ಡಿ .17ರಂದು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಯಾದಗಿರಿ: ಕಳೆದ ಮೂವತ್ತೈದು ವರ್ಷಗಳಿಂದ ನಿರಂತರ ಮೂಗಿಗೆ ತುಪ್ಪಾ ಹಚ್ಚುತ್ತಿರುವ ಸರಕಾರಗಳು ಇನ್ನೂ ಕೂಡಾ ಮಾದಿಗ ಸಮದಾಯಕ್ಕೆ ಒಳ ಮೀಸಲಾತಿ ಸಂಪೂರ್ಣ ಜಾರಿಗೆ ತರದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಬೆಳಗಾವಿ ಅಧಿವೇಶನದ ವೇಳೆ ಡಿ 17ರಂದು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಯಾದಗಿರಿ ಜಿಲ್ಲಾಧ್ಯಕ್ಷ ಕಾಶಪ್ಪ ಹೇಗಣ್ಣಗೇರಾ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಶಪ್ಪ ಹೇಗಣ್ಣಗೇರಾ, ಅನೇಕ ತ್ಯಾಗ ಬಲಿದಾನ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಒಳ ಮೀಸಲಾತಿ ಹಂಚಿಕೆಯಾದರೂ ಸಂಪೂರ್ಣವಾಗಿ ಇನ್ನೂ ಜಾರಿಗೊಂಡಿಲ್ಲ. ರಾಜ್ಯ ಸರಕಾರದ ಎಲ್ಲಾ ಸರಕಾರ ಹುದ್ದೆಗಳು ಸೇರಿದಂತೆ ಬ್ಯಾಕ್‌ಲಾಗ್ ಹುದ್ದೆಗಳಲ್ಲಿಯೂ ಕೂಡಲೇ ಸಂಪೂರ್ಣ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದರು.
ಕಾರಟಗಿ ತಾಲೂಕು ಅಧ್ಯಕ್ಷ ಶೀವಣ್ಣ ಈಳಿಗನೂರು ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷ ಪದ್ಮಭೂಷಣ ಮಂದಕ ಮಂದಕೃಷ್ಣ ಮಾದಿಗ ಹಾಗೂ ರಾಜ್ಯಾಧ್ಯಕ್ಷ ನರಸಪ್ಪ ಇವರ ನೇತೃತ್ವದ ಹೋರಾಟದ ಫಲವಾಗಿ ಸರಕಾರಗಳು ಕಣ್ಣು ತೆರೆದಿದ್ದು, ಸಂಪೂರ್ಣ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿವೆ. ಒಳ ಮೀಸಲಾತಿ ಎಲ್ಲಾ ಜನಾಂಗಗಳ ಜನ ಸಂಖ್ಯೆ ಆಧಾರದ ಮೇಲೆ ಜಾರಿಯಾಗಬೇಕಿದ್ದು, ಜಾರಿಗೆ ಹಿಂದೇಟು ಹಾಕಲು ಕಾರಣವೇನು, ಅದಕ್ಕಾಗಿ ಬೆಳಗಾವಿ ಅಧಿವೇಶನದ ವೇಳೆ ಲಕ್ಷಾಂತರ ಜನತೆ ಮೀಸಲಾತಿ ಅನುಷ್ಠಾನಕ್ಕೆ ಸೇರಬೇಕಿದ್ದು ಯಾದಗಿರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯ ಆಗಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅನಿಲ್ ದಾಸನಕೇರಿ, ವಿಲ್ಸನ್ ಹಾಲಗೇರಾ, ಹಣಮಂತ ನಾಯ್ಕಲ್, ಶಂಕ್ರಪ್ಪ ನಾಯ್ಕಲ್ ಉಪಸ್ಥಿತರಿದ್ದರು.