ಹುಣಸಗಿ: ನಾರಾಯಣಪುರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸದ ಸುದ್ದಿ ದೊರೆತಿದ್ದು, ವಾರಾಬಂದಿ ಪದ್ಧತಿಯನ್ನು ಸ್ಥಗಿತಗೊಳಿಸಿ ನಿರಂತರವಾಗಿ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಬೆಳೆಗಳ ರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ನಿರ್ಧಾರವು ಸುರಪುರ ಕ್ಷೇತ್ರದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್‌) ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ರೈತರ ಹಿತದೃಷ್ಟಿಯಿಂದ ವಾರಾಬಂದಿ ಪದ್ಧತಿಯನ್ನು ಸ್ಥಗಿತಗೊಳಿಸಿ ನಿರಂತರವಾಗಿ ನೀರು ಹರಿಸುವಂತೆ ತೀವ್ರ ಒತ್ತಾಯ ಮಂಡಿಸಿದ್ದರು. ಶಾಸಕರ ಈ ಪ್ರಯತ್ನದ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕೆ ಪೂರಕವಾದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ನೀರಿನ ಅಭಾವ ಹಾಗೂ ವಾರಾಬಂದಿ ಪದ್ಧತಿಯಿಂದಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಎದುರಿಸುತ್ತಿದ್ದ ಆತಂಕದ ನಡುವೆ, ನಿರಂತರವಾಗಿ ನೀರು ಹರಿಸುವ ನಿರ್ಧಾರವು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ಸಮಯಕ್ಕೆ ಸರಿಯಾಗಿ ನೀರು ದೊರೆತರೆ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗುವುದರ ಜತೆಗೆ ರೈತರ ಶ್ರಮವೂ ಸಾರ್ಥಕವಾಗಲಿದೆ.

ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಪ್ರಯತ್ನಕ್ಕೆ ರೈತ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ರೈತರ ಬದುಕು ಹಸನಾಗಬೇಕು, ಹೊಲಗಳಲ್ಲಿ ಹಸಿರು ಸಮೃದ್ಧಿ ಕಾಣಬೇಕು ಎಂಬ ಆಶಯದೊಂದಿಗೆ ಕೈಗೊಂಡಿರುವ ಈ ನಿರ್ಧಾರವು ಸುರಪುರ ಕ್ಷೇತ್ರದ ಕೃಷಿ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿರುವ ಶಾಸಕರಿಗೆ ಕ್ಷೇತ್ರದ ರೈತರ ಪರವಾಗಿ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor