ಸುರಪುರ ಸಂಸ್ಥಾನ ಸರ್ವ ಧರ್ಮಿಯರಿಗೂ ರಕ್ಷಣೆ ನೀಡಿತ್ತು : ಪ್ರೊ.ಬರಗೂರು ರಾಮಚಂದ್ರಪ್ಪ
ಶೂರ ನಾಯಕ ಸಂಸ್ಥಾನ ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣ
ಸುರಪುರ: ಹಿಂದಿನ ಪಾಳೆ ಪಟ್ಟುಗಳ ಆಳ್ವಿಕೆಯ ಸಂದರ್ಭದಲ್ಲಿ ಸುರಪುರ ಸಂಸ್ಥಾನ ವಿಶೇಷವಾಗಿತ್ತು. ಇಲ್ಲಿ ಎಲ್ಲ ಧರ್ಮಿಯರಿಗೆ ರಕ್ಷಣೆ ನೀಡಲಾಗಿತ್ತು ಎಂದು ಖ್ಯಾತ ಚಿಂತಕ ಹಾಗೂ ಬರಹಗಾರ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದರು.
ನಗರದ ಗರುಡಾದ್ರಿ ಕಲಾಮಂದಿರಲ್ಲಿ ಶುಕ್ರವಾರ ವಾಲ್ಮೀಕಿ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಕಚೇರಿ ಕಲಬುರಗಿ, ಕನ್ನಡ ಸಾಹಿತ್ಯ ಸಂಘ ಸುರಪುರ, ಓಕುಳಿ ಪ್ರಕಾಶನ ಸುರಪುರ, ಸುರಪುರ ಇತಿಹಾಸ ಸಂಶೋಧನಾ ಕೇಂದ್ರ, ಭೀಮರಾಯನ ಗುಡಿ ಇವರ ಸಹಕಾರದಲ್ಲಿ ನಡೆದ ʼಕರ್ನಾಟಕ ಶೂರ ನಾಯಕ ಸಂಸ್ಥಾನ ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣʼ ಉದ್ಘಾಟಿಸಿ ಮಾತನಾಡಿದರು.
ಸಗರನಾಡಿನ ನೆಲವು ಜನಪರ ಕಾಳಜಿಯನ್ನು ಹೊಂದಿದೆ. ಪ್ರಥಮ ಸ್ವತಂತ್ರ ಸಂಗ್ರಾಮದ ಹೋರಾಟದ ಪ್ರಧಾನ ಕಾರ್ಯವೇನು? ಅದಕ್ಕೆ ಪೂರಕವಾಗಿ ನೂರಾರು ಉಪಧಾರೆಗಳಿವೆ. ದಕ್ಷಿಣ ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದ ಸಾರಥ್ಯ ವಹಿಸಿದ್ದು, ಸುರಪುರದ ಸಂಸ್ಥಾನ ಅನ್ನೋದು ಮರೆಯುವಂತಿಲ್ಲ. ಇದರ ಮರುಕಟ್ಟುವಿಕೆಯ ಒಂದು ಆಕರವಾದ ಚರಿತ್ರೆ ಲೋಕಕ್ಕೆ ಕೊಡುವ ದೊಡ್ಡ ಕೊಡುಗೆಯಾಗುತ್ತೆ. ಕರ್ನಾಟಕದ ಸ್ಥಳೀಯ ಸಂಸ್ಥಾನಗಳ ಕುರಿತು ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆದು ಚರಿತ್ರೆಯನ್ನು ಕಟ್ಟುವ ನಿಜವಾದ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಇದರ ಅಗತ್ಯ ಪ್ರಸ್ತುತವಾಗಿದೆ ಎಂದರು.
ತಾಲೂಕು ಕೇಂದ್ರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯುವುದು ಸಣ್ಣ ವಿಚಾರವಲ್ಲ. ಇದು ನಡೆಯುತ್ತಿರುವುದು ಇಲ್ಲಿನ ಮಣ್ಣಿನ ಗುಣದ ಗತ್ತಾಗಿದೆ. ಸುರಪುರ ಸಂಸ್ಥಾನದ ಕೊಡುಗೆ ದೇಶಕ್ಕೆ ಮಾದರಿಯಾಗಿರುವ ಕೆಲವು ಚಾರಿತ್ರಿಕ ಅಂಶಗಳನ್ನು ಕೊಟ್ಟಿದೆ. ಇದನ್ನು ಪುನಹ ಕಟ್ಟಿಕೊಡಬೇಕಿದೆ. ಪಾಳೆಗಾರ ಸಂಸ್ಥಾನಗಳ ಇತಿಹಾಸವನ್ನು ರಕ್ಷಿಸುವ ಹೊಣೆಯನ್ನು ನೇರವಾಗಿ ಸರಕಾರ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ಶಕ್ತಿ ತೋರಿಸಿದ್ದು ಸುರಪುರ ಸಂಸ್ಥಾನ. ಮಹಿಳೆಯರು ಸುರಪುರ ಸಂಸ್ಥಾನದಲ್ಲಿ ಆಡಳಿತ ನಡೆಸಿದ್ದಾರೆ. ಇದಕ್ಕೆ ರಾಣಿ ರಂಗಮ್ಮ, ರಾಣಿ ಈಶ್ವರಮ್ಮ ಅವರೇ ಸಾಕ್ಷಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವಿ.ಪರಮಶಿವಮೂರ್ತಿ, ಬೆಂಗಳೂರ ವಿಶ್ರಾಂತ ಪ್ರಾಧ್ಯಾಪಕ ಡಾ.ಚನ್ನನರಸಿಂಹಪ್ಪ ಮಾತನಾಡಿದರು.
ವೇದಿಕೆಯಲ್ಲಿ ಹೈಕೋರ್ಟ್ ನ್ಯಾ.ಜೆ.ಆಗಷ್ಟಿನ್, ಬಸವರಾಜ ಜಮದರಖಾನಿ, ಆಕಾಂಕ್ಷಿ ಮೈತ್ರಿ ಬರಗೂರ, ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಕೃಷ್ಣಾ ಸುಬೇದಾರ್, ಶಾಂತಲಾ ಭಾಷ್ಕರರಾವ್ ಮುಡಬೂಳ ಉಪಸ್ಥಿತರಿದ್ದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ಸ್ಮರಣೆಯಲ್ಲಿ ಭಾಷ್ಕರರಾವ್ ಮುಡಬೂಳ ಅವರ ಕುರಿತು ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೆಂಕೋಬ ಯಾದವ್, ವಾಯ್, ಎಚ್.ನಾಯಕವಾಡಿ, ಲಕ್ಷ್ಮಣ ತೆಲಗಾವಿ, ಡಾ.ಆರ್.ವಿ.ನಾಯಕ, ವೇಣು ಮಾಧವ ನಾಯಕ, ಸಿದ್ರಾಮ ಹೊನ್ಕಲ್, ಶ್ರೀನಿವಾಸ ಜಾಲವಾದಿ, ಬಿ.ಪಿ ಹೂಗಾರ, ಮಲ್ಲಯ್ಯ ಕಮತಗಿ, ಬಿಇಓ ಯಲ್ಲಪ್ಪ ಕಾಡ್ಲೂರ, ದೊಡ್ಡ ದೇಸಾಯಿ, ಭೀಮನಗೌಡ ಲಕ್ಷ್ಮಿ ,ಜಯಲಲಿತಾ ಪಾಟೀಲ್, ದೊಡ್ಡಪ್ಪ ಎಸ್.ನಿಷ್ಠಿ, ದೊಡ್ಡ ದೇಸಾಯಿ, ಎಮ್.ಡಿ.ವಾರೀಸ್ ಕುಂಡಾಲೆ, ರಾಜುಗೋಪಾಲ ವಿಭೂತೆ ಅಬ್ದುಲ್ ಅಲೀಂ ಗೋಗಿ, ರಾಘವೇಂದ್ರ ಭಕ್ರಿ ಸೇರಿ ಸಾವಿರಾರು ಜನರಿದ್ದರು.
ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು ,ಶ್ರೀಹರಿರಾವ್ ಆದವಾನಿ ಪ್ರಾರ್ಥಿಸಿದರು, ಡಾ.ಅಮರೇಶ ಯಾತಗಲ್ ಸ್ವಾಗತಿಸಿದರು, ಶ್ರೀನಿವಾಸ ಕುಲಕರ್ಣಿ ವಂದಿಸಿದರು.
ನಮ್ಮ ಹಿರಿಯರಾದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಬಗ್ಗೆ ಮಾತನಾಡುವಾಗ ತುಂಬಾ ಹೆಮ್ಮೆಯಾಗುತ್ತದೆ. ನಾವು ಇತಿಹಾಸ ಎಂದೂ ಮರೆಯಬಾರದು. ಯುವ ಪೀಳಿಗೆ ಇತಿಹಾಸ ಅರಿಯಬೇಕು. ಸುರಪುರ ಇತಿಹಾಸದ ಕುರಿತು ಇದರ ಬೆಳವಣಿಗೆಗಾಗಿ ನಾನು ಕೆಲಸ ಮಾಡುತ್ತೇನೆ. ಎಲ್ಲರು ಜಾತಿ ಎನ್ನುವುದನ್ನು ಬಿಟ್ಟು ಒಂದೇ ಎಂದಾಗ ಎಲ್ಲರು ಸಂತೋಷ ದಿಂದ ಇರಲು ಸಾಧ್ಯವಾಗಲಿದೆ.
-ರಾಜಾ ವೇಣುಗೋಪಾಲ ನಾಯಕ ಶಾಸಕ ಸುರಪುರ.
ಚರಿತ್ರೆಯ ಬಗ್ಗೆ ತಿಳಿಯುವ ನಿರಾಸಕ್ತಿ ನಮ್ಮ ಭಾಗದ ಜನರಲ್ಲಿ ತುಂಬಾ ಇದೆ. ನಮ್ಮ ಪತ್ರಾಂಕಿತ ಇಲಾಖೆಯಿಂದ ಇಲ್ಲಿಯ ಇತಿಹಾಸಕ್ಕೆ ಸಂಬಂಧಿಸಿದಂತೆ 30 ಕೋಟಿ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಆದರೆ ಅವುಗಳನ್ನು ತಿಳಿಯುವ ಕೆಲಸ ಯಾರು ಮಾಡುತ್ತಿಲ್ಲ, ಇತಿಹಾಸ ರಚನೆ ಬಹಳ ಸಂಕಷ್ಟದ ಕೆಲಸವಾಗಿದ್ದು, ಪತ್ರಗಾರ ಇಲಾಖೆ ಕಳೆ ನಾಲ್ಕು ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿದೆ. ಇಂತಹ ವಿಚಾರ ಸಂಕಿರಣವನ್ನು ಬೇರೆ ಎಲ್ಲಿಯಾದರೂ ನಡೆಸುತ್ತಿದ್ದರೆ ಅದಕ್ಕೆ ನಮ್ಮ ಇಲಾಖೆಯಿಂದ ಬೇಕಾದ ನೆರವು ನೀಡಲಾಗುವುದು.
-ಡಾ.ವೀರಶೆಟ್ಟಿ, ಹಿರಿಯ ಸಹಾಯಕ ನಿರ್ದೇಶಕರು ಪತ್ರಾಗಾರ ವಿಭಾಗೀಯ ಪತ್ರಗಾರ ಕಚೇರಿ ಕಲಬುರಗಿ.
ಸುರಪುರ ಸಂಸ್ಥಾನದಿಂದ ಕೆರೆಕಟ್ಟೆಗಳು, ದೇವಾಲಯಗಳನ್ನು ನಿರ್ಮಿಸಿದರು. ಶಿಕ್ಷಣ ವಿಶೇಷವಾಗಿ ಗರಡಿ ಶಿಕ್ಷಣ, ಚಿತ್ರಕಲೆಗೆ ಪ್ರಾಶಸ್ತ್ಯ ನೀಡಿದರು. ಇವರ ಚಿತ್ರಕಲೆಗಳು ಹೈದರಾಬಾದ್ ಹಾಗೂ ಮುಂಬೈ ಮ್ಯೂಸಿಯಂನಲ್ಲಿವೆ. ಸಂಗೊಳ್ಳಿ ರಾಯಣ್ಣನಿಗೆ ಬ್ರಿಟಿಷರ ವಿರುದ್ಧ ಹೋರಾಡಲು 300 ಸೈನಿಕ ಪಡೆಯನ್ನು ನೀಡಿದೆ. ವಸಾಹತು ಶಾಹಿ ವಿರುದ್ಧ ಮಹಿಳೆಯರಿಂದ 200 ಜನ ಸೈನಿಕರ ಸಂಘ ಕಟ್ಟಿದ್ದ ಉದಾಹರಣೆಯಿದೆ. ರಾಜ್ಯದಲ್ಲಿ ಆಳ್ವಿಕೆ ನಡೆಸಿರುವ ಪಾಳೆಗಾರ ಇತಿಹಾಸ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸರಕಾರ ಪಾಳೆಗಾರ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾಧಿಕಾರ ರಚಿಸಬೇಕು. ಆ ಮೂಲಕ ಸಂಸ್ಥಾನದ ಇತಿಹಾಸ ಪ್ರತಿಯೊಬ್ಬರಿಗೂ ತಿಳಿಯುವಂತೆ ಮಾಡಬೇಕು. ಇದರ ಕುರಿತು ಶಾಸಕರು ಸರಕಾರದ ಗಮನ ಸೆಳೆಯಬೇಕು.
-ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ