ಯಾದಗಿರಿ: ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ತಾಂಡಾಗಳ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಬದಲಾವಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಯಾದಗಿರಿ ಮತಕ್ಷೇತ್ರದ ಅರಕೇರಾ ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಚಶೀಲ ನಗರ ತಾಂಡಾದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಆಯಾ ಗ್ರಾಮಗಳ ಹಾಗೂ ತಾಂಡಾಗಳ ಪಕ್ಷದ ಕಾರ್ಯಕರ್ತರು ಮತ್ತು ಜನರು ಸಲ್ಲಿಸುವ ಮನವಿಗಳ ಆಧಾರದ ಮೇಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ನಮ್ಮ ಸರ್ಕಾರ ರಾಜ್ಯದ ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸುತ್ತಿದೆ. ನಾನೂ ಹಲವು ಸಮಸ್ಯೆಗಳ ನಡುವೆಯೂ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಧ್ಯವಾದಷ್ಟು ಅನುದಾನ ಬಿಡುಗಡೆ ಮಾಡಿಸುವ ಮೂಲಕ ಜನಪರ ಕೆಲಸ ಮಾಡುತ್ತಿದ್ದೇನೆ. ಈ ತಾಂಡಾದ ಶಾಲೆಗೆ ಹೆಚ್ಚುವರಿಯಾಗಿ 3ರಿಂದ 4 ಕೊಠಡಿಗಳನ್ನು ಮಂಜೂರು ಮಾಡಿಸಲಾಗುವುದು. ಅಲ್ಲದೆ, ಹೊಸ ಬಿಸಿಯೂಟದ ಕೋಣೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ರಾಮ್ ಬೀರೆ ಹಾಗೂ ದುರ್ಗಪ್ಪ ಮಾತನಾಡಿ, ಶಾಸಕರು ಜನರಿಗೆ ಸರಳವಾಗಿ ಲಭ್ಯವಾಗುತ್ತಾರೆ ಮತ್ತು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅವರ ಇಚ್ಛಾಶಕ್ತಿಯಿಂದ ಈ ತಾಂಡಾದಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಲಕ್ಷ್ಮಣ ರಾಠೋಡ, ದೇವರಾಜ ಸಾಹುಕಾರ್, ಸಿದ್ದಲಿಂಗ ಸ್ವಾಮಿ, ಲಕ್ಷ್ಮಣ ಚಟಿಕೇರಾ, ಚನ್ನಪ್ಪ ರಾಠೋಡ, ಗಿರೀಶ್, ವೀರೇಶ್ ರಾಠೋಡ, ಬುಗ್ಗಪ್ಪ ಬಂಡಾರಿ, ನ್ಯಾಯವಾದಿ ಲಕ್ಷ್ಮಣ ರಾಠೋಡ ಹಾಗೂ ನಿರ್ಮಿತಿ ಕೇಂದ್ರದ ಸಹಾಯಕ ಎಂಜಿನಿಯರ್ ರವಿಕುಮಾರ ಕಂದಕೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor