ಹುಣಸಗಿ | ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ
ಹುಣಸಗಿ: ಸೇವಾ ನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಮಾಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೊಡೇಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಬೋಧನೆ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳೂರ ಮಾತನಾಡಿ, ರಾಜ್ಯ ಸಂಘದ ನಿರ್ದೇಶನದಂತೆ ಇಂದು ತಾಲ್ಲೂಕಿನಾದ್ಯಂತ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ನಿಯಮವನ್ನು ಸಡಿಲಗೊಳಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುವುದರ ಜೊತೆಗೆ, ಸರ್ಕಾರವು ಹಾಲಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸೂಕ್ತ ಕಾನೂನು ತಿದ್ದುಪಡಿ ತರಬೇಕು. ಇದರೊಂದಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಗುತ್ತಿಗೆ ಆಧಾರದ ಶಿಕ್ಷಕರ ನೇಮಕಾತಿ ಕೈಬಿಟ್ಟು, ಕಾಯಂ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜಿ ಮಲಂಗ್ ಬಿಜಲಿ, ಚನ್ನಯ್ಯ ವಸ್ತ್ರದ, ಬಸಪ್ಪ ದೊರಿ, ಓಂಕಾರ, ಗಿರಿಜಾ ಪಾಟೀಲ್, ನೀಲಮ್ಮ ಹಾವೇರಿ, ರಾಚಮ್ಮ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.