಧ, ಅಂತಿಮ ಮತದಾರರ ಪಟ್ಟಿಗೆ ವಾಸ್ತವವಾಗಿ ಎಷ್ಟು ಜನರನ್ನು ಸೇರಿಸಲಾಗಿದೆ ಎಂಬುದನ್ನು ಹೋಲಿಸಿ ನೋಡಿದಾಗ ಅಚ್ಚರಿಯ ಫಲಿತಾಂಶ ಕಂಡುಬಂದಿದೆ.
ಸ್ವತಂತ್ರ ತಂತ್ರಜ್ಞಾನ ತಜ್ಞರ ಸಹಾಯದಿಂದ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯು ಸಾರ್ವಜನಿಕವಾಗಿ ಲಭ್ಯಪಡಿಸಿದ ಎಲ್ಲಾ ಫಾರ್ಮ್ 6 ಅರ್ಜಿಗಳನ್ನು ಪ್ರತ್ಯೇಕ ರೂಪದಲ್ಲಿ ಡೌನ್‌ಲೋಡ್ ಮಾಡಿ, ಸಂಗ್ರಹಿಸಿ ಮತ್ತು ವಿಶ್ಲೇಷಿಸಲಾಯಿತು. ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಸಾರ್ವಜನಿಕರು ಸಲ್ಲಿಸಿದ್ದ 71.38 ಲಕ್ಷ ಅರ್ಜಿಗಳ ವಿವರಗಳನ್ನು ಚುನಾವಣಾ ಆಯೋಗವು ಪ್ರದರ್ಶಿಸಿದೆ ಎಂದು ಇದರಿಂದ ತಿಳಿದುಬಂತು. ಇವರಲ್ಲಿ ಹೆಚ್ಚಿನವರು ಕರಡು ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟವರಾಗಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಚುನಾವಣಾ ಆಯೋಗವು ಅಂತಿಮ ಪಟ್ಟಿಗೆ 84.3 ಲಕ್ಷ ಮತದಾರರನ್ನು ಸೇರಿಸಿದೆ. ಅಂದರೆ, ಅರ್ಜಿ ಸಲ್ಲಿಸಿದವರ ಮತ್ತು ಚುನಾವಣಾ ಆಯೋಗವು ವಿವರಗಳನ್ನು ಪ್ರಕಟಿಸಿದವರಿಗಿಂತ ಹೆಚ್ಚಾಗಿ 12.92 ಲಕ್ಷ ಮತದಾರರನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
ಇದು ಕಾನೂನುಬದ್ಧವಾಗಿ ಅಸಾಧ್ಯವಾದದ್ದು. ಫಾರ್ಮ್-6 ರ ಮೂಲಕ ಅರ್ಜಿ ಸಲ್ಲಿಸಿದರೆ ಮಾತ್ರ ಚುನಾವಣಾ ಆಯೋಗವು ಮತದಾರರನ್ನು ಪಟ್ಟಿಗೆ ಸೇರಿಸಲು ಸಾಧ್ಯ. ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದವರಿಗಿಂತ ಮತದಾರರ ಪಟ್ಟಿಗೆ ಸೇರಿಸಲಾದವರ ಸಂಖ್ಯೆ ಹೆಚ್ಚಿರಲು ಸಾಧ್ಯವಿಲ್ಲ.
ಕರಡು ಪಟ್ಟಿಯಿಂದ ಮತದಾರರನ್ನು ಕೈಬಿಡುವಂತೆ ಕೋರಿ ಕೆಲವು ಲಕ್ಷ ಅರ್ಜಿಗಳನ್ನು ಕೂಡ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂಬುದನ್ನು ಪರಿಗಣಿಸಿದರೆ, ಈ ರೀತಿಯ ಹೆಚ್ಚುವರಿ ಮತದಾರರ ಪಟ್ಟಿ ಸೇರ್ಪಡೆಯು ನಂಬಲಸಾಧ್ಯವೆನಿಸುತ್ತದೆ.
ಈ ಕಾನೂನುಬಾಹಿರ ಹಾಗೂ ಅಸಾಧ್ಯವಾದ ಗೊಂದಲವನ್ನು ಬಗೆಹರಿಸಲು ಎಸ್‌ಐಆರ್ ಗೆ ಸಂಬಂಧಿಸಿದ ಎಲ್ಲಾ ಡೇಟಾ ಮತ್ತು ಅದರ ಎಲ್ಲಾ ಪತ್ರಿಕಾ ಪ್ರಕಟಣೆಗಳಿಗಾಗಿ ಚುನಾವಣಾ ಆಯೋಗದ ಉತ್ತರ ಪ್ರದೇಶದ ಸಿಇಒ ವೆಬ್‌ಸೈಟ್ ಅನ್ನು ಪರಿಶೀಲಿಸಲಾಯಿತು.
ಹೀಗೆ ಪರಿಶೀಲಿಸಿದಾಗ ಮಾರ್ಚ್ 7 ರಂದು ನೀಡಿದ ಪತ್ರಿಕಾ ಪ್ರಕಟಣೆಯೊಂದರಲ್ಲಿ, ಕರಡು ಪಟ್ಟಿ ಸಿದ್ಧಗೊಳ್ಳುವ ಮುನ್ನವೇ 16.18 ಲಕ್ಷ ಮತದಾರರು ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದರು ಎಂದು ಚುನಾವಣಾ ಆಯೋಗವು ಒಮ್ಮೆ ಮಾತ್ರ ಉಲ್ಲೇಖಿಸಿದೆ.
ಎಸ್‌ಐಆರ್ ಅಡಿಯಲ್ಲಿ ಕರಡು ಪಟ್ಟಿ ಸಿದ್ಧಗೊಂಡಾಗ ಮಾತ್ರ ತಮ್ಮ ಹೆಸರನ್ನು ಕೈಬಿಡಲಾಗಿದೆ, ಕಾಣೆಯಾಗಿದ್ದಾರೆ ಎಂದು ಘೋಷಿಸಲಾಗಿದೆ, ಮೃತಪಟ್ಟಿದ್ದಾರೆ, ಸ್ಥಳಾಂತರಗೊಂಡಿದ್ದಾರೆ ಅಥವಾ ನಕಲಿ ಎಂದು ಗುರುತಿಸಲಾಗಿದೆ ಎಂಬುದು ಜನರಿಗೆ ತಿಳಿದುಬರುತ್ತದೆ. ಆದರೆ, ಈ ಕರಡು ಪಟ್ಟಿಯನ್ನು ಸಾರ್ವಜನಿಕಗೊಳಿಸುವ ಮುನ್ನವೇ 16.18 ಲಕ್ಷ ಮತದಾರರು ಫಾರ್ಮ್-6 ರ ಮೂಲಕ ಅರ್ಜಿ ಸಲ್ಲಿಸಿದ್ದರು ಎಂದು ಚುನಾವಣಾ ಆಯೋಗ ಹೇಳಿದೆ.
ಈ ಹಂತದಲ್ಲಿ ಅರ್ಜಿ ಸಲ್ಲಿಸುವ ಏಕೈಕ ವ್ಯಕ್ತಿಗಳೆಂದರೆ ಮತದಾನದ ವಯಸ್ಸಿಗೆ ಬಂದಿರುವ ನಾಗರಿಕರು ಮಾತ್ರ.
ಕಾಯ್ದೆಯ ಪ್ರಕಾರ, ಹೆಸರುಗಳು ಕಾನೂನುಬದ್ಧವಾಗಿವೆಯೇ ಮತ್ತು ಅವುಗಳನ್ನು ಹೇಗೆ ವಿಲೇವಾರಿ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲು, ಸೇರ್ಪಡೆ ಅಥವಾ ತೆಗೆದುಹಾಕಲು ಅರ್ಜಿ ಸಲ್ಲಿಸುವವರ ಹೆಸರುಗಳು ಮತ್ತು ವಿವರಗಳನ್ನು ಸಾರ್ವಜನಿಕಗೊಳಿಸಬೇಕು.
ಯುಪಿ ಚುನಾವಣಾಧಿಕಾರಿಗಳು ಈ ಡೇಟಾವನ್ನು ಒದಗಿಸಲು ವಿಫಲವಾಗಿರುವುದರಿಂದ, ಈ ಮತದಾರರು ಯಾರು, ಅವರನ್ನು ಯಾವ ವಿಧಾನಸಭಾ ಕ್ಷೇತ್ರಗಳಿಗೆ ಅಥವಾ ಮತಗಟ್ಟೆಗಳಿಗೆ ಸೇರಿಸಲಾಗಿದೆ ಅಥವಾ ರಾಜ್ಯವು ವಾಸ್ತವವಾಗಿ ಅವರ ಅರ್ಹತೆಯನ್ನು ಪರಿಶೀಲಿಸಿದೆಯೇ ಎಂಬುದನ್ನು ನಿರ್ಧರಿಸಲು ಈಗ ಸಾಧ್ಯವಿಲ್ಲ.
16.18 ಲಕ್ಷ ಹೆಚ್ಚುವರಿ ಮತದಾರರ ರಹಸ್ಯವನ್ನು ಬಗೆಹರಿಸಲು reporters-collective.in ಉತ್ತರ ಪ್ರದೇಶ ಸಿಇಒ ನವದೀಪ್ ರಿನ್ವಾ ಅವರೊಂದಿಗೆ ಮಾತನಾಡಿತು. ಅವರು ಸಿಡಿಮಿಡಿಗೊಂಡರು. “ನಿಮ್ಮ ಅನುಮಾನಗಳು ಅಥವಾ ಪ್ರಶ್ನೆಗಳನ್ನು ಬಗೆಹರಿಸಲು ನಾವು ಸಲಹಾ ಸೇವೆಗಳನ್ನು ನೀಡುವುದಿಲ್ಲ” ಎಂದು ಹೇಳಿದ ಅವರು ಪ್ರಶ್ನೆಗಳಿಗೆ ಉತ್ತರಿಸದೆ ಫೋನ್ ಕಟ್ ಮಾಡಿದರು
ಯುಪಿ ಸಿಇಒ ವೆಬ್‌ಸೈಟ್‌ನ ವೆಬ್ ಆರ್ಕೈವ್ ಅನ್ನು ಸಹ ಪರಿಶೀಲಿಸಿದರೂ ವೇಬ್ಯಾಕ್ ಮೆಷಿನ್‌ನಲ್ಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ. ನಂತರ reporters-collective.in ಅವರಿಗೆ ಮತ್ತು ದಿಲ್ಲಿಯಲ್ಲಿರುವ ಇಸಿಐಗೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದೆ, ಆದರೆ ವರದಿ ಪ್ರಕಟವಾಗುವವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಉಲ್ಲೇಖಿಸಿದೆ.
ಯುಪಿಯ ಅಸಾಧಾರಣ ಎಸ್‌ಐಆರ್
ಇಸಿಐನ ನಿಗೂಢ 16.18 ಲಕ್ಷ ಪೂರ್ವ-ಕರಡು ಮತದಾರರನ್ನು ಕಾನೂನುಬದ್ಧವೆಂದು ಭಾವಿಸಿದರೂ ಮತ್ತು ಇದು ಯುಪಿ ಸಿಇಒ ಕಡೆಯಿಂದ ಆದ ಕೇವಲ ಆಡಳಿತಾತ್ಮಕ ಲೋಪವೆಂದು ಕೊಂಡರೂ, ಈ ಊಹೆಯು ಮತ್ತೊಂದು ಗೊಂದಲದ ಅಂಕಿಅಂಶವನ್ನು ಮುನ್ನಲೆಗೆ ತರುತ್ತದೆ.
ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಾಗ ಲೆಕ್ಕಾಚಾರಗಳು ಸರಿಯಾಗಿ ಬರಬೇಕಾದರೆ, ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟು ಮರು ಸೇರ್ಪಡೆಗೆ ಅರ್ಜಿ ಹಾಕಿದವರಲ್ಲಿ ಶೇ. 96.27ರಷ್ಟು ಮಂದಿ ಅಸಲಿ ಮತದಾರರೇ ಆಗಿರಬೇಕು ಮತ್ತು ಆರಂಭದಲ್ಲಿ ಚುನಾವಣಾ ಆಯೋಗವೇ ಅವರನ್ನು ತಪ್ಪಾಗಿ ಕೈಬಿಟ್ಟಿತ್ತು ಎಂದುಕೊಂಡರೆ ಮಾತ್ರ ಈ ಅಂಕಿಅಂಶ ಸರಿಹೊಂದುತ್ತದೆ.
'ದಿ ರಿಪೋರ್ಟರ್ಸ್ ಕಲೆಕ್ಟಿವ್' ಮಾತನಾಡಿದ ಉನ್ನತ ಇಸಿಐ ಅಧಿಕಾರಿಯೊಬ್ಬರ ಪ್ರಕಾರ, ಫಾರ್ಮ್-6 ರ ಮೂಲಕ ಹೊಸ ಸೇರ್ಪಡೆಗಳು ಶೇ. 60-70 ರಷ್ಟು ಆಸುಪಾಸಿನಲ್ಲಿರುವ ಇತರ ರಾಜ್ಯಗಳ ಪರಿಸ್ಥಿತಿಯೊಂದಿಗೆ ಈ ಹೆಚ್ಚಿನ ಶೇಕಡಾವಾರು ಪ್ರಮಾಣವು ತಾಳೆಯಾಗುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಉತ್ತರ ಪ್ರದೇಶದೊಂದಿಗೆ ಏಕಕಾಲದಲ್ಲಿ ಎಸ್‌ಐಆರ್ ನಡೆಸಲಾದ ಪಶ್ಚಿಮ ಬಂಗಾಳದಲ್ಲಿ, ಅದೇ ಪರಿಷ್ಕರಣಾ ಅವಧಿಯಲ್ಲಿ ಸೇರ್ಪಡೆಗಾಗಿ ಸಲ್ಲಿಸಲಾದ ಫಾರ್ಮ್-6 ಅರ್ಜಿಗಳ ಅನುಮೋದನೆ ಪ್ರಮಾಣವು ಸರಿಸುಮಾರು ಶೇ. 18.5 ರಷ್ಟಿತ್ತು.
ಯುಪಿ ಎಸ್‌ಐಆರ್‌ನ ಗಣಿತ ಮತ್ತು ಟೈಮ್ ಲೈನ್ :
ಎಸ್‌ಐಆರ್ ಆರಂಭವಾಗುವ ಮೊದಲು ಉತ್ತರ ಪ್ರದೇಶದಲ್ಲಿ 15.44 ಕೋಟಿ ನೋಂದಾಯಿತ ಮತದಾರರಿದ್ದರು.
ಉತ್ತರ ಪ್ರದೇಶದಲ್ಲಿ ಎಸ್‌ಐಆರ್ ಸಾಕಷ್ಟು ವಿಳಂಬದ ಬಳಿಕ 2025 ಅಕ್ಟೋಬರ್‌ನಲ್ಲಿ ಆರಂಭವಾಯಿತು. ನಂತರ 2026 ಜನವರಿ 6 ರಂದು ಮುಖ್ಯ ಚುನಾವಣಾ ಕಚೇರಿಯು ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 2.89 ಕೋಟಿ ಮತದಾರರನ್ನು ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಅಥವಾ ನಕಲಿ ಎಂದು ಕೈಬಿಡಲಾಯಿತು.
ಕರಡು ಮತದಾರರ ಪಟ್ಟಿಯಿಂದ ಸುಮಾರು ಶೇಕಡಾ 18.7 ರಷ್ಟು ಜನರನ್ನು ತೆಗೆದುಹಾಕಿರುವುದು ರಾಜ್ಯದ ಬಿಜೆಪಿ ನಾಯಕತ್ವದ ಒಳಗೂ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು ಎಂದು ಮಾಧ್ಯಮ ವರದಿಗಳು ತೋರಿಸುತ್ತವೆ.
ಜನವರಿ 6 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಬೇಕಿದ್ದ ಕೆಲವೇ ಗಂಟೆಗಳ ನಂತರ, ರಾಜ್ಯ ಅಂತಿಮ ಪಟ್ಟಿ ಪ್ರಕಟಿಸುವ ಮೊದಲು ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ 200 ಮತದಾರರನ್ನು ಸೇರಿಸುವಂತೆ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲು ಬಿಜೆಪಿ ರಾಜ್ಯ ಅಧ್ಯಕ್ಷ ಪಂಕಜ್ ಚೌಧರಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಿರಿಯ ಪಕ್ಷದ ನಾಯಕರು ರಾಜ್ಯ ಮಟ್ಟದ ಸಭೆಯನ್ನು ಕರೆದಿದ್ದರು.
ಮುಖ್ಯಮಂತ್ರಿಗಳೇ ಸ್ವತಃ ಈ ಆದೇಶ ನೀಡಿರುವುದು ಅಸಹಜ ಮಾತ್ರವಲ್ಲದೆ ಗೊಂದಲ ಹುಟ್ಟಿಸುವಂತಿತ್ತು. ಕೇಂದ್ರ ಕಚೇರಿಯಲ್ಲಿರುವ ಬಿಜೆಪಿ ನಾಯಕರು ಎಸ್‌ಐಆರ್ ಅನ್ನು ದೃಢವಾಗಿ ಸಮರ್ಥಿಸಿಕೊಂಡಿದ್ದರು. ಆದರೆ ರಾಜ್ಯದ ಮುಖ್ಯಮಂತ್ರಿಯವರೇ ಅದಕ್ಕೆ ವಿರುದ್ಧವಾಗಿ ಪರೋಕ್ಷವಾಗಿ ಹೇಳಿಕೆ ನೀಡುತ್ತಿದ್ದು, ನಿಗದಿತ ಸಂಖ್ಯೆಯ ಮತದಾರರನ್ನು ಮರಳಿ ಮತದಾರರ ಪಟ್ಟಿಗೆ ಸೇರಿಸುವಂತೆ ತಮ್ಮ ಕಾರ್ಯಕರ್ತರಿಗೆ ಒತ್ತಡ ಹಾಕುತ್ತಿದ್ದರು.
ತಮ್ಮ ಬಳಿ ಬರುತ್ತಿರುವ ಫಾರ್ಮ್ 6 ಅರ್ಜಿಗಳಲ್ಲಿ ಹೆಚ್ಚಿನ ಭಾಗವು ಮತದಾರರ ಪಟ್ಟಿಯಿಂದ ತಪ್ಪಾಗಿ ಕೈಬಿಡಲ್ಪಟ್ಟ ಮತದಾರರಿಂದ ಬಂದಿವೆ ಎಂಬುದನ್ನು ಯುಪಿ ಸಿಇಒ ನವದೀಪ್ ರಿನ್ವಾ ಕೂಡ ಒಪ್ಪಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಫಾರ್ಮ್ 6 ಅರ್ಜಿಗಳು ಸಲ್ಲಿಕೆಯಾದ ಮರುದಿನ ಫೆಬ್ರವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿನ್ವಾ, “ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟವರೇ ಫಾರ್ಮ್ 6 ಅನ್ನು ಭರ್ತಿ ಮಾಡುತ್ತಿದ್ದಾರೆ” ಎಂದು ಹೇಳಿದ್ದರು.
ಫಾರ್ಮ್6 ಅರ್ಜಿಯನ್ನು ಸಲ್ಲಿಸಿದಾಗ, ಅದನ್ನು ಆ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಯ (ERO) ಬಳಿ ನಾಲ್ಕು ವರ್ಷಗಳ ಕಾಲ ಸಂರಕ್ಷಿಸಿಡಬೇಕು. ಸೇರ್ಪಡೆಗಾಗಿ ಬರುವ ಪ್ರತಿಯೊಂದು ಅರ್ಜಿಯನ್ನು ಮೊದಲು ಬೂತ್ ಮಟ್ಟದ ಅಧಿಕಾರಿಯು ಕ್ಷೇತ್ರ ತನಿಖೆ ನಡೆಸಿ ಪರಿಶೀಲಿಸಬೇಕು ಮತ್ತು ನಂತರ ಇಆರ್‌ಒ ಅದನ್ನು ಅನುಮೋದಿಸಬೇಕು.
ತಮ್ಮ ಪರವಾಗಿ ಮತದಾರರ ಪಟ್ಟಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಆ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಕೂಡ ಹಲವು ಸೇರ್ಪಡೆ ಅರ್ಜಿಗಳನ್ನು ಸಲ್ಲಿಸುವುದರಿಂದ ಮತ್ತು ಅವುಗಳಲ್ಲಿ ಅನುಮಾನಾಸ್ಪದ ಅಥವಾ ಅಸ್ತಿತ್ವದಲ್ಲಿಲ್ಲದ ಮತದಾರರು ಇರುವುದರಿಂದ, ಈ ಅರ್ಜಿಗಳ ಅನುಮೋದನೆ ಪ್ರಮಾಣವು ಸಾಮಾನ್ಯವಾಗಿ ಶೇಕಡಾ 60-70 ರಷ್ಟಿರುತ್ತದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಶ್ಲೇಷಕರ ಸಹಾಯದಿಂದ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಯು 403 ವಿಧಾನಸಭಾ ಕ್ಷೇತ್ರಗಳಿಗಾಗಿ ಸಾರ್ವಜನಿಕಗೊಳಿಸಿದ್ದ ಫಾರ್ಮ್ 6ನ ಎಲ್ಲಾ 71.38 ಲಕ್ಷ ಸೇರ್ಪಡೆ ಅರ್ಜಿಗಳನ್ನು ಸಂಗ್ರಹಿಸಲಾಯಿತು. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ, 2026ರ ಜನವರಿ 6 ರ ಮೊದಲು ಸಲ್ಲಿಸಲಾದ ಫಾರ್ಮ್-6 ಅರ್ಜಿಗಳು ಲಭ್ಯವಿರಲಿಲ್ಲ.
ಯುಪಿ ಸಿಇಒ ಅವರ ಎಕ್ಸ್ ಖಾತೆಯನ್ನು ಪರಿಶೀಲಿಸುವ ಮೂಲಕವೇ ಎಸ್‌ಐಆರ್‌ನ ಸಮೀಕ್ಷೆಯ ಹಂತದಲ್ಲಿ ಸಲ್ಲಿಸಲಾದ 16 ಲಕ್ಷ ಅರ್ಜಿಗಳ ಅಸ್ತಿತ್ವದ ಬಗ್ಗೆ ನಮಗೆ ತಿಳಿದುಬಂದಿತು ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಹೇಳಿದೆ. ಆದರೆ, ವಿವಿಧ ಕ್ಷೇತ್ರಗಳಲ್ಲಿ ಅವುಗಳ ಹಂಚಿಕೆ ಮತ್ತು ವಿವರಗಳು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿವೆ.
ಕರಡು ಹಂತದಲ್ಲಿ ಚುನಾವಣಾ ಆಯೋಗವು ಸುಮಾರು ಒಂದು ಕೋಟಿ ಮತದಾರರನ್ನು ಪಟ್ಟಿಯಿಂದ ಹೇಗೆ ಹೊರಹಾಕಿತು ಮತ್ತು ನಂತರ ಬಹುಪಾಲು ಜನರನ್ನು ಹೇಗೆ ಮರಳಿ ಸೇರಿಸಿಕೊಂಡಿತು ಎಂಬುದು ನಿಗೂಢವಾಗಿಯೇ ಉಳಿದಿದೆ.
ಎಸ್‌ಐಆರ್ ನಂತರ ಕುಸಿದಿರುವ ಉತ್ತರ ಪ್ರದೇಶದ 13.39 ಕೋಟಿ ಮತದಾರರ ಸಂಖ್ಯೆಗೆ ಹೋಲಿಸಿದರೆ ಈ 16 ಲಕ್ಷ ಮತದಾರರು ಚಿಕ್ಕ ಸಂಖ್ಯೆಯಂತೆ ಕಾಣಿಸಬಹುದು. ಆದರೆ ಈ ಸಂಖ್ಯೆಗಳು ವಿವಿಧ ಕ್ಷೇತ್ರಗಳಲ್ಲಿ ಹೇಗೆ ಹಂಚಿಕೆಯಾಗಿವೆ ಎಂಬುದರ ಆಧಾರದ ಮೇಲೆ, ಅವು ವಿಧಾನಸಭಾ ಕ್ಷೇತ್ರಗಳಲ್ಲಿ ಅಥವಾ ನಿರ್ದಿಷ್ಟ ಮತಗಟ್ಟೆಗಳಲ್ಲಿ ಮಹತ್ವದ ಪರಿಣಾಮ ಬೀರುತ್ತವೆ.
ರಹಸ್ಯವಾಗಿ ಸೇರಿಸಲಾದ ಈ 16.18 ಲಕ್ಷ ಮತದಾರರ ಬಗ್ಗೆ ನಾವು ಉತ್ತರ ಪ್ರದೇಶದ ಸಿಇಒ ಅವರನ್ನು ಕೇಳಿದಾಗ, ತಾವು ಪತ್ರಿಕಾಗೋಷ್ಠಿಯಲ್ಲಿ ಮತದಾರರನ್ನು ಕೈಬಿಟ್ಟ ಸಂಖ್ಯೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವುದಾಗಿ ಅವರು ಸಮರ್ಥಿಸಿಕೊಂಡರು. ಅದು ಸ್ಪಷ್ಟವಾಗಿಲ್ಲ ಎಂದು ನಾವು ತಿಳಿಸಿದಾಗ, “ನಮ್ಮ ಡೇಟಾದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಸಿಇಒ ಉಲ್ಲೇಖಿಸಿದ್ದ ಹಲವಾರು ಪತ್ರಿಕಾಗೋಷ್ಠಿಗಳ ರೆಕಾರ್ಡ್ ಗಳನ್ನು ನಾವು ಕೇಳಿದೆವು. ಆದರೆ ಕಾನೂನುಬದ್ಧವಾಗಿ ಅಗತ್ಯವಿರುವಂತೆ, ಈ ಯಾವುದೇ ಸಭೆಗಳಲ್ಲಾಗಲಿ, ಅವರ ಎಕ್ಸ್ ಖಾತೆಯಲ್ಲಾಗಲಿ ಅಥವಾ ವೆಬ್‌ಸೈಟ್‌ನಲ್ಲಾಗಲಿ 16.18 ಲಕ್ಷ ಹೆಚ್ಚುವರಿ ಮತದಾರರ ಅಂಕಿಅಂಶಗಳ ವಿವರಗಳು ಇರಲಿಲ್ಲ.
ಕೃಪೆ: reporters-collective.in