Photo: X/@DixitGujarat

ಎರಡು ತಲೆಯ ಹಾವುಗಳು ತಮ್ಮ ಎರಡು ತಲೆಗಳ ಚಲನೆ, ಆಹಾರ ಅಥವಾ ಅಪಾಯಗಳಿಗೆ ಸ್ವತಂತ್ರವಾಗಿ ಪ್ರತಿಕ್ರಿಯಿಸಬಹುದು. ಇದರಿಂದಾಗಿ ಕಾಡಿನಲ್ಲಿ ಬದುಕುಳಿಯುವುದು ಕಷ್ಟವಾಗಬಹುದು.

ಗುಜರಾತ್ನ ದಾಹೋದ್ ಜಿಲ್ಲೆಯ ಕೃಷಿ ಭೂಮಿಯೊಂದರಿಂದ ಎರಡು ತಲೆಗಳು ಮತ್ತು ನಾಲ್ಕು ಕಣ್ಣುಗಳನ್ನು ಹೊಂದಿರುವ ಅಪರೂಪದ ಹಾಗೂ ಅಸಾಮಾನ್ಯ ಹಾವೊಂದನ್ನು ರಕ್ಷಿಸಲಾಗಿದ್ದು, ಸ್ಥಳೀಯರು ಮತ್ತು ವನ್ಯಜೀವಿ ಪ್ರಿಯರಲ್ಲಿ ಉತ್ಸಾಹ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಧಾನ್ಪುರ ತಾಲೂಕಿನ ಅಗಸ್ವಾನಿ ಗ್ರಾಮದ ಹೊಲವೊಂದರಲ್ಲಿ ಸುಮಾರು 6 ಇಂಚು ಉದ್ದದ ಈ ಹಾವು ಪತ್ತೆಯಾಗಿದೆ.

ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದ ಮೇಲೆ ‘ದಾಹೋದ್ ಪ್ರಕೃತಿ ಮಿತ್ರ ಮಂಡಲ’ದ ಸದಸ್ಯರು ಸ್ಥಳಕ್ಕೆ ಆಗಮಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ಈ ಹಾವನ್ನು ‘ವೋಲ್ಫ್ ಸ್ನೇಕ್’ ಎಂದು ಗುರುತಿಸಲಾಗಿದೆ. ಇದು ವಿಷರಹಿತ ಪ್ರಭೇದವಾಗಿದ್ದು, ಸಾಮಾನ್ಯವಾಗಿ ಮನುಷ್ಯರಿಗೆ ಹಾನಿಕಾರಕವಲ್ಲ ಎಂದು ಪರಿಗಣಿಸಲಾಗಿದೆ. ಈ ನಿರ್ದಿಷ್ಟ ಹಾವನ್ನು ಅಸಾಮಾನ್ಯವಾಗಿಸಿರುವುದು ‘ಬೈಸೆಫಲಿ’ ಎಂಬ ಅಪರೂಪದ ಬೆಳವಣಿಗೆಯ ಸ್ಥಿತಿಯಾಗಿದ್ದು, ಇದರಲ್ಲಿ ಪ್ರಾಣಿಯೊಂದು ಒಂದೇ ದೇಹದ ಮೇಲೆ ಎರಡು ತಲೆಗಳನ್ನು ಹೊಂದಿರುತ್ತದೆ.

ಎರಡು ತಲೆಗಳನ್ನು ಹೊಂದಿರುವ ಪ್ರಾಣಿಗಳು ಸಾಮಾನ್ಯವಾಗಿ ಅಪರೂಪದ ಜನ್ಮಜಾತ ಅಥವಾ ಬೆಳವಣಿಗೆಗೆ ಸಂಬಂಧಿಸಿದ ಅಸಹಜತೆಗಳಾಗಿವೆ. ಇವು ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಉಭಯಚರಗಳು ಮತ್ತು ಮೀನುಗಳಲ್ಲಿ ಕಂಡುಬರಬಹುದಾದರೂ ಇಂತಹ ಘಟನೆಗಳ ವರದಿಗಳು ವಿರಳವಾಗಿವೆ. ಈ ಸ್ಥಿತಿಯು ಸಾಮಾನ್ಯವಾಗಿ ಭ್ರೂಣದ ಬೆಳವಣಿಗೆಯ ಹಂತದಲ್ಲಿ ಉಂಟಾಗುತ್ತದೆ. ಇದು ಎರಡು ಬೆಳೆಯುತ್ತಿರುವ ಭ್ರೂಣಗಳು ಸಂಪೂರ್ಣವಾಗಿ ಬೇರ್ಪಡದಿರುವುದು ಅಥವಾ ಭ್ರೂಣದ ರಚನೆಯ ಅಸಹಜತೆಗೆ ಸಂಬಂಧಿಸಿದೆ.

ವೈಜ್ಞಾನಿಕ ಸಾಹಿತ್ಯದಲ್ಲಿ ಬೈಸೆಫಲಿಯನ್ನು ಹಾವುಗಳಲ್ಲಿ ವರದಿಯಾದ ಅತ್ಯಂತ ಸಾಮಾನ್ಯವಾದ ಪ್ರಮುಖ ದೈಹಿಕ ವೈಕಲ್ಯ ಎಂದು ವಿವರಿಸಲಾಗಿದೆ. ಹಾಗಿದ್ದರೂ ಹಾವುಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಹೇಳಲಾಗದು. ನಿರ್ದಿಷ್ಟ ಪ್ರಕರಣದಲ್ಲಿ ಎರಡು ತಲೆಗಳು ಪ್ರತ್ಯೇಕ ಕಣ್ಣುಗಳನ್ನು ಹೊಂದಿವೆ. ಮತ್ತು ಅವು ತಮ್ಮದೇ ಆದ ಮೆದುಳು ಮತ್ತು ನರಮಂಡಲದ ರಚನೆಗಳನ್ನು ಹೊಂದಿರಬಹುದು ಎಂದು ನಂಬಲಾಗಿದೆ. ಆದರೆ ಎರಡು ತಲೆಗಳ ನಡುವಿನ ಸ್ವತಂತ್ರ ಕಾರ್ಯನಿರ್ವಹಣೆಯ ಮಟ್ಟವು ವ್ಯತ್ಯಾಸಗೊಳ್ಳಬಹುದು.

ಪ್ರಕೃತಿ ಮಿತ್ರ ಮಂಡಳದ ಪ್ರಕಾರ ಗುಜರಾತ್ನಲ್ಲಿ ದಾಖಲಾದ ಇಂತಹ ಮೊದಲ ಪ್ರಕರಣ ಇದಾಗಿದೆ. ಭಾರತದಲ್ಲಿ ಎರಡು ತಲೆಗಳ ಹಾವುಗಳಿಗೆ ಸಂಬಂಧಿಸಿದಂತೆ ಕೆಲವೇ ಪ್ರಕರಣಗಳು ದಾಖಲಾಗಿವೆ ಎಂದು ಈ ಗುಂಪು ಹೇಳಿಕೊಂಡಿದೆ. ಇದರಲ್ಲಿ ಎರಡು ನಾಗರ ಹಾವುಗಳು ಮತ್ತು ಮೂರು ವೋಲ್ಫ್ ಸ್ನೇಕ್ಗಳು ಸೇರಿವೆ.

ಬೈಸೆಫಲಿಯು ಪಾಲಿಸೆಫಲಿಯ ಒಂದು ರೂಪವಾಗಿದೆ. ಇದು ಬೆಳವಣಿಗೆ ಹಂತದಲ್ಲಿ ಭ್ರೂಣವು ಸಂಪೂರ್ಣವಾಗಿ ಬೇರ್ಪಡದೆ ಇದ್ದಾಗ ಉಂಟಾಗುವ ಅಸಹಜತೆ ಆಗಿರುತ್ತದೆ. ಇಂತಹ ಅಸಹಜತೆಗಳು ಅತ್ಯಂತ ಅಪರೂಪವಾಗಿದ್ದರೂ ಹಾವುಗಳು, ಆಮೆಗಳು ಮತ್ತು ಇತರ ಪ್ರಾಣಿಗಳಲ್ಲಿ ದಾಖಲಾಗಿವೆ.

ಇಂತಹ ಹಾವುಗಳು ಎರಡು ತಲೆಗಳ ಚಲನೆ, ಆಹಾರ ಅಥವಾ ಅಪಾಯಗಳಿಗೆ ಸ್ವತಂತ್ರವಾಗಿ ಪ್ರತಿಕ್ರಿಯಿಸಬಹುದು. ಇದರಿಂದಾಗಿ ಕಾಡಿನಲ್ಲಿ ಬದುಕುಳಿಯುವುದು ಕಷ್ಟವಾಗಬಹುದು. ಸ್ಥಳೀಯ ವನ್ಯಜೀವಿ ರಕ್ಷಕರ ಪ್ರಕಾರ ರಕ್ಷಿಸಲಾದ ಈ ಹಾವು ಸುಮಾರು ಒಂದು ವರ್ಷ ವಯಸ್ಸಿನದ್ದಾಗಿದೆ. ತಂಡವು ಈಗ ಅದರ ಸುರಕ್ಷತೆ ಮತ್ತು ಸೂಕ್ತ ಆರೈಕೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor