ಸುರಪುರ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಯ್ಯ ಸ್ವಾಮಿ ಹುಣಸಿಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಶುಕ್ರವಾರ ತಾಲೂಕಿನ ದೇವಪುರ ಕ್ರಾಸ್‌ನಲ್ಲಿ ಬೀದರ್–ಬೆಂಗಳೂರು ಹೆದ್ದಾರಿ ತಡೆದು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಳೆದ ಒಂದು ವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಸಿ, ನ.30ರವರೆಗೆ ಕೃಷ್ಣಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಲಾಗುತ್ತಿದೆ. ಆದರೆ, ಸರ್ಕಾರ ರೈತರ ಮನವಿಗೆ ಸ್ಪಂದಿಸದೆ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿದೆ ಎಂದು ಅವರು ದೂರಿದರು.

ರೈತರ ಜಮೀನುಗಳಿಗೆ ನೀರು ತಲುಪದ ಕಾರಣ ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ರೈತರ ಬದುಕು ಕೂಡ ಸರ್ವನಾಶವಾಗಲಿದೆ. ಜಲಾಶಯದಲ್ಲಿ ನೀರು ಲಭ್ಯವಿದ್ದರೂ ಕಾಲುವೆಗಳಿಗೆ ನೀರು ಹರಿಸದೆ ಇರುವ ಮೂಲಕ ಸರ್ಕಾರವೇ ರೈತರ ಬದುಕನ್ನು ಹಾಳು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನ.30ರವರೆಗೆ ಕೃಷ್ಣಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹೇಶಗೌಡ ಸುಬೇದಾರ, ರಾಜ್ಯ ಕಾರ್ಯಾಧ್ಯಕ್ಷ ಶಾಂತರೆಡ್ಡಿ ಪೊಲೀಸ್ ಪಾಟೀಲ, ಜಿಲ್ಲಾಧ್ಯಕ್ಷ ವಿಜಯಕುಮಾರ ಮುಸ್ಟೂರ, ರವಿ ಮುತ್ಯಾ ದೇವಪುರ, ಸುರಪುರ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಅಡ್ಡೋಡಗಿ, ಹುಣಸಗಿ ತಾಲೂಕು ಅಧ್ಯಕ್ಷ ಮಲ್ಲನಗೌಡ, ಶಹಾಪುರ ತಾಲೂಕು ಅಧ್ಯಕ್ಷ ರಮೇಶ ಗಾಂಜಿ, ಅಂಬರೀಶ ಕಟ್ಟೀಮನಿ, ಬಸನಗೌಡ ಪಾಟೀಲ ಹುಣಸಗಿ, ಕಟ್ಟಯ್ಯ ಸ್ವಾಮಿ, ರಮೇಶ ನಾರಾಯಣಪುರ, ಭೀಮನಗೌಡ ಪಾಟೀಲ ನಾಗರಾಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಹಾಂತಗೌಡ ಪಾಟೀಲ, ಸಂತೋಷ ಸಾಹುಕಾರ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor