Yadgir | 2.12 ಕೋಟಿ ರೂ. ಪರಿಹಾರ ಪ್ರಕರಣ: ನಗರಸಭೆ ಸಾಮಾನು ಜಪ್ತಿಗೆ ಕೋರ್ಟ್ ಆದೇಶ

ಪರಿಹಾರ ಪಾವತಿಗೆ ಡಿಸಿ ಜೊತೆ ಚರ್ಚಿಸುವ ಭರವಸೆ ನೀಡಿದ ಪೌರಾಯುಕ್ತ; 5 ಲಕ್ಷ ರೂ. ಚೆಕ್ ನೀಡಲು ಕ್ರಮ

Update: 2026-07-27 21:18 IST

ಯಾದಗಿರಿ: ಕೋರ್ಟ್ ಆದೇಶದಂತೆ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಯಾದಗಿರಿ ನಗರಸಭೆಯ ಬೆಲೆಬಾಳುವ ಸಾಮಾನುಗಳನ್ನು ಜಪ್ತಿ ಮಾಡಲು ಜಿಲ್ಲಾ ಕೋರ್ಟ್ ಸಿಬ್ಬಂದಿ ಸೋಮವಾರ ಲಾರಿ ಸಮೇತ ನಗರಸಭೆ ಕಚೇರಿಗೆ ಆಗಮಿಸಿದ ವೇಳೆ, ಪರಿಹಾರ ಪಡೆಯಬೇಕಾದವರು ಹಾಗೂ ನಗರಸಭೆ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸುಮಾರು ಎರಡು-ಮೂರು ಗಂಟೆಗಳ ಕಾಲ ಹೈಡ್ರಾಮಾ ಸೃಷ್ಟಿಯಾಯಿತು.

ಸಾಮಾನುಗಳ ಜಪ್ತಿಗೆ ಕೋರ್ಟ್ ಸಿಬ್ಬಂದಿ ಲಾರಿ ಸಮೇತ ನಗರಸಭೆಗೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ ಸ್ಥಳಕ್ಕೆ ಧಾವಿಸಿ, ಕೋರ್ಟ್ ಸಿಬ್ಬಂದಿ ಹಾಗೂ ಪರಿಹಾರ ಪಡೆಯಬೇಕಾದವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ, ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನು ಮಂಗಳವಾರ ಭೇಟಿ ಮಾಡಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು. ಈ ಭರವಸೆಯ ಬಳಿಕ ಜಪ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸ್ಥಳದಲ್ಲಿನ ಉದ್ವಿಗ್ನ ಪರಿಸ್ಥಿತಿ ಶಮನಗೊಂಡಿತು.

ಏನಿದು ಪ್ರಕರಣ? :

ಸುಮಾರು 50 ವರ್ಷಗಳ ಹಿಂದೆ ಯಾದಗಿರಿ ನಗರದ ಅರ್ಧ ಎಕರೆ ಜಾಗವು ಸರಸ್ವತಿ ನಾರಾಯಣ ಘಾಪಸೆ ಅವರ ಮಾಲೀಕತ್ವದಲ್ಲಿತ್ತು. ಆ ಸಂದರ್ಭದಲ್ಲಿ ಆಗಿನ ಸ್ಥಳೀಯ ಸಂಸ್ಥೆಯು ಆ ಜಾಗವನ್ನು ಸಾರ್ವಜನಿಕರಿಗೆ ಮನೆ ನಿರ್ಮಾಣಕ್ಕಾಗಿ ಹಂಚಿಕೆ ಮಾಡಿತ್ತು. ಜಾಗದಲ್ಲಿ ಮನೆ ನಿರ್ಮಾಣ ಆರಂಭವಾದಾಗ ವಿಷಯ ತಿಳಿದ ಭೂ ಮಾಲೀಕರು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ನ್ಯಾಯ ಕೇಳಿದರೂ ಯಾವುದೇ ಪರಿಹಾರ ದೊರೆಯಲಿಲ್ಲ.

ಬಳಿಕ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ತಾಲೂಕು ನ್ಯಾಯಾಲಯದಿಂದ ಆರಂಭವಾಗಿ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್‌ವರೆಗೆ ಸುದೀರ್ಘ ಕಾನೂನು ಹೋರಾಟ ನಡೆಸಿದರು. ಅಂತಿಮವಾಗಿ ನ್ಯಾಯಾಲಯವು ಸರಸ್ವತಿ ನಾರಾಯಣ ಘಾಪಸೆ ಅವರ ಪರ ತೀರ್ಪು ನೀಡಿದ್ದು, ನಗರಸಭೆ 2.12 ಕೋಟಿ ರೂ. ಪರಿಹಾರ ಪಾವತಿಸಬೇಕೆಂದು ಆದೇಶಿಸಿತ್ತು.

ಆದರೆ ನ್ಯಾಯಾಲಯದ ಆದೇಶದ ಹೊರತಾಗಿಯೂ ನಗರಸಭೆ ಪರಿಹಾರ ಪಾವತಿಸದ ಕಾರಣ, ಆದೇಶ ಜಾರಿಗೆ ಜಿಲ್ಲಾ ಕೋರ್ಟ್ ಸಿಬ್ಬಂದಿ ಸೋಮವಾರ ನಗರಸಭೆ ಕಚೇರಿಗೆ ಆಗಮಿಸಿ, ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ಆರಂಭಿಸಲು ಮುಂದಾದರು.

ಈ ವೇಳೆ ಪೌರಾಯುಕ್ತ ಉಮೇಶ್ ಚವ್ಹಾಣ ಮಧ್ಯಪ್ರವೇಶಿಸಿ, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ನ್ಯಾಯಾಲಯದ ಆದೇಶವನ್ನು ಪಾಲಿಸಿ ಹಂತ ಹಂತವಾಗಿ ಪರಿಹಾರ ಮೊತ್ತ ಪಾವತಿಸಲಾಗುವುದು ಎಂದು ತಿಳಿಸಿ, ಆರಂಭಿಕವಾಗಿ 5 ಲಕ್ಷ ರೂ. ಚೆಕ್ ನೀಡಲು ವ್ಯವಸ್ಥೆ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತ ಉಮೇಶ್ ಚವ್ಹಾಣ, ಈ ಪ್ರಕರಣದಲ್ಲಿ ಈ ಹಿಂದೆಯೇ 20 ಲಕ್ಷ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News