×
Ad

ಶಹಾಪುರ | ಚಿಕ್ಕಮಲ್ಲಾ (ಕೆ) ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಆಗ್ರಹ

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕಟ್ಟಡ ಕಾರ್ಮಿಕ ಸಂಘದಿಂದ ಮನವಿ

Update: 2026-06-29 17:12 IST

ಶಹಾಪುರ: ತಾಲೂಕಿನ ಬಿರಾಳ (ಬಿ) ಹಾಗೂ ಬಿರಾಳ (ಕೆ) ಗ್ರಾಮಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನ್ನು ಚಿಕ್ಕಮಲ್ಲಾ (ಕೆ) ಗ್ರಾಮದ ಮಾರ್ಗವಾಗಿ ಸಂಚರಿಸುವಂತೆ ಆಗ್ರಹಿಸಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ ತಾಲೂಕು ಘಟಕದ ವತಿಯಿಂದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಸಂಸ್ಥಾಪಕ ಪ್ರದೀಪ ಅಣಬಿ ಮಾತನಾಡಿ, ಪ್ರಸ್ತುತ ಶಹಾಪುರ ಘಟಕದಿಂದ ಬಿರಾಳ (ಬಿ) ಮತ್ತು ಬಿರಾಳ (ಕೆ) ಗ್ರಾಮಗಳಿಗೆ ಬಸ್ ಸಂಚರಿಸುತ್ತಿದ್ದರೂ, ಚಿಕ್ಕಮಲ್ಲಾ (ಕೆ) ಗ್ರಾಮದ ಮೂಲಕ ಬಸ್ ಸಂಚರಿಸದ ಕಾರಣ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ನಿತ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪ್ರತಿದಿನ 4ರಿಂದ 5 ಕಿಲೋಮೀಟರ್ ನಡೆದುಕೊಂಡು ಶಾಲೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತು ಸಂದರ್ಭಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಶಹಾಪುರ-ಬಿರಾಳ (ಬಿ)-ಬಿರಾಳ (ಕೆ) ಮಾರ್ಗದ ಬಸ್‌ನ್ನು ಚಿಕ್ಕಮಲ್ಲಾ (ಕೆ) ಗ್ರಾಮದ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಸ್‌ನ ನಾಮಫಲಕ, ಸಿಬ್ಬಂದಿಯ ಮಾರ್ಗ ವಿವರ ಹಾಗೂ ಟಿಕೆಟ್‌ನಲ್ಲೂ ಚಿಕ್ಕಮಲ್ಲಾ (ಕೆ) ಗ್ರಾಮದ ಹೆಸರನ್ನು ಸೇರಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಈ ಸಂಬಂಧ 2026ರ ಜನವರಿ 5ರಂದು ಶಹಾಪುರ ಘಟಕಕ್ಕೆ ಮನವಿ ಸಲ್ಲಿಸಿದ್ದರೂ, ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಂಬ್ರೇಶ ಶಿರವಾಳ, ಭೋಜಪ್ಪ ಮುಂಡಾಸ, ಮಲ್ಲಿಕಾರ್ಜುನ, ಸಿದ್ದಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News