Photo Credit : PTI 

ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸಲಿರುವ ಹೊಸ ರೈಲು ದೇಶದಲ್ಲೇ ಅತ್ಯಂತ ನಿಧಾನಗತಿಯ ‘ವಂದೇ ಭಾರತ್ ಚೇರ್ ಕಾರ್’ ರೈಲು ಎನಿಸಿಕೊಳ್ಳುವ ಸಾಧ್ಯತೆಯಿದೆ.

ಇತ್ತೀಚೆಗೆ ಮಂಗಳೂರು ಸೆಂಟ್ರಲ್ ನಿಂದ ಗೋವಾಕ್ಕೆ ಆರಂಭಿಸಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸಿ, ಹೊಸದಾಗಿ ಯಶವಂತಪುರ (ಬೆಂಗಳೂರು)–ಮಡಗಾಂವ್ (ಗೋವಾ) ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಪರಿಚಯಿಸಲಾಗಿದೆ. ಈ ರೈಲು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವ ಕಾರಣ ಸಂಪರ್ಕವನ್ನು ವಿಸ್ತರಿಸುತ್ತಿರುವುದರಿಂದ ಹಳೆಯ ಸೇವೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಹೊಸ ರೈಲು ಯಶವಂತಪುರ–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಮತ್ತು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದ್ದು, ಹಳೆಯ ಕರಾವಳಿ ಮಾರ್ಗದ ರೈಲಿನ ಅಗತ್ಯವನ್ನು ಬದಲಿಸಿದೆ. ಇದು ಬೆಂಗಳೂರು, ಮಂಗಳೂರು ಮತ್ತು ಗೋವಾವನ್ನು ಒಂದೇ ಚೇರ್ ಕಾರ್ ರೈಲು ಸೇವೆಯ ಮೂಲಕ ಜೋಡಿಸುತ್ತದೆ.

ಆದರೆ, ಈ ರೈಲು ಮಾರ್ಗದಲ್ಲಿ ಪ್ರಯಾಣಕ್ಕೆ 12 ಗಂಟೆಗಳ ಸಮಯ ತೆಗೆದುಕೊಳ್ಳುವುದರಿಂದ ಇದು ದೇಶದ ಅತ್ಯಂತ ನಿಧಾನಗತಿಯ ‘ವಂದೇ ಭಾರತ್’ ಸೇವೆಯಾಗುವ ಸಾಧ್ಯತೆ ಇದೆ ಎನ್ನುವುದು ನಿಮಗೆ ಗೊತ್ತೆ?

ದೀರ್ಘ ದೂರದ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಭಾರತೀಯ ರೈಲ್ವೆಯು ಹೆಚ್ಚಿನ ‘ವಂದೇ ಭಾರತ್’ ರೈಲುಗಳನ್ನು ಪರಿಚಯಿಸುತ್ತಿದೆ. ಆದರೆ, ಶೀಘ್ರದಲ್ಲೇ ಆರಂಭವಾಗಲಿರುವ ಬೆಂಗಳೂರು–ಗೋವಾ ಮಾರ್ಗದ ರೈಲು ಒಂದು ವಿಶೇಷ ಕಾರಣಕ್ಕಾಗಿ ಭಿನ್ನವಾಗಿರಲಿದೆ. ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸಲಿರುವ ಈ ರೈಲು ದೇಶದಲ್ಲೇ ಅತ್ಯಂತ ನಿಧಾನಗತಿಯ ‘ವಂದೇ ಭಾರತ್ ಚೇರ್ ಕಾರ್’ ರೈಲು ಎನಿಸಿಕೊಳ್ಳುವ ಸಾಧ್ಯತೆಯಿದೆ.

ಕಡಿಮೆ ಸಮಯದಲ್ಲಿ ಪ್ರಯಾಣ ಪೂರ್ಣಗೊಳಿಸಲು ಹೆಸರುವಾಸಿಯಾಗಿರುವ ಇತರ ವಂದೇ ಭಾರತ್ ರೈಲುಗಳಿಗೆ ಹೋಲಿಸಿದರೆ, ಈ ರೈಲು ಗಂಟೆಗೆ ಸರಾಸರಿ 53–54 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಇದರಿಂದ ಯಶವಂತಪುರದಿಂದ ಮಡಗಾಂವ್ ತಲುಪಲು ಸುಮಾರು 12 ಗಂಟೆ 20 ನಿಮಿಷಗಳು ಬೇಕಾಗುತ್ತವೆ. ಇನ್ನು ಮರಳುವ ಪ್ರಯಾಣಕ್ಕೆ 12 ಗಂಟೆ 55 ನಿಮಿಷಗಳ ಸಮಯ ಹಿಡಿಯಲಿದೆ.

ಪ್ರಸ್ತುತ ಹೊಸದಿಲ್ಲಿ ಮತ್ತು ವಾರಣಾಸಿ ನಡುವೆ ಸಂಚರಿಸುವ ವಂದೇ ಭಾರತ್ ರೈಲು ದೇಶದಲ್ಲೇ ಅತಿ ವೇಗದ ರೈಲಾಗಿದೆ. ಇದು ಗಂಟೆಗೆ ಸರಾಸರಿ 95 ಕಿ.ಮೀ. ವೇಗದಲ್ಲಿ ಸಂಚರಿಸಿ, 759 ಕಿ.ಮೀ. ದೂರವನ್ನು ಸುಮಾರು ಎಂಟು ಗಂಟೆಗಳಲ್ಲಿ ಕ್ರಮಿಸುತ್ತದೆ. ನಂತರದ ಸ್ಥಾನದಲ್ಲಿ ಚೆನ್ನೈ ಎಗ್ಮೋರ್–ನಾಗರಕೋಯಿಲ್ ಮಾರ್ಗದ ರೈಲಿದ್ದು, ಇದು ಗಂಟೆಗೆ ಸರಾಸರಿ 82ರಿಂದ 83 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.

ಸಿಕಂದರಾಬಾದ್–ವಿಶಾಖಪಟ್ಟಣಂ ರೈಲು ಗಂಟೆಗೆ 79 ಕಿ.ಮೀ. ವೇಗದಲ್ಲಿ ಸಂಚರಿಸಿದರೆ, ಚೆನ್ನೈ ಸೆಂಟ್ರಲ್–ನರಸಾಪುರ ರೈಲು ಗಂಟೆಗೆ 75.73 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಇತರ ವಂದೇ ಭಾರತ್ ಮಾರ್ಗಗಳಲ್ಲಿ ಪುಣೆ–ಅಜ್ನಿ (ನಾಗಪುರ) ಮಾರ್ಗವೂ ಸೇರಿದ್ದು, ಇದರ ಸರಾಸರಿ ವೇಗ ಗಂಟೆಗೆ 73 ಕಿ.ಮೀ. ಆಗಿದೆ. ಹಾಗೆಯೇ, ನಾಂದೇಡ್–ಮುಂಬೈ ಸಿಎಸ್ಎಂಟಿ (CSMT) ಮಾರ್ಗದ ರೈಲು, ದಿಕ್ಕಿಗೆ ಅನುಗುಣವಾಗಿ ಗಂಟೆಗೆ 65ರಿಂದ 68 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ವಾರಣಾಸಿ–ಮೀರತ್ ಮಾರ್ಗದ ರೈಲಿನ ಸರಾಸರಿ ವೇಗ ಗಂಟೆಗೆ 66 ಕಿ.ಮೀ. ಆಗಿದೆ.

ಈ ಮಾರ್ಗದಲ್ಲಿ ಪ್ರಯಾಣದ ಸಮಯ ಹೆಚ್ಚಿರಲು ಮುಖ್ಯ ಕಾರಣ ರೈಲ್ವೆ ಹಳಿಗಳ ಸ್ಥಿತಿ. ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ನಡುವಿನ ರೈಲ್ವೆ ಮಾರ್ಗದ ಬಹುತೇಕ ಭಾಗ ಸಿಂಗಲ್ ಟ್ರ್ಯಾಕ್ ಆಗಿರುವುದರಿಂದ ವಿರುದ್ಧ ದಿಕ್ಕುಗಳಿಂದ ಬರುವ ರೈಲುಗಳು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಒಂದಕ್ಕೊಂದು ದಾರಿ ಬಿಟ್ಟುಕೊಡಲು ಕಾಯಬೇಕಾಗುತ್ತದೆ. ಇಂತಹ ವಿಭಾಗಗಳಲ್ಲಿ ರೈಲುಗಳು ಗಂಟೆಗೆ ಗರಿಷ್ಠ 30 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸಲು ಅನುಮತಿ ಇರುತ್ತದೆ.

ಹೀಗಾಗಿ, ಬೆಂಗಳೂರು–ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಾಮಾನ್ಯ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗಿಂತಲೂ ನಿಧಾನಗತಿಯಲ್ಲಿ ಸಂಚರಿಸಲಿದೆ. ಸಾಮಾನ್ಯ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಸಾಮಾನ್ಯವಾಗಿ ಗಂಟೆಗೆ 50ರಿಂದ 54 ಕಿ.ಮೀ. ಸರಾಸರಿ ವೇಗದಲ್ಲಿ ಸಂಚರಿಸುತ್ತವೆ. ಭಾರತೀಯ ರೈಲ್ವೆಯಲ್ಲಿ ಗಂಟೆಗೆ 55 ಕಿ.ಮೀ.ಗಿಂತ ಹೆಚ್ಚಿನ ಸರಾಸರಿ ವೇಗ ಹೊಂದಿರುವ ರೈಲುಗಳನ್ನು ‘ಸೂಪರ್ಫಾಸ್ಟ್ ಎಕ್ಸ್ಪ್ರೆಸ್’ ಎಂದು ಕರೆಯಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor