ಸುರಪುರ | ಕನ್ನಡ ಸಾಹಿತ್ಯ ಸಂಘದ ನಾಡುನುಡಿ ಸೇವೆ ನಿರಂತರವಾಗಿ ಸಾಗಲಿ: ಡಿವೈಎಸ್ಪಿ ಶಿವರಾಜ ಕಟಕಭಾವಿ
84ನೇ ನಾಡಹಬ್ಬದ ಉಪನ್ಯಾಸ ಕಾರ್ಯಕ್ರಮ
ಸುರಪುರ: ಕಳೆದ 84 ವರ್ಷಗಳಿಂದ ನಾಡುನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕನ್ನಡ ಸಾಹಿತ್ಯ ಸಂಘದ ಕನ್ನಡ ಸೇವೆ ನಿರಂತರವಾಗಿ ಸಾಗಲಿ ಎಂದು ಸುರಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಶಿವರಾಜ ಕಟಕಭಾವಿ ಹಾರೈಸಿದರು.
ಪಟ್ಟಣದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ 84ನೇ ನಾಡಹಬ್ಬದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಘದ ನಿರಂತರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ತಮಗೆ ತುಂಬಾ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ತಾಲೂಕಿನ ಬೋನ್ಹಾಳ ಗ್ರಾಮದ ಯರಗಟ್ಟಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾಜಶೇಖರ ಬಿರಾದಾರ ಅವರು ‘ಜನಪದ ಸಂಸ್ಕೃತಿಯ ಉದಾತ್ತ ಮೌಲ್ಯಗಳು’ ವಿಷಯದ ಕುರಿತು ಮಾತನಾಡಿದರು.
ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಹಲವು ತಾಂತ್ರಿಕ ಸೌಲಭ್ಯಗಳ ಬಳಕೆಯಿಂದಾಗಿ ಜನಪದ ಸಂಸ್ಕೃತಿ ಹಾಗೂ ಸಂಸ್ಕಾರ ಮೌಲ್ಯಗಳನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಬೇಕು. ಹಿಂದೆ ಮನೆಗಳಲ್ಲಿ ಮದುವೆ ಹಾಗೂ ಇತರ ಶುಭಕಾರ್ಯಗಳು ಒಂದು ವಾರದವರೆಗೆ ನಡೆಯುತ್ತಿದ್ದವು. ಆದರೆ, ಈಗ ಒಂದು ಗಂಟೆಯಲ್ಲಿಯೇ ಮದುವೆ ಸೇರಿದಂತೆ ಹಲವು ಶುಭಕಾರ್ಯಗಳು ಮುಗಿದುಹೋಗುತ್ತವೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಜನಪದ ಕಥೆಗಳನ್ನು ಹೇಳುವವರೂ, ಹಾಡುಗಳನ್ನು ಹಾಡುವವರೂ ಇದ್ದರು. ಅವುಗಳನ್ನು ಕೇಳುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ, ಇಂದು ಮೊಬೈಲ್ ಸೇರಿದಂತೆ ತಾಂತ್ರಿಕ ಸಾಧನಗಳ ಹಿಂದೆ ಬಿದ್ದಿರುವ ನಾವು ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥ ಸದಾನಂದ ಪೆರ್ಲ ಮಾತನಾಡಿ, ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘವು ಜಾತಿ, ಮತ, ಪಂಥದ ಭೇದಭಾವವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ನಾಡಿನ ಹಿರಿಯ ಸಾಹಿತಿಗಳು ಈ ಸಂಘಕ್ಕೆ ಭೇಟಿ ನೀಡಿರುವುದರಿಂದ ಈ ನೆಲ ಸಾಹಿತ್ಯದ ಪವಿತ್ರ ಕಣಜವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಜಪ್ಪ ಗೋಲಗೇರಿ ವಹಿಸಿದ್ದರು. ಸಂಘದ ಅಧ್ಯಕ್ಷ ಸೂಗುರೇಶ ವಾರದ್ ಹಾಗೂ ಉಪಾಧ್ಯಕ್ಷ ಸೋಮರಾಯ ಶಖಾಪುರ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಯುವ ಸಾಹಿತಿ ಜಾವೇದ್ ಹವಾಲ್ದಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ್ ಅಲಬನೂರ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ್ ಸ್ವಾಗತಿಸಿದರು. ಸಂಗಮೇಶ್ ಗುಳಗಿ ವಂದಿಸಿದರು. ಬಳಿಕ ತಕ್ಷಶಿಲಾ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.