ಶಹಾಪುರ | ಕಾಲುವೆಗೆ ಕೂಡಲೇ ನೀರು ಬಿಡದಿದ್ದರೆ ಕಚೇರಿಗೆ ಮುತ್ತಿಗೆ : ಚೆನ್ನಪ್ಪ ಆನೆಗುಂದಿ ಎಚ್ಚರಿಕೆ

Update: 2026-07-28 17:15 IST

ಶಹಾಪುರ: ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು. ಇಲ್ಲವಾದಲ್ಲಿ ಸಾವಿರಾರು ರೈತರೊಂದಿಗೆ ಭೀಮರಾಯನಗುಡಿಯ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ಎಚ್ಚರಿಕೆ ನೀಡಿದರು.

ಭೀಮರಾಯನಗುಡಿಯ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರೈತರು ಈಗಾಗಲೇ ಜಮೀನಿನಲ್ಲಿ ಬಿತ್ತನೆ ಮಾಡಿ, ಬೀಜ ಹಾಗೂ ಗೊಬ್ಬರಕ್ಕಾಗಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಸಮರ್ಪಕ ಮಳೆಯಾಗದ ಕಾರಣ ಬೆಳೆ ಉಳಿಸಿಕೊಳ್ಳಲು ಕಾಲುವೆ ನೀರನ್ನೇ ಅವಲಂಬಿಸಿದ್ದಾರೆ. ನೀರು ಬಿಡುಗಡೆಯಾಗದಿರುವುದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಹೆಚ್ಚಿದ್ದು, ನಾರಾಯಣಪುರ ಜಲಾಶಯವೂ ಭರ್ತಿಯಾಗುವ ಹಂತ ತಲುಪಿದೆ. ಪ್ರಸ್ತುತ ಕೃಷ್ಣಾ ನದಿಗೆ 35 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಅದೇ ನೀರನ್ನು ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ಹರಿಸಿ ಬೆಳೆ ಉಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಬೇಡಿಕೆ ಈಡೇರಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯ ಬಳಿಕ ರೈತ ಸಂಘದ ಮುಖಂಡರು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ರೈತರ ಹಿತದೃಷ್ಟಿಯಿಂದ ತಕ್ಷಣ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಧ್ಯಕ್ಷ ಎಸ್ಎಂ ಸಾಗರ್, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಶಹಪುರ ತಾಲೂಕ ಅಧ್ಯಕ್ಷ ತಮ್ಮಣ್ಣ ಜಹಾಗೀರದಾರ, ಕಾರ್ಯದರ್ಶಿ ಭೀಮಣ್ಣ ಟಪೇದಾರ, ಶೇಖಣ್ಣ ಟಣಕೆದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News