ರಾಜ್ಯ ಸರ್ಕಾರದ ಚಾಲಕ ಮಾತ್ರ ಬದಲಾಗಿದೆ, ಇಂಜಿನ್ ಬದಲಾಯಿಸಬೇಕು: ಛಲವಾದಿ ನಾರಾಯಣಸ್ವಾಮಿ
ಯಾದಗಿರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿರೀಕ್ಷಿತವಾಗಿತ್ತು. ಆದರೆ ಸರ್ಕಾರದ ಚಾಲಕನನ್ನು ಮಾತ್ರ ಬದಲಾಯಿಸಿದ್ದು, ಆದರೆ ಈಡೀ ಇಂಜಿನ್ ಬದಲಾಯಿಸಬೇಕು ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ಎ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳಿಂದ ಜನರು ಬೇಸತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಈ ಸರ್ಕಾರವನ್ನು ಜನರೇ ಬದಲಾಯಿಸಿ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತ್ಯಾಗ ಮಾಡಬೇಕಾಯಿತು. ಇದರಿಂದ ಅವರಿಗೆ ಅವಮಾನವಾಗಿದೆ ಎಂಬ ಅಭಿಪ್ರಾಯವನ್ನು ಅವರದೇ ಪಕ್ಷದ ಶಾಸಕರು ಹಾಗೂ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಮೇಲುಗೈ ಸಾಧಿಸಿದ್ದು, ಗಾಂಧಿ ಕುಟುಂಬ ಮುಂದೆ ಎಲ್ಲರೂ ತಲೆಬಾಗುವ ಸ್ಥಿತಿ ನಿರ್ಮಾಣವಾಗಿದೆ. ಹೈಕಮಾಂಡ್‌ಗೆ ವಿಧೇಯರಾಗಿದ್ದರೆ ಮಾತ್ರ ನಾಯಕರಿಗೆ ಉತ್ತಮ ದಿನಗಳು, ಇಲ್ಲವಾದರೆ ರಾಜಕೀಯ ಸಂಕಷ್ಟ ಎದುರಾಗುತ್ತದೆ ಎಂದು ಟೀಕಿಸಿದರು.
ಕಲ್ಯಾಣವೇ ಆಗದ ಕಲ್ಯಾಣ ಕರ್ನಾಟಕದ ಬಗ್ಗೆ ನಾಯಕರೆನಿಸಿಕೊಂಡವರು ನಾಲ್ಕು ಬಾರಿ ಶಾಸಕರಾಗಿ, ಮಗನನ್ನು ಶಾಸಕನಾಗಿ ಮಾಡಿ ಇದೀಗ ಸಚಿವರು ಮಾಡಿದ್ದಾರೆ. ಮುಂದೆ ಅವರಿಗೆ ದೊಡ್ಡ ಹುದ್ದೆ ಕೊಡಿಸುವ ಪ್ರಯತ್ನದಲಿದ್ದಾರೆ ಎಂದು ಟೀಕಿಸಿದರು.