ಯಾದಗಿರಿ : ಅಪ್ರಾಪ್ತರಿಗೆ ವಾಹನ ನೀಡುವುದು, ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪ್, ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಹಾಗೂ ನೋ-ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗುರುವಾರದಿಂದ ಯಾದಗಿರಿಯಲ್ಲಿ ಜಾಗೃತಿ ಜಾಥಾ ಆರಂಭಿಸಲಾಗುವುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದರಾಧ್ಯ ಹೇಳಿದರು.

ಜಿಲ್ಲಾ ನ್ಯಾಯಾಂಗದ ಸಭಾಂಗಣದಲ್ಲಿ ವಿವಿಧ ಚಾಲಕರ ಸಂಘಗಳ ಅಧ್ಯಕ್ಷರು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಅವರು ಮಾತನಾಡಿದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಗೇರ್ ವಾಹನಗಳನ್ನು ನೀಡಬಾರದು. ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತ ಮಾಡಿದರೆ ವಿಮೆ ಸೇರಿದಂತೆ ಹಲವು ಕಾನೂನು ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ಎಚ್ಚರಿಸಿದರು.

ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಅಥವಾ ನಾಲ್ವರು ಸಂಚರಿಸುವುದು, ಆಟೋಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು, ಸಿಗ್ನಲ್ ಜಂಪ್ ಮಾಡುವುದು, ಜೀಬ್ರಾ ಕ್ರಾಸಿಂಗ್ ನಿಯಮಗಳನ್ನು ಉಲ್ಲಂಘಿಸುವುದು, ಲೈಸೆನ್ಸ್ ಮತ್ತು ವಿಮೆ ಇಲ್ಲದೆ ವಾಹನ ಚಲಾಯಿಸುವುದು, ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು, ಅತಿವೇಗ ಹಾಗೂ ಮಾರ್ಪಡಿಸಿದ ಸೈಲೆನ್ಸರ್‌ಗಳಿಂದ ಶಬ್ದ ಮಾಲಿನ್ಯ ಉಂಟುಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಮ್ಮ ಉದ್ದೇಶ ಸಾರ್ವಜನಿಕರಿಗೆ ತೊಂದರೆ ನೀಡುವುದಲ್ಲ. ಮೊದಲಿಗೆ ಜಾಗೃತಿ ಮೂಡಿಸಲಾಗುವುದು. ಅಗತ್ಯವಿದ್ದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೊಲೀಸ್ ಇಲಾಖೆ, ವಕೀಲರ ಸಂಘ, ಹೋಂಗಾರ್ಡ್, ಸಾರಿಗೆ ಇಲಾಖೆ, ಆಟೋ ಚಾಲಕರ ಸಂಘ ಹಾಗೂ ಮಾಧ್ಯಮಗಳು ಕೈಜೋಡಿಸಿ ರಸ್ತೆ ಸುರಕ್ಷತಾ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಸಂಚಾರ ನಿಯಮ ಪಾಲನೆ ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಅಲ್ಲ. ಪ್ರತಿಯೊಬ್ಬರೂ ನಿಯಮ ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು. ಲೈಸೆನ್ಸ್, ವಿಮೆ ಇಲ್ಲದೆ ವಾಹನ ಚಲಾಯಿಸುವುದು, ಅತಿವೇಗ, ಸಿಗ್ನಲ್ ಜಂಪ್ ಸೇರಿದಂತೆ ನಿಯಮ ಉಲ್ಲಂಘನೆಗಳಿಂದ ಜೀವಕ್ಕೆ ಅಪಾಯ ಎದುರಾಗುತ್ತದೆ. ನಿಯಮ ಪಾಲನೆಯಿಂದ ನಮ್ಮ ಜೀವ, ಕುಟುಂಬ ಮತ್ತು ಸಮಾಜವನ್ನು ರಕ್ಷಿಸೋಣ.

- ಮರುಳಸಿದ್ದರಾಧ್ಯ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor