ಯಾದಗಿರಿಯ ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಡಾ.ಸಿದ್ದರಾಮ ಹೊನ್ಕಲ್
ಯಾದಗಿರಿ : ರಾಜ್ಯ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಸಿದ್ದರಾಮ ಹೊನ್ಕಲ್ ಅವರು ಸ್ಥಾನ ಪಡೆದಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದವರಾದ ಡಾ.ಸಿದ್ದರಾಮ ಹೊನ್ಕಲ್ ಅವರು ಕನ್ನಡ ಹಾಗೂ ಸಮಾಜಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದಾರೆ. ಕಥೆ, ಕವನ, ಗಜಲ್, ಹೈಕು, ಶಾಯಿರಿ, ಲಲಿತ ಪ್ರಬಂಧ, ಜೀವನ ಕಥನ ಹಾಗೂ ಪ್ರವಾಸ ಕಥನ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಪ್ರವಾಸ ಕಥನಗಳನ್ನು ಬರೆದವರಲ್ಲಿ ಒಬ್ಬರೆಂಬ ಹೆಗ್ಗಳಿಕೆ ಹೊಂದಿರುವ ಅವರು, 80ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕಥೆಗಳಿಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ, ಪ್ರವಾಸ ಕಥನ ಕೃತಿಗಳಿಗಾಗಿ ಮೂರು ಬಾರಿ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುರಸ್ಕಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಅವರ ಪ್ರಕಟಿತ ಕೃತಿಗಳಿಗೆ 65ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
ಇವರ ಬದುಕು ಮತ್ತು ಬರಹದ ಕುರಿತು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ ಸಂಶೋಧನಾ ವಿದ್ಯಾರ್ಥಿನಿ ಡಾ. ರೇವತಿ ಶಿರನಾಳ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಕಥೆಗಳ ಕುರಿತು ಅಧ್ಯಯನ ನಡೆಸಿದ ಸಂಶೋಧನಾ ವಿದ್ಯಾರ್ಥಿ ಮಾನಯ್ಯ ಗೋನಾಲ್ ಅವರು ಎಂ.ಫಿಲ್ ಪದವಿ ಪಡೆದಿದ್ದಾರೆ. ಇವರ ಇತರ ಸಾಹಿತ್ಯ ಪ್ರಕಾರಗಳ ಕುರಿತು ಸಂಶೋಧನಾ ವಿದ್ಯಾರ್ಥಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ 20ಕ್ಕೂ ಹೆಚ್ಚು ಕಿರುಪ್ರಬಂಧಗಳನ್ನು ಮಂಡಿಸಿದ್ದಾರೆ.
ಇವರ ಕಥೆಗಳು, ಲಲಿತ ಪ್ರಬಂಧಗಳು, ಪ್ರವಾಸ ಕಥನಗಳು ಹಾಗೂ ಗಜಲ್ಗಳು ಸೇರಿದಂತೆ 16ಕ್ಕೂ ಹೆಚ್ಚು ಬರಹಗಳು ಮತ್ತು ಕೃತಿಗಳು ನಾಡಿನ ಹಾಗೂ ಹೊರನಾಡಿನ ಒಂಬತ್ತು ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ.
ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ರಾಜ್ಯ ಮತ್ತು ದೇಶದಾದ್ಯಂತ ನಡೆದ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರಬಂಧ ಮಂಡನೆ, ಕಾವ್ಯವಾಚನ, ಅಧ್ಯಕ್ಷತೆ, ಮುಖ್ಯ ಅತಿಥಿ, ಉದ್ಘಾಟನೆ, ಕೃತಿ ಲೋಕಾರ್ಪಣೆ ಹಾಗೂ ಕೃತಿ ಪರಿಚಯ ಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿ ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ನಾಡಿನ ಬಹುತೇಕ ಪತ್ರಿಕೆಗಳು, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಇವರ ನೂರಾರು ಬರಹಗಳು ಪ್ರಕಟಗೊಂಡಿದ್ದು, ಹಲವು ಕಾರ್ಯಕ್ರಮಗಳು ಪ್ರಸಾರವಾಗಿವೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಇವರ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು 2024ರಲ್ಲಿ ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತ್ತು.