ಸುರಪುರ | ಜನಸಂಖ್ಯೆ ನಿಯಂತ್ರಣ ಎಲ್ಲರ ಹೊಣೆ : ಡಾ.ಮಹೇಶ ಬಿರಾದಾರ
ವಿಶ್ವ ಜನಸಂಖ್ಯಾ ದಿನಾಚರಣೆ
ಸುರಪುರ : ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆ, ಬಾಲ್ಯ ವಿವಾಹ ಹಾಗೂ ಕಡಿಮೆ ಸಾಕ್ಷರತೆ ಪ್ರಮುಖ ಕಾರಣಗಳಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದಾರ ಹೇಳಿದರು.
ಪಟ್ಟಣದ ಎನ್.ಎಂ. ಶೆಟ್ಟಿ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕಾಲೇಜಿನ ಸಹಯೋಗದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ಕಲ್ಯಾಣ ಯೋಜನೆಗಳನ್ನು ಎಲ್ಲ ಸಮುದಾಯಗಳ ಜನರು ಯಾವುದೇ ಸಂಶಯವಿಲ್ಲದೆ ಸ್ವಇಚ್ಛೆಯಿಂದ ಅಳವಡಿಸಿಕೊಳ್ಳಬೇಕು. ಇದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬೂದೆಪ್ಪ ಶೆಟ್ಟಿ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಆಹಾರ, ನೀರು, ವಸತಿ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಿದರೆ ಹೆಚ್ಚಿನ ಜನರಿಗೆ ಅರಿವು ಮೂಡುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಂದ ಜನನ ಪ್ರಮಾಣ ನಿಯಂತ್ರಣ ಸಾಧ್ಯವಾಗಿದೆ. ಗಂಡಿಗೆ 21 ವರ್ಷ ಹಾಗೂ ಹೆಣ್ಣಿಗೆ 18 ವರ್ಷ ನಂತರವೇ ವಿವಾಹವಾಗಬೇಕು. ಮದುವೆಯಾದ ಬಳಿಕ ಕನಿಷ್ಠ ಮೂರು ವರ್ಷ ಮೊದಲ ಮಗುವನ್ನು ಪಡೆಯದೇ, ಮಕ್ಕಳ ಜನನದ ನಡುವೆ ನಾಲ್ಕು ವರ್ಷಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ಮಾತನಾಡಿ, ಜನಸಂಖ್ಯೆ ಸ್ಫೋಟದಿಂದ ಆಹಾರ, ನೀರು, ವಸತಿ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪರಿಸರ ಹಾನಿ, ನಿರುದ್ಯೋಗ, ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗಗಳ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ್ ಮಾತನಾಡಿದರು. ಉಪನ್ಯಾಸಕ ಶಿವಕುಮಾರ ಸ್ವಾಗತಿಸಿದರು. ಬಿ.ಹೆಚ್.ಇ.ಓ ನಿಂಗಮ್ಮ ಜನಸಂಖ್ಯೆ ನಿಯಂತ್ರಣ ಕುರಿತು ಘೋಷ ವಾಕ್ಯಗಳ ಮೂಲಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.