ಸುರಪುರ | ಕೆಂಭಾವಿ ಪೊಲೀಸ್ ಠಾಣೆ ವರ್ಗಾವಣೆ ಆದೇಶ ರದ್ದುಗೊಳಿಸಲು ದಲಿತ ಸಂಘರ್ಷ ಸಮಿತಿ ಆಗ್ರಹ
ಆ.14ರಂದು ಸುರಪುರ ಬಂದ್ ಎಚ್ಚರಿಕೆ; ಡಿವೈಎಸ್ಪಿ ಮೂಲಕ ಸಿಎಂ, ಗೃಹ ಸಚಿವರಿಗೆ ಮನವಿ
ಸುರಪುರ: ಕೆಂಭಾವಿ ಪೊಲೀಸ್ ಠಾಣೆಯನ್ನು ಹುಣಸಗಿ ವೃತ್ತದಿಂದ ಶಹಾಪುರ ವೃತ್ತಕ್ಕೆ ವರ್ಗಾವಣೆ ಮಾಡುವ ಆದೇಶವನ್ನು ಕೂಡಲೇ ರದ್ದುಗೊಳಿಸಿ, ಠಾಣೆಯನ್ನು ಈಗಿರುವ ಹುಣಸಗಿ ವೃತ್ತದಲ್ಲಿಯೇ ಮುಂದುವರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ಪಟ್ಟಣದ ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೆಂಭಾವಿ ಪೊಲೀಸ್ ಠಾಣೆಯನ್ನು ಶಹಾಪುರ ವೃತ್ತಕ್ಕೆ ಸೇರ್ಪಡೆ ಮಾಡಿದರೆ ಠಾಣಾ ವ್ಯಾಪ್ತಿಯ ಹಲವು ಗ್ರಾಮಗಳ ಜನರು ಪೊಲೀಸ್ ಕೆಲಸಗಳಿಗಾಗಿ ಶಹಾಪುರಕ್ಕೆ ತೆರಳಬೇಕಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸುಮಾರು 100 ಕಿಲೋಮೀಟರ್‌ಗಳಷ್ಟು ಹೆಚ್ಚುವರಿ ಪ್ರಯಾಣದ ತೊಂದರೆ ಉಂಟಾಗಲಿದೆ ಎಂದು ಹೇಳಿದರು.
ಆದ್ದರಿಂದ ಯಾವುದೇ ಕಾರಣಕ್ಕೂ ಕೆಂಭಾವಿ ಪೊಲೀಸ್ ಠಾಣೆಯನ್ನು ಶಹಾಪುರ ವೃತ್ತಕ್ಕೆ ವರ್ಗಾವಣೆ ಮಾಡದೆ, ಪ್ರಸ್ತುತ ಇರುವ ಹುಣಸಗಿ ವೃತ್ತದಲ್ಲಿಯೇ ಮುಂದುವರಿಸಬೇಕು. ಈಗಾಗಲೇ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಆಗಸ್ಟ್ 14ರಂದು ಸುರಪುರ ಬಂದ್‌ಗೆ ಕರೆ ನೀಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಉದ್ದೇಶಿಸಿದ ಮನವಿ ಪತ್ರವನ್ನು ಡಿವೈಎಸ್ಪಿ ಜಾವೇದ್ ಇನಾಂದಾರ್ ಅವರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಮಾನು ಗುರಿಕಾರ, ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್,ಮೂರ್ತಿ ಬೊಮ್ಮನಹಳ್ಳಿ, ಭೀಮರಾಯ ಸಿಂದಗೇರಿ, ರಾಮಣ್ಣ ಶೆಳ್ಳಗಿ, ನಿಂಗಣ್ಣ ಶೆಳ್ಳಗಿ, ಬಸವರಾಜ ದೊಡ್ಡಮನಿ, ಮಹೇಶ ಸುಂಗಲಕರ್, ಖಾಜಾ ಹುಸೇನ್ ಗುಡಗುಂಟಿ,ಆನಂದ ಹೇಮನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.