ಸುರಪುರ | ರಾಜ್ಯಮಟ್ಟದ ಸಿ.ಎಂ. ಕಪ್ ಬಿಲ್ಲುಗಾರಿಕೆಯಲ್ಲಿ ದೇವಪುರದ ಕ್ರೀಡಾಪಟುಗಳಿಗೆ 9 ಪದಕ
ಸುರಪುರ: ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ಸುರಪುರ ತಾಲೂಕಿನ ದೇವಪುರದಲ್ಲಿರುವ ಏಕಲವ್ಯ ಬಿಲ್ಲುಗಾರಿಕೆ ಕ್ರೀಡಾ ಕೇಂದ್ರದ ಕ್ರೀಡಾಪಟುಗಳು ಮೈಸೂರಿನ ಚಾಮುಂಡಿ ವಿಹಾರದಲ್ಲಿ ನಡೆದ ರಾಜ್ಯಮಟ್ಟದ ಸಿ.ಎಂ. ಕಪ್–2026 ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಐದು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಉಪಸಮಿತಿಯ ಸಹಯೋಗದಲ್ಲಿ ಅಕ್ಟೋಬರ್ 11ರಿಂದ 13ರವರೆಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ದೇವಪುರದ ಕ್ರೀಡಾಪಟುಗಳು ಭಾಗವಹಿಸಿ ಒಟ್ಟು ಒಂಬತ್ತು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳೆಯರ ಇಂಡಿಯನ್ ರೌಂಡ್ ವಿಭಾಗದಲ್ಲಿ ಅನ್ನಪೂರ್ಣ ಅವರು 50 ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 30 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ 50 ಮೀಟರ್ ಎಲಿಮಿನೇಷನ್ ರೌಂಡ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಇದೇ ವಿಭಾಗದಲ್ಲಿ ದೇವಮ್ಮ ಅವರು 50 ಮೀಟರ್ ಮತ್ತು 30 ಮೀಟರ್ ಸ್ಪರ್ಧೆಗಳಲ್ಲಿ ತಲಾ ಒಂದು ಕಂಚಿನ ಪದಕ ಹಾಗೂ 50 ಮೀಟರ್ ಎಲಿಮಿನೇಷನ್ ರೌಂಡ್ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ದೇವರಾಜ ಅವರು 50 ಮೀಟರ್, 30 ಮೀಟರ್ ಹಾಗೂ 50 ಮೀಟರ್ ಎಲಿಮಿನೇಷನ್ ರೌಂಡ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಂಪೌಂಡ್ ರೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಮೌನೇಶ್ ಕುಮಾರ್ ಎಂಟನೇ ಸ್ಥಾನ ಪಡೆದಿದ್ದಾರೆ.
ಒಟ್ಟು ಐದು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದೇವಪುರದ ಕ್ರೀಡಾಪಟುಗಳು ತಮ್ಮ ಕ್ರೀಡಾ ಕೇಂದ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ಹಿರಿಯರು, ಆರ್ಚರಿ ಕೋಚ್ ಅನಿಲ್ ಕುಮಾರ್, ರಘು, ಸ್ಥಳೀಯ ಕೋಚ್ ಮೌನೇಶ್ ಕುಮಾರ್, ಅಮಿತ್ ಹಾಗೂ ಜಯಂತ್ ಗೌಡ ಅಂಕೋಲಾ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.