×
Ad

9 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಯಾದಗಿರಿಯಲ್ಲಿ ಪ್ರತಿಭಟನೆ

ಬರ ಘೋಷಣೆ, ಎಕರೆಗೆ 50 ಸಾವಿರ ರೂ. ಪರಿಹಾರ, ಸಾಲಮನ್ನಾಕ್ಕೆ ಆಗ್ರಹ

Update: 2026-07-15 19:56 IST

ಯಾದಗಿರಿ : ವಿವಿಧ ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ರಾಹುಲ್ ಪಾಂಡೆ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿನಿಂದ ಸಮರ್ಪಕ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ಸಾಲ ಮಾಡಿ ಕೃಷಿ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನೈಸರ್ಗಿಕ ವಿಕೋಪದಡಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ವಾರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸಿ ಪ್ರತಿ 15 ದಿನಕ್ಕೊಮ್ಮೆ ಕೂಲಿ ಪಾವತಿಸಬೇಕು ಎಂದು ಒತ್ತಾಯಿಸಿದರು.

ಮಳೆ ಕೊರತೆಯಿಂದ ಬತ್ತಿರುವ ಕೆರೆ-ಕೊಳ್ಳಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿಸಬೇಕು. ಶಹಾಪುರ ತಾಲೂಕಿನ ಶೆಟ್ಟಿಕೇರಾ ಗ್ರಾಮದ 13 ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಜೆಜೆಎಂ ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬೆಳೆ ವಿಮೆ ಸರ್ವೆಯನ್ನು ಸರ್ಕಾರವೇ ನೇರವಾಗಿ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಿಡದಿ ರೈತರ ಮೇಲಿನ ಪ್ರಕರಣ ಹಿಂಪಡೆಯಲು ಆಗ್ರಹ :

ಬಿಡದಿ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಚನ್ನಪ್ಪ ಆನೆಗುಂದಿ ಆಗ್ರಹಿಸಿದರು. ಸರ್ಕಾರ ರೈತರ ನ್ಯಾಯಸಮ್ಮತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ಸಾಗರ, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಪದಾಧಿಕಾರಿಗಳಾದ ಧರ್ಮಣ್ಣ ದೊರೆ, ತಮ್ಮಣ್ಣ ಜಾಹಿರದಾರ, ಭೀಮಣ್ಣ ಟಫೇದಾರ, ಮರೆಪ್ಪ ಬೀರನೂರ, ಸಿದ್ದು ನಾಲ್ನೋಡಿ, ವಿಜಯಕುಮಾರ ದೊಡ್ಡನಿ, ಭೀರಪ್ಪ ಕುರಕುಂದಿ, ಹುಲಗಪ್ಪ ಕವಡಿಮಟ್ಟ, ವಿಜಪ್ಪ ಗುಂಡಾನೋರ, ವೆಂಕೋಟ ದೊರೆ, ಮಲ್ಲಣ್ಣ ದೊರೆ ಚನ್ನೂರ, ಮಹಾದೇವಪ್ಪ ಮಗ್ಗದ ಸೇರಿದಂತೆಯೇ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News