ಸುರಪುರ | ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ
ಕಾಲುವೆಗಳಿಗೆ ನೀರು ಹರಿಸದಿದ್ದರೆ ತೀವ್ರ ಪ್ರತಿಭಟನೆ: ಚೆನ್ನಪ್ಪ ಆನೆಗುಂದಿ ಎಚ್ಚರಿಕೆ
ಸುರಪುರ: ಬರಗಾಲದಿಂದ ತತ್ತರಿಸಿರುವ ರೈತರ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಹರಿಸದೆ ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟವಾಡಿದರೆ ಸುಮ್ಮನಿರುವುದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಸನಾಪುರ ಯುಕೆಪಿ ಕ್ಯಾಂಪ್‌ನಲ್ಲಿರುವ ಕೆಬಿಜೆಎನ್‌ಎಲ್ ಎಸ್‌ಬಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಎದುರು ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಕಾರಣಕ್ಕೆ ಪ್ರತಿವರ್ಷ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ ಮಾತನಾಡಿ, ಕಿಲೋಮೀಟರ್ ಸಂಖ್ಯೆ 36ರ ವ್ಯಾಪ್ತಿಯ ಸೂಗೂರ, ಚಂದ್ಲಾಪುರ, ಕುಪಗಲ್, ಕವಡಿಮಟ್ಟಿ, ಬೋನ್ಹಾಳ, ರುಕ್ಮಾಪುರ, ವಾಗಣಗೇರಿ, ತಳವಾರಗೇರ, ದೇವಪುರ ಸೇರಿದಂತೆ ಅನೇಕ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪದೆ ತೀವ್ರ ತೊಂದರೆಯಾಗುತ್ತಿದೆ ಎಂದರು.
ಈ ವರ್ಷವೂ ಬರಗಾಲದಿಂದ ಬೆಳೆ ನಷ್ಟವಾಗಿದ್ದು, ಅಲ್ಪಸ್ವಲ್ಪ ಉಳಿದಿರುವ ಭತ್ತದ ಬೆಳೆಗೆ ನೀರಿನ ಅಗತ್ಯವಿದೆ. ಇಂತಹ ಸಂದರ್ಭದಲ್ಲಿಯೂ ರೈತರ ಜಮೀನುಗಳಿಗೆ ನೀರು ತಲುಪುವ ಮೊದಲೇ ಕಾಲುವೆಯ ಗೇಟ್‌ಗಳನ್ನು ಇಳಿಸಿ ಬಂದ್ ಮಾಡಲಾಗುತ್ತಿದೆ. ಇದರಿಂದ ಜಮೀನುಗಳಿಗೆ ನೀರು ತಲುಪದೆ ಬೆಳೆಗಳು ಹಾಳಾಗುತ್ತಿವೆ. ಆದ್ದರಿಂದ ಸಂಬಂಧಪಟ್ಟ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಈ ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭೀಮರಾಯನ ಗುಡಿಯ ಕೆಬಿಜೆಎನ್‌ಎಲ್ ಕಚೇರಿಯ ಮುಖ್ಯ ಅಭಿಯಂತರರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ರೈತರು, ಕಚೇರಿ ಮುಂಭಾಗದಲ್ಲೇ ಅಡುಗೆ ತಯಾರಿಸಿ ಊಟ ಸೇವಿಸುವ ಮೂಲಕ ಪ್ರತಿಭಟನೆ ಮುಂದುವರಿಸಿದರು. ಸಂಜೆಯಾದರೂ ಮುಖ್ಯ ಅಭಿಯಂತರರು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಜೆಯ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯ ಅಭಿಯಂತರರು, ಸಮಸ್ಯೆ ಬಗೆಹರಿಸಲು ಎರಡು ದಿನಗಳ ಕಾಲಾವಕಾಶ ಕೋರಿದರು. ಬಳಿಕ ರೈತರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಮತಗಿ, ಡಿಎಸ್‌ಎಸ್ ತಾಲೂಕು ಸಂಚಾಲಕ ನಿಂಗಣ್ಣ ಶೆಳ್ಳಗಿ ಹಾಗೂ ಪ್ರಾಂತ ರೈತ ಸಂಘದ ಮುಖಂಡರಾದ ಭೀಮರಾಯ ಪೂಜಾರಿ ಶಹಾಪುರ, ರಾಮಯ್ಯ ಆಲ್ಹಾಳ, ಮಲ್ಲನಗೌಡ ಪಾಟೀಲ, ಹುಲುಗಪ್ಪ ಕವಡಿಮಟ್ಟಿ, ರಮಣಪ್ಪ ಕುಪಗಲ್, ಯಂಕೋಬ ಮಾಲಿಪಾಟೀಲ, ದೇವು ಕವಡಿಮಟ್ಟಿ, ರಫೀಕ್ ಸುರಪುರ, ತಿಪ್ಪಣ್ಣ ಬಾಡದ, ಸಿದ್ದು ಯಕ್ತಾಪುರ, ಮಲ್ಲಣ್ಣ ಚನ್ನೂರ, ನಿಂಗಣ್ಣ ಒಂಟೂರ, ಮಲ್ಲಣ್ಣ ದೇಸಾಯಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.