×
Ad

ಯಾದಗಿರಿ | ಜಿಲ್ಲಾ ಕೈಗಾರಿಕಾ ಕಾರ್ಯಾಗಾರದ ಲಾಭ ಪಡೆದುಕೊಳ್ಳಿ : ಸತೀಶ್ ಕುಮಾರ್

Update: 2026-01-07 21:36 IST

ಯಾದಗಿರಿ : ಜಿಲ್ಲೆಯಲ್ಲಿ ಕೈಗಾರಿಕೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಇಂತಹ ಮಹತ್ವದ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೂ ಸ್ಥಳೀಯ ಉದ್ಯಮಿಗಳು ಭಾಗವಹಿಸದೇ ಇರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ. ಸತೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರೈಸ್ ಮಿಲ್ ಅಸೋಸಿಯೇಷನ್, ಫಾರ್ಮಾ ಮತ್ತು ಕೆಮಿಕಲ್ಸ್ ಮ್ಯಾನುಫ್ಯಾಕ್ಟರಿಂಗ್ ಅಸೋಸಿಯೇಷನ್ (ಕಡೆಚೂರು ಕೈಗಾರಿಕಾ ಪ್ರದೇಶ), ಜಿಲ್ಲಾ ಹತ್ತಿ ಜಿನ್ನಿಂಗ್ ಮಿಲ್ಸ್ ಅಸೋಸಿಯೇಷನ್ ಹಾಗೂ ಕೆ.ಎಸ್.ಎಂ.ಸಿ.ಎ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರ್ಯಾಂಪ್ ಯೋಜನೆಯಡಿ ಟ್ರೇಡ್ ಮತ್ತು ಎಂಎಸ್‌ಎಂಇ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕಾ ಇಲಾಖೆಯ ಗ್ರಾಮೀಣ ವ್ಯವಸ್ಥಾಪಕ ಮುಂಕುದರಾವ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯಮ ಬಲವರ್ಧನೆಗಾಗಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಟ್ರೇಡ್ಸ್ ಎಂಬುದು ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು, ಉದ್ಯಮಿಗಳಿಗೆ ಅಗತ್ಯ ಮಾಹಿತಿಯನ್ನು ಸರಳವಾಗಿ ಒದಗಿಸುತ್ತದೆ. ಮೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ರ್ಯಾಂಪ್ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಉದ್ಯಮ ಆರಂಭಿಸುವ ವೇಳೆ ಎದುರಾಗುವ ಕಾನೂನು ಹಾಗೂ ಆಡಳಿತಾತ್ಮಕ ಅಡೆತಡೆಗಳ ಕುರಿತು ಅರಿವು ಹೊಂದುವುದು ಅಗತ್ಯ. ಕೈಗಾರಿಕೆಗಳನ್ನು ಸುಸ್ಥಿರವಾಗಿ ನಡೆಸಲು ಸರ್ಕಾರದ ಮಹತ್ವದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕೆನರಾ ಬ್ಯಾಂಕ್ ಚೀಫ್ ಮ್ಯಾನೇಜರ್ ಮಧುರಾ ಮಾತನಾಡಿ, ಸಣ್ಣ ಮಟ್ಟದಲ್ಲಿ ಆರಂಭಿಸಿದ ಉದ್ಯಮಗಳು ಎತ್ತರಕ್ಕೆ ಬೆಳೆಯಬೇಕಾದರೆ ನಿಷ್ಠೆ ಹಾಗೂ ಶ್ರದ್ಧೆ ಅತ್ಯಗತ್ಯ. ಬ್ಯಾಂಕುಗಳೊಂದಿಗೆ ಪಾರದರ್ಶಕ ಹಾಗೂ ಸರಿಯಾದ ವ್ಯವಹಾರ ಸಂಬಂಧ ಹೊಂದಬೇಕು ಎಂದು ಸಲಹೆ ನೀಡಿದರು.

ಯಾದಗಿರಿ ಹೊಸ ಜಿಲ್ಲೆಯಾಗಿರುವುದರಿಂದ ಇಲ್ಲಿ ಉದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ವಿಶೇಷವಾಗಿ ಕಾಟನ್ ಮಿಲ್ಸ್ ಮತ್ತು ರೈಸ್ ಮಿಲ್ಸ್ಗಳಿಗೆ ಹೆಚ್ಚಿನ ಸಾಧ್ಯತೆ ಇದೆ. ಕಡೆಚೂರು ಕೈಗಾರಿಕಾ ಪ್ರದೇಶದ ಸುತ್ತಲೂ ಇನ್ನಷ್ಟು ಕೈಗಾರಿಕೆ ಸ್ಥಾಪಿಸಲು ಅವಕಾಶವಿದೆ. ಉದ್ಯಮ ಆರಂಭಿಸುವ ಮೊದಲು ಬ್ಯಾಂಕ್‌ಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದು ಹೇಳಿದರು.

ವೇದಿಕೆ ಮೇಲೆ ಎಸ್.ಬಿ.ಐ ಬ್ಯಾಂಕ್ ಚೀಫ್ ಮ್ಯಾನೇಜರ್ ಸತ್ಯನಾರಾಯಣ ಇದ್ದರು. ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಲೀಂ ಸಾಬ್ ಸ್ವಾಗತಿಸಿದರೆ, ಕೈಗಾರಿಕಾ ವಿಸ್ತರಣಾ ವಿಭಾಗದ ಶಂಕರರೆಡ್ಡಿ ನಿರೂಪಿಸಿದರು. ಜಿಲ್ಲಾ ಕೈಗಾರಿಕಾ ಸಹಾಯಕ ನಿರ್ದೇಶಕ ಮಹೇಶ್ ವಂದಿಸಿದರು. ಕಾರ್ಯಾಗಾರದಲ್ಲಿ ಯಾದಗಿರಿ ಜಿಲ್ಲೆಯ ವಿವಿಧ ರಂಗದ ಉದ್ಯಮಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News