ಹುಣಸಗಿ | ಅರಕೇರಾ ಜೆ. ಗ್ರಾಮದಲ್ಲಿ ರೈತರ ಜಾಗೃತಿ ಕಾರ್ಯಕ್ರಮ
ನೀರಿನ ಸಮರ್ಪಕ ನಿರ್ವಹಣೆಗೆ ತಾಂತ್ರಿಕ ಮಾರ್ಗದರ್ಶನ
ಹುಣಸಗಿ : ತಾಲೂಕಿನ ಅರಕೇರಾ ಜೆ. ಗ್ರಾಮದಲ್ಲಿ ಕಲಿಕೆ ಟಾಟಾ ಟ್ರಸ್ಟ್ ಹಾಗೂ ಮಿಟ್ಟಿ ಲ್ಯಾಬ್ ಸಂಸ್ಥೆಗಳ ವತಿಯಿಂದ ಬತ್ತದ ಬೆಳೆಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಕುರಿತು ರೈತರ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಂತ್ರಿಕ ತಜ್ಞ ಕಿರಣ್ ಮಾತನಾಡಿ, ಬತ್ತದ ಗದ್ದೆಗಳಲ್ಲಿ ನಿರಂತರವಾಗಿ ನೀರು ನಿಲ್ಲಿಸುವುದರಿಂದ ನೀರಿನ ವ್ಯರ್ಥ ಬಳಕೆ, ಮಣ್ಣಿನ ಗುಣಮಟ್ಟ ಕುಸಿತ ಹಾಗೂ ಉತ್ಪಾದನಾ ವೆಚ್ಚ ಹೆಚ್ಚುತ್ತದೆ ಎಂದು ತಿಳಿಸಿದರು.
ಬತ್ತದ ಬೆಳೆಯಲ್ಲಿ ನೀರಿನ ಉಳಿತಾಯದೊಂದಿಗೆ ಉತ್ತಮ ಇಳುವರಿ ಪಡೆಯಲು ಭೂಮಿಯನ್ನು ಪರ್ಯಾಯವಾಗಿ ತೇವಗೊಳಿಸಿ–ಒಣಗಿಸುವ (AWD) ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.
ಈ ವಿಧಾನದಿಂದ ನೀರಿನ ಬಳಕೆ ಕಡಿಮೆಯಾಗುವುದರೊಂದಿಗೆ ಬೆಳೆ ಆರೋಗ್ಯ ಸುಧಾರಿಸಿ ರೈತರಿಗೆ ಆರ್ಥಿಕ ಲಾಭ ದೊರೆಯಲಿದೆ. ಹವಾಮಾನ ವೈಪರೀತ್ಯ ಹಾಗೂ ನೀರಿನ ಕೊರತೆಯ ಸಂದರ್ಭದಲ್ಲಿ ಎಡಬ್ಲ್ಯೂಡಿ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಿದ್ದು, ರೈತರು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ರಾಜಶೇಖರ್, ಕೀರ್ತಿಕುಮಾರ್, ತಿರುಪತಿ ಬೈಚಬಾಳ್, ಕಲಿಕೆ ಟ್ರಸ್ಟ್‌ನ ಸಹಾಯಕ ಕ್ಷೇತ್ರ ಸಂಚಾಲಕ ಪರ್ವೀನ್ ಸೇರಿದಂತೆ ಗ್ರಾಮದ ಅನೇಕ ರೈತರು ಇದ್ದರು.