ಸುರಪುರ | ಗ್ರಾಮೀಣ ಭಾಗದಲ್ಲಿ ಮನೆಗೆ ಬಾಗಿಲಿಗೆ ಸಿಲಿಂಡರ್ ವಿತರಿಸಲು ಆಗ್ರಹಿಸಿ ಮನವಿ
ಸುರಪುರ: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಮನೆ ಬಾಗಿಲಿಗೆ ಅಡುಗೆ ಸಿಲಿಂಡರ್ ತಲುಪಿಸುವ ವ್ಯವಸ್ಥೆಯನ್ನು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದಿಂದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿ, ಪಟ್ಟಣದಲ್ಲಿರುವ ಪನ್ ಫ್ಲೇಮ್ ಗ್ಯಾಸ್ ವಿತರಣಾ ಕೇಂದ್ರದಿಂದ ಸರಿಯಾಗಿ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಗಳು ಲಭಿಸುತ್ತಿಲ್ಲ. ಗ್ರಾಮೀಣ ಪ್ರದೇಶದಿಂದ ಗ್ರಾಹಕರು ಸಿಲಿಂಡರ್ ಗಾಗಿ ಬಂದು ಇಡೀ ದಿನ ವಿತರಣಾ ಕೇಂದ್ರದ ಮುಂದೆ ಕಾಯುವ ಪರಿಸ್ಥಿತಿ ಉಂಟಾಗಿದೆ.
ಇದಲ್ಲದೆ ನೂರಾರು ಜನರು ಸರತಿ ಸಾಲಿನಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆಯೂ ಕೂಡ ಉಂಟಾಗುತ್ತಿದೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಲಿಂಡರ್ ವಿತರಣಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ಸಂಘಟನೆಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪ ವಿಭಾಗೀಯ ಸಂಚಾಲಕ ರಮೇಶ ಬಡಿಗೇರ, ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ, ಮುಖಂಡರಾದ ಎಂ.ಪಟೇಲ್, ಶೇಖರ ಮಂಗಳೂರ,ರಾಜು ಬಡಿಗೇರ,ಖಾಜಾ ಅಜ್ಮೀರ,ಯಲ್ಲಪ್ಪ ರತ್ತಾಳ, ಹಣಮಂತ ರತ್ತಾಳ, ಮೌನೇಶ ದೇವತ್ಕಲ್, ದೇವು ಬಡಿಗೇರ,ಗುರು ಮಾವಿನಮಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.