ದಾವಣಗೆರೆ ಕ್ಷೇತ್ರಕ್ಕೆ ಕೆ. ಅಬ್ದುಲ್ ಜಬ್ಬಾರ್‌ಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲು ಒತ್ತಾಯ
ಯಾದಗಿರಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕು ಎಂದು ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಂದಿ ಮುಲ್ಲಾ ಇನಾಂದರ್ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕಾಂಗ್ರೆಸ್ ಪಕ್ಷವು ಬಸವಣ್ಣನವರ ಸಮಾನತೆಯ ತತ್ವದಡಿ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಆ ತತ್ವದ ಅನುಸರಣೆಯಲ್ಲಿ ಕೆ. ಅಬ್ದುಲ್ ಜಬ್ಬಾರ್ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತ ಸಮುದಾಯದ ಕೊಡುಗೆ ಮಹತ್ತರವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಪ್ರಬಲ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಈ ಹಿಂದೆ ಜೆಡಿಎಸ್ ಬೆಂಬಲಿಸಿದ್ದ ಅಲ್ಪಸಂಖ್ಯಾತ ಮತಗಳನ್ನು ಕಾಂಗ್ರೆಸ್ ಕಡೆಗೆ ಸೆಳೆಯುವಲ್ಲಿ ಜಬ್ಬಾರ್ ಅವರ ಪಾತ್ರ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ಕ್ಷೇತ್ರದಲ್ಲಿ ತಮ್ಮ ನಂತರ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುವುದಾಗಿ ಘೋಷಿಸಿರುವುದರಿಂದ ಜಬ್ಬಾರ್ ಅವರಿಗೆ ಮತ್ತಷ್ಟು ಬಲ ದೊರೆತಿದೆ ಎಂದು ತಿಳಿಸಿದರು.
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಅವರಿಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಜಬ್ಬಾರ್ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದು ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮೈನುದ್ದೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಫೀಸ್ ಪಟೇಲ್, ನಾಸಿರ್ ಅಹಮದ್, ಹಫೀಸ್ ಮುಸ್ತಾಕ್, ಎಂ.ಕೆ. ಸಲೀಂ ಹುಂಡೇಕಾರ್, ಅಕ್ತರ್ ಪ್ಯಾರೆ, ಎಂಡಿ ಜಲಾಲ್ ಉದ್ದೀನ್, ಡಾ. ಮಹಮೂದ್, ಇನಾಯತುರ್ ರೆಹಮಾನ್, ಲಾಳೆ ಪಟೇಲ್, ಮುನಿರ್ ಅಹಮದ್, ಶೊಹೇಬ್ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.