ಹುಣಸಗಿ: ರೈತರ ಜೀವನಾಡಿಯಾಗಿರುವ ಬಸವಸಾಗರ ಜಲಾಶಯದಿಂದ ನಾರಾಯಣಪುರ ಎಡದಂಡೆ ಕಾಲುವೆಗೆ ವಾರಬಂದಿ ಪದ್ಧತಿಯನ್ನು ರದ್ದುಗೊಳಿಸಿ, ನವೆಂಬರ್ ಕೊನೆಯವರೆಗೂ ನೀರು ಹರಿಸಬೇಕು ಎಂದು ಬಿಜೆಪಿ ಯುವ ಮುಖಂಡ ಕೃಷ್ಣರೆಡ್ಡಿ ಮುದನೂರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರು ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡು ಭತ್ತ ನಾಟಿ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಭತ್ತ ಕಾಳು ಕಟ್ಟುವ ಹಂತ ತಲುಪಲಿದೆ. ಇಂತಹ ಸಂದರ್ಭದಲ್ಲಿ ಅಕ್ಟೋಬರ್ 8ರಿಂದ ಕಾಲುವೆಗೆ ನೀರು ಹರಿಸಿ, ಅಕ್ಟೋಬರ್ 21ರ ನಂತರ ಸ್ಥಗಿತಗೊಳಿಸಿದರೆ ಭತ್ತದ ಬೆಳೆ ಸಂಪೂರ್ಣವಾಗಿ ಹಾಳಾಗುವ ಆತಂಕವಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಅಕ್ಟೋಬರ್ 8ರಿಂದ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ, ಕೊನೆಯ ಭಾಗದ ರೈತರಿಗೆ ಇನ್ನೂ ಒಂದು ಹನಿ ನೀರೂ ತಲುಪಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾರಬಂದಿ ಪದ್ಧತಿಯಡಿ ನೀರು ಹರಿಸಿದರೆ ಕೊನೆಯ ಭಾಗದ ರೈತರ ಸ್ಥಿತಿ ಏನಾಗಬಹುದು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನವೆಂಬರ್ 10ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ, ಅಕ್ಟೋಬರ್ 15ರಂದು ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ವಾರಬಂದಿ ಪದ್ಧತಿಯನ್ನು ಕೈಬಿಟ್ಟು, ನವೆಂಬರ್ ಕೊನೆಯವರೆಗೂ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ಬೆಳೆಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೃಷ್ಣರೆಡ್ಡಿ ಮುದನೂರ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor