×
Ad

ಸಮಾಜಸೇವೆಯಲ್ಲೇ ಜೀವನದ ಸಾರ್ಥಕತೆ : ಎಸ್‌ಪಿ ಪೃಥ್ವಿಕ್ ಶಂಕರ್

ಲಯನ್ಸ್ ಕ್ಲಬ್ ಯಾದಗಿರಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Update: 2026-06-29 17:10 IST

ಯಾದಗಿರಿ : ಮಾನವ ಜೀವನದ ನಿಜವಾದ ಸಾರ್ಥಕತೆ ಅಧಿಕಾರ ಮತ್ತು ಸಂಪತ್ತಿನಲ್ಲಿಲ್ಲ. ನೊಂದವರ ಕಣ್ಣೀರೊರೆಸಿ, ದೀನದಲಿತರ ಕೈಹಿಡಿಯುವುದರಲ್ಲೇ ಜೀವನದ ಅರ್ಥ ಅಡಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.

ನಗರದ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಲಯನ್ಸ್ ಕ್ಲಬ್ ಯಾದಗಿರಿ ಘಟಕದ ನೂತನ ಅಧ್ಯಕ್ಷ ಡಾ. ಸಿದ್ಧರಾಜರೆಡ್ಡಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾದಗಿರಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಲಯನ್ಸ್ ಕ್ಲಬ್ ಪರಿಸರ ಸಂರಕ್ಷಣೆ, ಉಚಿತ ಆರೋಗ್ಯ ಸೇವೆ ಮತ್ತು ಶೈಕ್ಷಣಿಕ ನೆರವು ನೀಡುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಜಾಗತಿಕ ವಿಪತ್ತು ಸಂದರ್ಭಗಳಲ್ಲೂ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ಡಾ. ಸಿದ್ಧರಾಜರೆಡ್ಡಿ ಅವರ ನಾಯಕತ್ವದಲ್ಲಿ ಕ್ಲಬ್ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಲಯನ್ ಹರಿನಾರಾಯಣ ಭಟ್ಟಡ್ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ, ಸಂಸ್ಥೆಯ ಧ್ಯೇಯ ಹಾಗೂ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲಯನ್ಸ್ ಕ್ಲಬ್ ಹೈದರಾಬಾದ್ ವಲಯದ ಮುಖ್ಯಸ್ಥ ಲಯನ್ ಸುರೇಶ ಜಗ್ನಾನಿ ಮಾತನಾಡಿ, ಯಾದಗಿರಿ ಕ್ಲಬ್ ಕೈಗೊಳ್ಳುವ ಪ್ರತಿಯೊಂದು ಸೇವಾ ಕಾರ್ಯಕ್ಕೂ ವಲಯದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಸಮಾಜದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಅರ್ಥಪೂರ್ಣ ಯೋಜನೆಗಳನ್ನು ಕೈಗೊಳ್ಳುವಂತೆ ನೂತನ ತಂಡಕ್ಕೆ ಕರೆ ನೀಡಿದರು.

ನೂತನ ಅಧ್ಯಕ್ಷ ಡಾ. ಸಿದ್ಧರಾಜರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ನೂರಾರು ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ, ಸಾವಿರಾರು ಗಿಡಗಳ ನೆಡುವಿಕೆ ಹಾಗೂ ಸ್ವಾವಲಂಬನಾ ಕೇಂದ್ರ ಸ್ಥಾಪಿಸಿ ಶಾಶ್ವತ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಭೀಮನಗೌಡ ಕ್ಯಾತ್ನಾಳ, ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಗೋಳ, ಖಜಾಂಚಿ ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಕಸಾಪ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ಹಲವು ಗಣ್ಯರು, ಕ್ಲಬ್ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News