ಯಾದಗಿರಿ: ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಿದರೆ ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 80 ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವೀಕ್ ಶಂಕರ ಹೇಳಿದರು.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಪ್ರತಿವರ್ಷ 150ರಿಂದ 170 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 170ರಿಂದ 190 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಬಳಕೆ ಕಡ್ಡಾಯವಾಗಿ ಪಾಲಿಸಿದರೆ ಅನೇಕ ಜೀವಗಳನ್ನು ಉಳಿಸಬಹುದು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದರಿಂದ ತಲೆಗೆ ಗಂಭೀರ ಗಾಯವಾಗಿ ಸಾವಿನ ಅಪಾಯ ಹೆಚ್ಚಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಗುರುವಾರದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಜಾಥಾ ಹಾಗೂ ವಾಕ್‌ಥಾನ್ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ದಂಡದ ಭಯದಿಂದಲ್ಲ, ತಮ್ಮ ಸುರಕ್ಷತೆಯ ದೃಷ್ಟಿಯಿಂದ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಎಸ್‌ಪಿ ಮನವಿ ಮಾಡಿದರು.

ಟ್ರಿಪಲ್ ರೈಡಿಂಗ್, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ಯಾದಗಿರಿ ಜಿಲ್ಲೆಯ ಎಂಟು ಸ್ಥಳಗಳಲ್ಲಿ ಐಟಿಎಂಎಸ್ (ITMS) ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆ ಪತ್ತೆಯಾದರೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ವ್ಯವಸ್ಥೆ ಜಾರಿಯಲ್ಲಿದೆ. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ತಡೆಯಲು ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಗುರುವಾರದಿಂದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ :

ಗುರುವಾರದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಹಾಗೂ ವಾಕ್‌ಥಾನ್ ಆಯೋಜಿಸಲಾಗುತ್ತದೆ. ಹೆಲ್ಮೆಟ್ ಧರಿಸುವುದು, ಸೀಟ್‌ಬೆಲ್ಟ್ ಬಳಕೆ, ಟ್ರಿಪಲ್ ರೈಡಿಂಗ್ ತಪ್ಪಿಸುವುದು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮ ಮುಂದುವರಿಯಲಿದೆ ಎಂದು ಎಸ್‌ಪಿ ಪೃಥ್ವೀಕ್ ಶಂಕರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor