ಯಾದಗಿರಿ | ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾದ ಬಂಜಾರ ನೃತ್ಯ ತಂಡಕ್ಕೆ ಭವ್ಯ ಸನ್ಮಾನ
ಮನೆ ಬಾಗಿಲಿಗೆ ಬಂದು ಸಾಧಕರನ್ನು ಗೌರವಿಸಿದ ಉಮೇಶ್ ಮುದ್ನಾಳ
ಯಾದಗಿರಿ: ಜಿಲ್ಲಾ ಹಾಗೂ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮುದ್ನಾಳ ದೊಡ್ಡ ತಾಂಡಾದ (ಭೀಮನಗರ) ಬಂಜಾರ ಜನಪದ ನೃತ್ಯ ತಂಡಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ.ಮುದ್ನಾಳ ಅವರು ಭವ್ಯ ಸನ್ಮಾನ ಮಾಡಿದರು.
ನೃತ್ಯ ತಂಡವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಉಮೇಶ್ ಕೆ. ಮುದ್ನಾಳ ಅವರು ತಂಡದ ಸದಸ್ಯರ ಮನೆ ಬಾಗಿಲಿಗೆ ಭೇಟಿ ನೀಡಿದರು. ರೈತರು ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸಿ ಸವಿಯುವ ಮೂಲಕ ವಿಭಿನ್ನ ಹಾಗೂ ಅದ್ದೂರಿಯಾಗಿ ತಂಡದ ಸಾಧನೆಯನ್ನು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಭಾಗದ ಬಂಜಾರ ಸಂಸ್ಕೃತಿ ಮತ್ತು ಜನಪದ ನೃತ್ಯವು ರಾಷ್ಟ್ರಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ತಂಡವು ಅಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ ಗೆದ್ದು ಬರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಆನಂದ ಎಸ್. ರಾಠೋಡ ಅವರ ಮನೆಯಿಂದ ಕಳಸ ಹಾಗೂ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ಮಂದಿರದವರೆಗೆ ಬಾಜಾ-ಭಜಂತ್ರಿ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ತಂಡದ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು.
ಬಂಜಾರ ಜನಪದ ನೃತ್ಯ ತಂಡದಲ್ಲಿ ಕಾವೇರಿ, ಸವಿತಾ ಆರ್., ಕರೀಷ್ಮಾ ವಿಜಯಬಾಯಿ, ರೋಷನಿ, ಮೇನುಕಾ, ಪ್ರಿಯಾಂಕಾ, ಬೇಬಿ, ಜಗದೀಶ್ ಪುನಿಬಾಯಿ, ಸವಿತಾ ಎ. ರಾಠೋಡ ಪಾಲ್ಗೊಂಡಿದ್ದರು. ತಂಡದ ವ್ಯವಸ್ಥಾಪಕರಾಗಿ ಆನಂದ ಎಸ್. ರಾಠೋಡ ಕಾರ್ಯನಿರ್ವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ದೇವಸ್ಥಾನದ ಪೂಜಾರಿ ಅಂಬು ಪವಾರ, ಶಂಕರ ಬೋಪಾ ರಾಠೋಡ, ಗೋಪಾಲ್, ಸುನಿತಾ, ಅನುಶಾಬಾಯಿ, ದೇವಿಬಾಯಿ, ಸೋನಿಬಾಯಿ, ಶಾರುಬಾಯಿ ಹಾಗೂ ಊರಿನ ಹಿರಿಯರು, ನಾಗರಿಕರು ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು.