ಶಹಾಪುರ | ಜಯಮ್ಮ ಸಾವು ಪ್ರಕರಣ : ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮಾದಿಗ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ
ಶಹಾಪುರ: ಡಿ.24ರ, 2025 ರಂದು ಇಂದಿರಾನಗರದ ಖಾಸಗಿ ಜಮೀನಿನಲ್ಲಿ ಮೃತದೇಹ ಪತ್ತೆಯಾದ ಗೋಗಿ ಗ್ರಾಮದ ಜಯಮ್ಮ ಅವರ ಸಾವು ಮೇಲ್ನೋಟಕ್ಕೆ ಕೊಲೆಯಂತೆ ಕಂಡುಬರುತ್ತಿದೆ. ಈ ಪ್ರಕರಣವನ್ನು ತಕ್ಷಣವೇ ಸಿಒಡಿ (COD) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ನಗರದ ಆದಿಜಾಂಬವ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಂತರ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಜಯಮ್ಮನ ಸಾವು ಅತ್ಯಂತ ಅನುಮಾನಾಸ್ಪದವಾಗಿದ್ದು, ಸಮಗ್ರ ತನಿಖೆ ನಡೆಸಿ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರಕರಣದ ಹಿನ್ನೆಲೆ ಮತ್ತು ದೂರು :
ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಈ ಕುರಿತು ಯುಡಿಆರ್ (UDR) ಸಂಖ್ಯೆ 40/2025 ರಡಿ ಪ್ರಕರಣ ದಾಖಲಾಗಿದೆ. ಆದರೆ, ಶವ ಪತ್ತೆಯಾದ ಸ್ಥಿತಿಯನ್ನು ಗಮನಿಸಿದರೆ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ನಂತರ ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ಶವವನ್ನು ನೇಣು ಹಾಕಿರುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತನಿಖೆಯಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರುದ್ರಪ್ಪ ಹುಲಿಮನಿ, ವಾಸುದೇವ ಕಟ್ಟಿಮನಿ (ವಕೀಲರು), ಮಾನಪ್ಪ ವಠಾರ, ಮಲ್ಲಪ್ಪ ಉಲ್ಲಂಡಗೇರಿ, ಬಸವರಾಜ ಪೂಜಾರಿ, ಶಾಂತಪ್ಪ ಕಟ್ಟಿಮನಿ, ಶಿವಕುಮಾರ ದೊಡ್ಮನಿ, ವೆಂಕಟೇಶ ಆಲೂರು, ಹುಲಿಗಪ್ಪ ದೊಡ್ಡಮನಿ, ಬಸವರಾಜ ನಾಯ್ಕಲ್, ಚಂದಪ್ಪ ಹಲಗಿ, ಸಿದ್ದಪ್ಪ ಗೋನಲ್, ಶರಣಪ್ಪ ಸಾವೂರ, ಭೀಮರಾಯ ಕಾಂಗ್ರೆಸ್, ಭೀಮಾಶಂಕರ ಕಟ್ಟಿಮನಿ, ಲಕ್ಷ್ಮಣ ಶೆಟ್ಟಿಗೇರ, ವಿಜಯಕುಮಾರ ಎದುರುಮನೆ, ನಿಂಗಣ್ಣ ಕದ್ರಾಪುರ, ಮಲ್ಲಪ್ಪ ಕೊಂಬಿನ್, ಭೀಮರಾಯ ಹುಲಿಮನಿ, ಹುಸೇನಪ್ಪ ಗುತ್ತೇದಾರ್, ರೆಡ್ಡಿ ಸಗರಕರ್, ಪ್ರದೀಪ್ ಅಣಬಿ ಸೇರಿದಂತೆ ಸಮುದಾಯದ ನೂರಾರು ಮುಖಂಡರು ಭಾಗವಹಿಸಿದ್ದರು.