ನ.30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಹುಣಸಗಿ ಬಂದ್ ಯಶಸ್ವಿ
ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ಸರ್ವ ಸಾಮೂಹಿಕ ಸಂಘಟನೆಗಳ ವತಿಯಿಂದ ಕರೆ ನೀಡಿದ್ದ ಹುಣಸಗಿ ತಾಲೂಕು ಬಂದ್ ಯಶಸ್ವಿಯಾಯಿತು.
ಬಿಜೆಪಿ ಮುಖಂಡ ಹಣಮಂತನಾಯಕ (ಬಬ್ಲೂಗೌಡ) ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲದಂತಾಗಿದೆ. ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಇಲ್ಲವಾದಲ್ಲಿ ಜಲಾಶಯಕ್ಕೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸಲಾಗುವುದು. ರೈತರು ರೊಚ್ಚಿಗೆದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನೀರು ಹರಿಸುವ ಕೆಲಸ ಮಾಡಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಹಾಲಿನ ಬೆಲೆ ಹಾಗೂ ಸಾರಿಗೆ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಿದೆ. ರೈತರ ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮಾತ್ರ ಮೌನ ವಹಿಸಿರುವುದು ಖಂಡನೀಯ. ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ರೈತರಿಗೆ ಯಾವುದೇ ಸಮಸ್ಯೆ ಎದುರಾದಾಗ ನಮ್ಮ ನಾಯಕ ರಾಜುಗೌಡ ಅವರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಾರೆ. ಇದು ಜನಪ್ರತಿನಿಧಿಯ ಬದ್ಧತೆ ಮತ್ತು ಜವಾಬ್ದಾರಿಯಾಗಿದೆ. ಆದರೆ ಪ್ರಸ್ತುತ ಸರ್ಕಾರದ ಆಡಳಿತದಲ್ಲಿರುವ ಜನಪ್ರತಿನಿಧಿಗಳು ರೈತರ ಸಂಕಷ್ಟದ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ. ರೈತರ ಪರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಮುಖಂಡ ಸಿದ್ದನಗೌಡ ಪಾಟೀಲ್ ಕರಿಬಾವಿ ಮಾತನಾಡಿ, ರೈತರ ಬದುಕು ಸಂಪೂರ್ಣವಾಗಿ ನೀರಾವರಿಯ ಮೇಲೆ ಅವಲಂಬಿತವಾಗಿದೆ. ಬೆಳೆಗಳು ಕೈಗೆ ಬರುವ ಹಂತದಲ್ಲಿ ನೀರು ಸ್ಥಗಿತಗೊಳಿಸಿದರೆ ರೈತರು ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸದೆ ಕಾಳಜಿ ತೋರಬೇಕು. ರೈತರ ಹಿತ ಕಾಪಾಡುವವರನ್ನು ಜನರು ಆಯ್ಕೆ ಮಾಡಿಕೊಂಡಾಗ ಮಾತ್ರ ಕೃಷಿ ಕ್ಷೇತ್ರದ ಭವಿಷ್ಯ ಉತ್ತಮವಾಗಲು ಸಾಧ್ಯ. ರೈತರ ಬದುಕು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ನಂತರ ತಹಶೀಲ್ದಾರ್ ಎಂ. ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹುಕಾರ ವೈಲಿ, ವಿರೇಶ ಸಾಹುಕಾರ ಚಿಂಚೋಳಿ, ಎಂ.ಎಸ್. ಚಂದಾ, ಮೇಲಪ್ಪ ಗುಳಿಗಿ, ವಿರುಪಾಕ್ಷಯ್ಯ ಸ್ಥಾವರಮಠ, ಬಸಣ್ಣ ಬಾಲಗೌಡ್ರ, ನಿಂಗನಗೌಡ ಪಾಟೀಲ, ಹೊನ್ನಪ್ಪ ದೇಸಾಯಿ, ಅಬ್ದುಲ್ ಹಮೀದ್ ಸಾಬ್ ಡೆಕ್ಕನ್, ಹಣಮಂತ್ರಾಯಗೌಡ ಕುಪ್ಪಿ, ಹೊನ್ನಕೇಶವ ದೇಸಾಯಿ, ಗುರುಲಿಂಗಣ್ಣ ಸಜ್ಜನ್, ನಾಗಯ್ಯ ಸ್ವಾಮಿ ದೇಸಾಯಿಗುರು, ಕಿಡಗಣ್ಣಯ್ಯ ದೇಸಾಯಿ, ಶಿವರುದ್ರು ದೇಸಾಯಿ, ರಮೇಶ ಬಿರಾದಾರ, ಶಿವರಾಜ್ ಹೊಕ್ರಾಣಿ, ಬಸನಗೌಡ ಮಾಲಿಪಾಟೀಲ್, ವಿನೋದ್ ದೊರೆ, ಬಸವರಾಜ್ ಚನ್ನೂರ, ಸಿದ್ದಣ್ಣ ಮೇಲಿನಮನಿ, ಬಸವರಾಜ್ ಕಾಮನಟಗಿ, ಕಾಶೀನಾಥ ಹಾದಿಮನಿ, ಬಸವರಾಜ್ ಹಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸಾಮೂಹಿಕ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಂದ್ಗೆ ವ್ಯಾಪಕ ಬೆಂಬಲ :
ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಹುಣಸಗಿ ಪಟ್ಟಣದಾದ್ಯಂತ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಸಾರಿಗೆ ಬಸ್ಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸರಕು ಸಾಗಣೆ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಬಹುತೇಕ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದರು.
ಮಹಾಂತ ಸ್ವಾಮಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಹಾಗೂ ಡಾ. ಬಾಬು ಜಗಜೀವನರಾಂ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.