ವಡಗೇರಾ | ಪೈಪ್‌ಲೈನ್ ಹಾನಿ: ದುರಸ್ತಿಗೆ ಪಿಡಿಒ ನಿರ್ಲಕ್ಷ್ಯ ಆರೋಪ
ಕುಡಿಯುವ ನೀರಿನಲ್ಲೇ ಚರಂಡಿ ನೀರು ಮಿಶ್ರಣ : ಗಿರೀಶ ಬಂಡಾರಿ ಆರೋಪ
ವಡಗೇರಾ: ತಾಲ್ಲೂಕಿನ ಟಿ. ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಯ್ಯಾಳ ಕೆ. ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾನಿಗೊಂಡು ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ಗ್ರಾಮಸ್ಥರು ಕಲುಷಿತ ನೀರು ಕುಡಿಯುವ ಅನಿವಾರ್ಯತೆ ಎದುರಾಗಿದೆ ಎಂದು ಗಿರೀಶ ಬಂಡಾರಿ ಆರೋಪಿಸಿದ್ದಾರೆ.
ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಜನರು ಅದೇ ನೀರನ್ನು ಸೋಸಿಕೊಂಡು ಕುಡಿಯುತ್ತಿದ್ದಾರೆ. ಪೈಪ್‌ಲೈನ್ ಹಾನಿಗೊಂಡಿರುವ ಕುರಿತು ಹಲವು ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರಿಗೆ ಮಾಹಿತಿ ನೀಡಿದರೂ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಗಿರೀಶ ಬಂಡಾರಿ ದೂರಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಲ್ಲಿ ಹೊಟ್ಟೆನೋವು, ವಾಂತಿ ಹಾಗೂ ಭೇದಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಹಾನಿಗೊಂಡ ಪೈಪ್‌ಲೈನ್ ದುರಸ್ತಿಗೊಳಿಸಿ, ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಗಿರೀಶ ಬಂಡಾರಿ ಒತ್ತಾಯಿಸಿದ್ದಾರೆ.