ಇರಾನ್ ಯುದ್ಧದ ಸಂಕಷ್ಟದ ನಡುವೆಯೂ ತೈಲ ಕಂಪನಿಗಳು ದಾಖಲೆಯ ಲಾಭ ಗಳಿಸುತ್ತಿರುವುದು ಹೇಗೆ?
ಸಾಂದರ್ಭಿಕ ಚಿತ್ರ | Photo Credit : magnific.com
ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಉಂಟಾಗಿದೆ. ಪ್ರಮುಖ ಹಡಗು ಮಾರ್ಗವಾದ ಹಾರ್ಮುಝ್ ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಕಳೆದ ಕೆಲವು ತಿಂಗಳುಗಳಿಂದ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ.
ಈ ಬಿಕ್ಕಟ್ಟಿನ ಪರಿಣಾಮವಾಗಿ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಗೃಹಬಳಕೆಯ ವಸ್ತುಗಳು ಹಾಗೂ ಇಂಧನದ ಬೆಲೆಗಳು ವಿಪರೀತ ಹೆಚ್ಚಾಗಿವೆ. ಈ ಸಂಕಷ್ಟದ ನಡುವೆಯೂ ಬೃಹತ್ ತೈಲ ಸಂಸ್ಥೆಗಳು ಅಭೂತಪೂರ್ವ ಲಾಭವನ್ನು ಕಾಯ್ದುಕೊಂಡಿವೆ.
ಎಕ್ಸಾನ್‌ಮೊಬಿಲ್, ಚೆವ್ರಾನ್, ಶೆಲ್ ಮತ್ತು ಬಿಪಿ ನಂತಹ ದೈತ್ಯ ತೈಲ ಕಂಪನಿಗಳು ಯುದ್ಧದ ಸನ್ನಿವೇಶವನ್ನು ತಮಗೆ ಅನುಕೂಲಕರವಾಗಿ ಬಳಸಿಕೊಂಡಿವೆ. ಯುದ್ಧವು ಕೆಂಪು ಸಮುದ್ರಕ್ಕೂ ಹರಡುತ್ತಿದ್ದು, ತೈಲ ಸರಬರಾಜಿನಲ್ಲಿ ಮತ್ತಷ್ಟು ಅಡಚಣೆಗಳು ಉಂಟಾಗುತ್ತಿರುವುದು ಈ ಕಂಪನಿಗಳ ಜೇಬು ತುಂಬಿಸುತ್ತಿದೆ.
ಬೃಹತ್ ತೈಲ ಕಂಪನಿಗಳು ಎಷ್ಟು ಲಾಭ ಗಳಿಸುತ್ತಿವೆ?
ಹಾರ್ಮುಝ್ ಜಲಸಂಧಿಯಿಂದ ಬಹುದೂರದಲ್ಲಿ ತಮ್ಮ ಉತ್ಪಾದನೆ ಮತ್ತು ಪೂರೈಕೆ ಜಾಲವನ್ನು ಹೊಂದಿರುವ ಪ್ರಮುಖ ತೈಲ ಸಂಸ್ಥೆಗಳು, ಈ ಬಿಕ್ಕಟ್ಟಿನ ಸಮಯದಲ್ಲಿ ಭಾರೀ ಪ್ರಮಾಣದ ಲಾಭವನ್ನು ಗಳಿಸುತ್ತಿವೆ.
ಎಕ್ಸಾನ್‌ಮೊಬಿಲ್ (ExxonMobil): ಅಮೆರಿಕದ ಅತ್ಯಂತ ದೊಡ್ಡ ತೈಲ ಸಂಸ್ಥೆಯಾದ ಎಕ್ಸಾನ್‌ಮೊಬಿಲ್ ತನ್ನ ಎರಡನೇ ತ್ರೈಮಾಸಿಕದಲ್ಲಿ 1,450 ಕೋಟಿ ಡಾಲರ್ (1,38,018.98 ಕೋಟಿ ರೂ) ಗಳಿಕೆಯನ್ನು ದಾಖಲಿಸಿದೆ. ಇದರ ಹೊಂದಾಣಿಕೆಯ ಗಳಿಕೆ 1,470 ಕೋಟಿ ಡಾಲರ್ (ಸರಿಸುಮಾರು 139,908.57 ಕೋಟಿ ರೂ) ಆಗಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ತ್ರೈಮಾಸಿಕ ಲಾಭವಾಗಿದೆ. ಇರಾನ್ ಯುದ್ಧದ ಪರಿಣಾಮವಾಗಿ ತೈಲ ಬೆಲೆಗಳು ಹಾಗೂ ರಿಫೈನಿಂಗ್ ಮಾರ್ಜಿನ್‌ಗಳು ಏರಿಕೆಯಾಗಿದ್ದು ಈ ಫಲಿತಾಂಶಕ್ಕೆ ಕಾರಣವಾಗಿದೆ. ಖತರ್‌ನಲ್ಲಿ ಉತ್ಪಾದನಾ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಈ ಗಳಿಕೆಯು ವಾಲ್‌ಸ್ಟ್ರೀಟ್ ವಿಶ್ಲೇಷಕರ ನಿರೀಕ್ಷೆಗಿಂತ ಕೊಂಚ ಕಡಿಮೆಯಿದೆ.
ಚೆವ್ರಾನ್ (Chevron): ಅಮೆರಿಕದ ಎರಡನೇ ಅತಿ ದೊಡ್ಡ ತೈಲ ಕಂಪನಿಯಾದ ಚೆವ್ರಾನ್ ಎರಡನೇ ತ್ರೈಮಾಸಿಕದಲ್ಲಿ 1,200 ಕೋಟಿ ಡಾಲರ್ (ಅಂದಾಜು 11,421 ಕೋಟಿ ರೂ) ಗಳಿಕೆ ಗಳಿಸಿದ್ದು, ಇದು ವಿಶ್ಲೇಷಕರ ಅಂದಾಜನ್ನು ಮೀರಿಸಿದೆ. ಇದು ಕಳೆದ ಆರು ವರ್ಷಗಳಲ್ಲೇ ಗರಿಷ್ಠ ತ್ರೈಮಾಸಿಕ ಲಾಭವಾಗಿದೆ.
ಜಾಗತಿಕವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆಗಳು ಕಂಪನಿಯ ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಎರಡೂ ವಿಭಾಗಗಳಿಗೆ ನೆರವಾಗಿದ್ದು, ಅಪ್‌ಸ್ಟ್ರೀಮ್ ಗಳಿಕೆಯು ವರ್ಷದಿಂದ ವರ್ಷಕ್ಕೆ ಶೇಕಡಾ 200 ರಷ್ಟು ಹೆಚ್ಚಾಗಿ 820 ಕೋಟಿ ಡಾಲರ್‌ಗೆ (ಅಂದಾಜು 78,056 ಕೋಟಿ ರೂ ) ತಲುಪಿದೆ. ಇತ್ತ ಡೌನ್‌ಸ್ಟ್ರೀಮ್ ಗಳಿಕೆಯು 490 ಕೋಟಿ ಡಾಲರ್ (ಅಂದಾಜು 46,642 ಕೋಟಿ ರೂ) ತಲುಪಿದ್ದು, ಇದು 2010ರ ದಶಕದ ಆರಂಭದ ನಂತರ ಚೆವ್ರಾನ್‌ನ ಅತ್ಯಂತ ದೊಡ್ಡಮಟ್ಟದ ಸಾಧನೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಶೆಲ್ (Shell): ಯುರೋಪ್‌ನ ಅತಿ ದೊಡ್ಡ ತೈಲ ಸಂಸ್ಥೆಯಾದ ಬ್ರಿಟಿಷ್-ಡಚ್ ಸಮೂಹದ ಶೆಲ್, ತನ್ನ ಎರಡನೇ ತ್ರೈಮಾಸಿಕ ಗಳಿಕೆಯನ್ನು ದುಪ್ಪಟ್ಟುಗೊಳಿಸಿಕೊಂಡು ಸುಮಾರು 1,000 ಕೋಟಿ ಡಾಲರ್ (ಅಂದಾಜು 95,093 ಕೋಟಿ ರೂ) ತಲುಪಿದೆ. ತೈಲ ಮತ್ತು ಅನಿಲ ಬೆಲೆಗಳ ಏರಿಕೆ ಹಾಗೂ ಮಧ್ಯಪ್ರಾಚ್ಯದಲ್ಲಿ ತಡೆಗಳುಂಟಾಗಿದ್ದರೂ ದ್ರವೀಕೃತ ನೈಸರ್ಗಿಕ ಅನಿಲ (LNG) ಕಾರ್ಯಚರಣೆಗಳು ಗಟ್ಟಿಯಾಗಿ ನಿಂತಿದ್ದರಿಂದ ಈ ಗಳಿಕೆ ಸಾಧ್ಯವಾಗಿದ್ದು, ವಿಶ್ಲೇಷಕರ ಅಂದಾಜಿಗಿಂತ ಹೆಚ್ಚಿನ ಸಾಧನೆ ಮಾಡಿದೆ.
ಟೋಟಲ್ ಎನರ್ಜೀಸ್ (TotalEnergies): ಫ್ರಾನ್ಸ್‌ನ ಈ ದೈತ್ಯ ತೈಲ ಸಂಸ್ಥೆಯ ಗಳಿಕೆಯು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 67 ರಷ್ಟು ಏರಿಕೆಯಾಗಿದೆ. ತೈಲ ಬೆಲೆಗಳ ಏರಿಕೆ ಮತ್ತು ರಿಫೈನಿಂಗ್ ಕೆಮಿಕಲ್ಸ್‌ಗಳ ಬಲವಾದ ಲಾಭದ ಮಾರ್ಜಿನ್‌ನಿಂದಾಗಿ, ಎಲ್ಎನ್‌ಜಿ ಗಳಿಕೆಯಲ್ಲಾದ ಕುಸಿತವನ್ನು ಸರಿದೂಗಿಸಿ, ಕಳೆದ ಮೂರು ವರ್ಷಗಳಲ್ಲೇ ಅತ್ಯುತ್ತಮ ತ್ರೈಮಾಸಿಕ ಸಾಧನೆ ಮಾಡಿದೆ.
ಬಿಪಿ (BP): ಯುನೈಟೆಡ್ ಕಿಂಗ್‌ಡಂನ ಮತ್ತೊಂದು ಪ್ರಮುಖ ತೈಲ ಸಂಸ್ಥೆಯಾದ 'ಬಿಪಿ', ಎರಡನೇ ತ್ರೈಮಾಸಿಕದಲ್ಲಿ 573 ಕೋಟಿ ಡಾಲರ್ (54,551 ಕೋಟಿ ರೂ) ಲಾಭ ಗಳಿಸಿದೆ. ಇದು ಕಳೆದ ವರ್ಷ ಗಳಿಸಿದ 235 ಕೋಟಿ ಡಾಲರ್‌ಗಿಂತ (22,373 ಕೋಟಿ ರೂ) ಎರಡೂವರೆ ಪಟ್ಟು ಹೆಚ್ಚು ಹಾಗೂ ವಿಶ್ಲೇಷಕರ ಅಂದಾಜಿಗಿಂತ ಹೆಚ್ಚಿನದಾಗಿದೆ.
ಸೌದಿ ಅರಾಮ್ಕೊ (Saudi Aramco): ಈ ಭಾರೀ ಪ್ರಮಾಣದ ಲಾಭವು ಪಾಶ್ಚಿಮಾತ್ಯ ದೇಶಗಳ ತೈಲ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಿಶ್ವದ ಅತಿ ದೊಡ್ಡ ಸರ್ಕಾರಿ ತೈಲ ಉತ್ಪಾದನಾ ಸಂಸ್ಥೆಯಾದ ಸೌದಿ ಅರಾಮ್ಕೊ ಕೂಡ ತನ್ನ ತ್ರೈಮಾಸಿಕ ಗಳಿಕೆಯಲ್ಲಿ ಶೇಕಡಾ 44 ರಷ್ಟು ಭಾರೀ ಏರಿಕೆ ಕಂಡಿದ್ದು, 3,269 ಕೋಟಿ ಡಾಲರ್‌ಗೆ (3.11 ಲಕ್ಷ ಕೋಟಿ ರೂ) ತಲುಪಿದೆ. ಸೌದಿಯ 'ಈಸ್ಟ್-ವೆಸ್ಟ್ ಪೈಪ್‌ಲೈನ್', ರಫ್ತಿಗಾಗಿ ಹಾರ್ಮುಝ್ ಜಲಸಂಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.
ಈ ಭಾರೀ ಲಾಭದ ಹಿಂದಿರುವ ಕಾರಣಗಳೇನು?
ಕೆಪ್ಲರ್ ಸಂಸ್ಥೆಯ ಹಿರಿಯ ಕಚ್ಚಾ ತೈಲ ವಿಶ್ಲೇಷಕಿ ಮುಯು ಶು ʼಅಲ್ ಜಝೀರಾʼ ಜೊತೆ ಮಾತನಾಡಿ, 2026ರ ದ್ವಿತೀಯಾರ್ಧದಲ್ಲಿ ಇಂಟರ್‌ಕಾಂಟಿನೆಂಟಲ್ ಎಕ್ಸ್‌ಚೇಂಜ್‌ನಲ್ಲಿ ಕಚ್ಚಾ ತೈಲದ ಸರಾಸರಿ ಜಾಗತಿಕ ಬೆಲೆ ಪ್ರತಿ ಬ್ಯಾರಲ್‌ಗೆ 96.68 ಡಾಲರ್ (9,205.40 ರೂ) ತಲುಪಿತ್ತು. ಇದು 2025ರ ಮೊದಲ ತ್ರೈಮಾಸಿಕದ 78.38 ಡಾಲರ್ (7,462.89 ರೂ) ಮತ್ತು ಎರಡನೇ ತ್ರೈಮಾಸಿಕದ 66.71 ಡಾಲರ್ (6,351.74 ರೂ) ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಹಾರ್ಮುಝ್ ಜಲಸಂಧಿಯ ಪೂರೈಕೆ ವ್ಯತ್ಯಯದಿಂದ ಬಾಧಿತವಾಗದ ತೈಲ ಉತ್ಪಾದಕರು, ಈ ಹೆಚ್ಚಿನ ತೈಲ ಬೆಲೆ ಹಾಗೂ ಮಧ್ಯಪ್ರಾಚ್ಯದ ಕಚ್ಚಾ ತೈಲಕ್ಕೆ ಪರ್ಯಾಯ ಹುಡುಕುತ್ತಿದ್ದ ದೇಶಗಳು ಮತ್ತು ರಿಫೈನರಿಗಳಿಂದ ಬಂದ ಭಾರೀ ಬೇಡಿಕೆಯ ಲಾಭ ಪಡೆದರು ಎಂದಿದ್ದಾರೆ ಮುಯು ಶು.
ಇದರ ಜೊತೆಗೆ, ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಮುಖ ರಿಫೈನಿಂಗ್ ಆಸ್ತಿಗಳನ್ನು ಹೊಂದಿರುವ ತೈಲ ಕಂಪನಿಗಳು ಬಲವಾದ ರಿಫೈನಿಂಗ್ ಮಾರ್ಜಿನ್‌ಗಳಿಂದ ಲಾಭ ಗಳಿಸಿದವು. ಮಧ್ಯಪ್ರಾಚ್ಯದ ರಫ್ತು ವ್ಯತ್ಯಯದಿಂದಾಗಿ ಸಂಸ್ಕರಿಸಿದ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಕೊರತೆ ಉಂಟಾಗಿದ್ದು, ಈ ಕಂಪನಿಗಳ ಲಾಭದಾಯಕತೆಯನ್ನು ಹೆಚ್ಚಿಸಿತು ಎಂದು ಅವರು ಹೇಳಿದ್ದಾರೆ.
ಎಪ್ರಿಲ್‌ನಿಂದ ಜೂನ್‌ವರೆಗೆ ಅಮೆರಿಕದ ತೈಲ ಫ್ಯೂಚರ್ಸ್ ಸರಾಸರಿ ಮುಕ್ತಾಯದ ಬೆಲೆ ಪ್ರತಿ ಬ್ಯಾರಲ್‌ಗೆ ಸುಮಾರು 92 ಡಾಲರ್ (8,754 ರೂ) ಆಗಿದ್ದು, ಇದು ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಶೇಕಡಾ 27 ರಷ್ಟು ಹೆಚ್ಚಾಗಿದೆ.
ಫ್ಯಾಕ್ಟ್‌ಸೆಟ್ ಹಣಕಾಸು ದತ್ತಾಂಶ ಸಂಸ್ಥೆಯ ಪ್ರಕಾರ, ವಾಲ್‌ಸ್ಟ್ರೀಟ್‌ನ ಎಸ್&ಪಿ 500 ಸೂಚ್ಯಂಕದ ಕನಿಷ್ಠ ಎಂಟು ವಿಭಾಗಗಳು 2026ರ ಎರಡನೇ ತ್ರೈಮಾಸಿಕದಲ್ಲಿ ಎರಡಂಕಿ ಗಳಿಕೆಯ ಪ್ರಗತಿಯನ್ನು ವರದಿ ಮಾಡಿವೆ. ಇದರಲ್ಲಿ ಇಂಧನ ವಲಯವು ವರ್ಷದಿಂದ ವರ್ಷಕ್ಕೆ ಶೇಕಡಾ 135.3 ರಷ್ಟು ಗಳಿಕೆಯ ಬೆಳವಣಿಗೆಯನ್ನು ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದೆ.
ಇರಾನ್ ಯುದ್ಧದ ಸಮಯದಲ್ಲಿ ತೈಲ ಬೆಲೆಗಳಲ್ಲಾದ ಭಾರೀ ಏರಿಕೆಯು ತೈಲ ಮತ್ತು ಅನಿಲ ಕಂಪನಿಗಳಿಗೆ ಹೇಗೆ ಭಾರಿ ಲಾಭವಾಗಿ ಪರಿವರ್ತಿತವಾಯಿತು ಎಂಬುದನ್ನು ಈ ಏರಿಕೆ ತೋರಿಸುತ್ತದೆ.
ಕಚ್ಚಾ ತೈಲ ಬೆಲೆಗಳು ಏರಿದ ಕಾರಣ ಈ ವಲಯದ ಸರಾಸರಿ ಆದಾಯ ಹೆಚ್ಚಾಗಿದೆಯಾದರೂ, ಉತ್ಪಾದಕರು ಆಪರೇಟಿಂಗ್ ಲಿವರೇಜ್ ಹಾಗೂ ಬಲವಾದ ರಿಫೈನಿಂಗ್ ಮಾರ್ಜಿನ್‌ಗಳ ಲಾಭ ಪಡೆದಿದ್ದರಿಂದ ಲಾಭವು ವೇಗವಾಗಿ ಹೆಚ್ಚಾಯಿತು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.
ಇದು ಈ ವಲಯದ ಬೃಹತ್ ಕಂಪನಿಗಳಿಗೆ ನಿರೀಕ್ಷೆಗೂ ಮೀರಿದ ಭಾರೀ ಲಾಭವನ್ನು ತಂದಿದೆ
ಸಾಮಾನ್ಯ ಜನರ ಮೇಲೆ ಇದು ಯಾವ ರೀತಿ ಪರಿಣಾಮ ಬೀರಿದೆ?
ಇರಾನ್ ಮೇಲಿನ ಯುದ್ಧ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವು ಅನೇಕರಿಗೆ ಭಾರೀ ಹೊರೆಯಾಗಿದೆ.
ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ ನೀಡಿರುವ ಡೇಟಾ ಪ್ರಕಾರ, ಅಮೆರಿಕದಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಗ್ಯಾಲನ್‌ಗೆ (3.8 ಲೀಟರ್) ಸರಾಸರಿ 4 ಡಾಲರ್‌ಗಿಂತ (ಸುಮಾರು 380 ರೂಪಾಯಿ) ಹೆಚ್ಚಾಗಿದೆ. ಇದು ಯುದ್ಧಪೂರ್ವ ದರಗಳಿಗೆ ಹೋಲಿಸಿದರೆ ಸುಮಾರು ಶೇಕಡಾ 40 ರಷ್ಟು ಏರಿಕೆಯಾಗಿದೆ.
ರಾಯಲ್ ಆಟೋಮೊಬೈಲ್ ಕ್ಲಬ್ ಪ್ರಕಾರ, ಬ್ರಿಟನ್‌ನಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 160.85 ಬ್ರಿಟಿಷ್ ಪೆನ್ಸ್ ಅಂದರೆ 2.17 ಡಾಲರ್ (ಸುಮಾರು 206.64 ರೂಪಾಯಿ) ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. ಡೀಸೆಲ್ ಬೆಲೆಯೂ ಪ್ರತಿ ಲೀಟರ್‌ಗೆ 180 ಪೆನ್ಸ್‌ಗಿಂತ ಅಂದರೆ 2.43 ಡಾಲರ್ (ಸುಮಾರು 231 ರೂಪಾಯಿ) ಹೆಚ್ಚಾಗಿದೆ.
ಮುಂದಿನ ವರ್ಷದ ಮಧ್ಯಭಾಗದೊಳಗೆ ಹಾರ್ಮುಜ್ ಜಲಸಂಧಿಯು ಹಡಗು ಸಂಚಾರಕ್ಕೆ ಮುಕ್ತವಾಗದಿದ್ದರೆ, 2027 ರಲ್ಲಿ ಬ್ರಿಟನ್ ಆರ್ಥಿಕತೆಯು ಕುಸಿಯುವ ಸಾಧ್ಯತೆಯಿದೆ ಎಂದು ಲೆಕ್ಕಪರಿಶೋಧನಾ ಸಲಹಾ ಸಂಸ್ಥೆ 'ಇವೈ' (EY) ಸೋಮವಾರ ಎಚ್ಚರಿಸಿದೆ.
ಈ ಲಾಭದ ಬಗ್ಗೆ ಟ್ರಂಪ್ ಪ್ರತಿಕ್ರಿಯೆ ಏನು?
ವಾಷಿಂಗ್ಟನ್‌ನಲ್ಲಿ ಅತ್ಯಂತ ಪ್ರಭಾವಶಾಲಿ ಲಾಬಿಕೋರ ಗುಂಪುಗಳಲ್ಲಿ 'ಬಿಗ್ ಆಯಿಲ್' ಎಂದು ಕರೆಯಲ್ಪಡುವ ಬೃಹತ್ ತೈಲ ಸಂಸ್ಥೆಗಳೂ ಸೇರಿವೆ. ಈ ಕಂಪನಿಗಳು ದೀರ್ಘಕಾಲದಿಂದ ವ್ಯಾಪಕ ಕಾರ್ಯಾಚರಣೆ ಹಾಗೂ ಬಲವಾದ ರಾಜಕೀಯ ಜಾಲವನ್ನು ಕಾಯ್ದುಕೊಂಡಿವೆ.
ಬೃಹತ್ ತೈಲ ಕಂಪನಿಗಳು ಬಿಲಿಯನ್‌ಗಟ್ಟಲೆ ಡಾಲರ್ ಗಳಿಸಿ ದಾಖಲೆಯ ಲಾಭ ದಾಖಲಿಸುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವೈಟ್‌ಹೌಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸಾನ್‌ಮೊಬಿಲ್ ಮತ್ತು ಚೆವ್ರಾನ್‌ನಂತಹ ಕಂಪನಿಗಳು ಇಂಧನ ಕೊರತೆಯ ಸನ್ನಿವೇಶವನ್ನು ಬಳಸಿಕೊಂಡು ಅತಿಯಾದ ಹಣ ಗಳಿಸುತ್ತಿವೆ. ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ, ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನವಿದೆ ಎಂದು ಟ್ರಂಪ್ ಹೇಳಿದ್ದಾರೆ.
"ಚೆವ್ರಾನ್ ಮತ್ತು ಎಕ್ಸಾನ್‌ಮೊಬಿಲ್ ಅತಿಯಾಗಿ ಹಣ ಮಾಡುತ್ತಿವೆ. ಅವರು ಈ ಲಾಭದ ಒಂದಷ್ಟು ಭಾಗವನ್ನು ಸಾರ್ವಜನಿಕರಿಗೆ ಹಿಂತಿರುಗಿಸಬೇಕು. ಚಿಲ್ಲರೆ ಹಾಗೂ ಗ್ರಾಹಕರ ಬೆಲೆಗಳನ್ನು ತಕ್ಷಣವೇ ಇಳಿಸುವುದು ಅವರಿಗೆ ಒಳ್ಳೆಯದು .ಕಳೆದ ವರ್ಷಕ್ಕೆ ಹೋಲಿಸಿದರೆ 12 ಪಟ್ಟು ಹೆಚ್ಚು ಲಾಭ ಗಳಿಸಿದ ಕಂಪನಿಯೊಂದನ್ನು ನೋಡಿದರೆ, ಅವರು ಆ ಹಣದ ಸ್ವಲ್ಪ ಭಾಗವನ್ನು ಸಾರ್ವಜನಿಕರಿಗೆ ನೀಡಬೇಕು. ಅಲ್ಲದೆ ಗ್ರಾಹಕರ ಮೇಲಿನ ಬೆಲೆಯನ್ನು ಕಡಿಮೆ ಮಾಡುವುದು ಸೂಕ್ತ" ಎಂದು ಟ್ರಂಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೃಪೆ: aljazeera.com