2.12 ಕೋಟಿ ರೂ. ಪರಿಹಾರ ನೀಡದ ಪ್ರಕರಣ : ಯಾದಗಿರಿ ನಗರಸಭೆಯ ಕಚೇರಿ ಸಾಮಗ್ರಿ ಜಪ್ತಿ

Update: 2026-07-28 19:57 IST

ಯಾದಗಿರಿ: ನಗರದ ನಿವಾಸಿಯೊಬ್ಬರಿಗೆ ನೀಡಬೇಕಿದ್ದ 2.12 ಕೋಟಿ ರೂ. ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ವಾರಂಟ್ ಆಧರಿಸಿ ನ್ಯಾಯಾಲಯದ ಸಿಬ್ಬಂದಿ ಮಂಗಳವಾರ ಯಾದಗಿರಿ ನಗರಸಭೆ ಕಚೇರಿಯಲ್ಲಿನ ಕಂಪ್ಯೂಟರ್, ಸಿಸಿಟಿವಿ ಕ್ಯಾಮೆರಾ, ಟೇಬಲ್, ಕುರ್ಚಿಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡರು.

ನಗರದ ನಿವಾಸಿ ಸರಸ್ವತಿ ನಾರಾಯಣರಾವ್ ಅವರಿಗೆ ಸೇರಿದ ಜಾಗವನ್ನು ಸುಮಾರು 40 ವರ್ಷಗಳ ಹಿಂದೆ ನಗರಸಭೆ ಸ್ವಾಧೀನಪಡಿಸಿಕೊಂಡಿತ್ತು. ಆರಂಭದಲ್ಲಿ ಭಾಗಶಃ ಪರಿಹಾರ ನೀಡಲಾಗಿದ್ದರೂ, ಬಾಕಿ ಪರಿಹಾರಕ್ಕಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಸರಸ್ವತಿ ಅವರಿಗೆ 2.12 ಕೋಟಿ ರೂ. ಪರಿಹಾರ ನೀಡುವಂತೆ ನಗರಸಭೆಗೆ ಆದೇಶಿಸಿತ್ತು. ಆದೇಶ ಪಾಲಿಸದಿದ್ದಲ್ಲಿ ನಗರಸಭೆ ಕಚೇರಿಯಲ್ಲಿನ ಸಾಮಗ್ರಿಗಳನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಸೋಮವಾರವೇ ಲಾರಿಯೊಂದಿಗೆ ನಗರಸಭೆ ಕಚೇರಿಗೆ ಆಗಮಿಸಿದ್ದ ನ್ಯಾಯಾಲಯದ ಸಿಬ್ಬಂದಿಗೆ ಪೌರಾಯುಕ್ತ ಉಮೇಶ್ ಚವ್ಹಾಣ ಅವರು, ಎಸ್‌ಐಆರ್‌ಗೆ ಸಂಬಂಧಿಸಿದ ದಾಖಲೆಗಳು ಕಂಪ್ಯೂಟರ್‌ಗಳಲ್ಲಿ ಇರುವುದರಿಂದ ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಮಾತುಕತೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಹಿಂದಿರುಗಿ, ಮಂಗಳವಾರ ಮತ್ತೆ ಬಂದು ಕಚೇರಿಯಲ್ಲಿನ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಹೋದರು.

ಪೌರಾಯುಕ್ತ ಉಮೇಶ್ ಚವ್ಹಾಣ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಸರಸ್ವತಿ ಅವರಿಗೆ ಪರಿಹಾರ ನೀಡಬೇಕಾಗಿದೆ. ಆದರೆ ಒಂದೇ ಬಾರಿಗೆ ಅಷ್ಟು ಮೊತ್ತ ಪಾವತಿಸಲು ನಗರಸಭೆಯ ಬಳಿ ಹಣದ ಕೊರತೆ ಇದೆ. ಈಗಾಗಲೇ 20 ಲಕ್ಷ ರೂ. ಪಾವತಿಸಲಾಗಿದ್ದು, ಮತ್ತಷ್ಟು 5 ಲಕ್ಷ ರೂ. ನೀಡುವುದಾಗಿ ಪ್ರಸ್ತಾಪಿಸಿದ್ದರೂ ಅದಕ್ಕೆ ಒಪ್ಪಿಗೆ ಸಿಗಲಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸುವ ಅನಿವಾರ್ಯತೆಯಿಂದ ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News