×
Ad

ಯಾದಗಿರಿ | ಡಿ.21, 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಐದು ವರ್ಷದೊಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ ನೀಡಿ : ಜಿಲ್ಲಾಧಿಕಾರಿ ಹರ್ಷಲ್ ಭೋಯರ್

Update: 2025-12-08 17:38 IST

ಯಾದಗಿರಿ: ಜಿಲ್ಲೆಯಲ್ಲಿ ಡಿ.21ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಆಯೋಜಿಸುವ ಕುರಿತು ನಡೆಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಡಿ.21 ರಂದು ಬೂತ್ ಮಟ್ಟದ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಡಿ.22 ಹಾಗೂ 23 ರಂದು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಡಿ.22 ರಿಂದ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತಿದೆ. ಅದರಂತೆ ಎಲ್ಲ ದಿನಗಳಲ್ಲಿ ಅಂದರೆ ಡಿ.21ರಿಂದ 24ರವರೆಗೆ ವಿಶೇಷ ಪ್ರದೇಶಗಳು ಹಾಗೂ ಟ್ರಾನ್ಸಿಟ್ ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಯಾವುದೇ ಅರ್ಹ ಮಗು ಈ ಲಸಿಕೆಯಿಂದ ವಂಚಿತರಾಗದಂತೆ ನಿಗಾವಹಿಸಲು ಅವರು ಸೂಚಿಸಿದರು.

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ತಂಡಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ, ಆರ್ ಸಿ ಹೆಚ್, ಅಧಿಕಾರಿಗಳು, ತಹಶೀಲ್ದಾರರು - ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು, ಗ್ರಾಮಗಳಲ್ಲಿ ಪಿಡಿಓಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನಿಗಾವಹಿಸಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೂರದ ಪ್ರದೇಶ, ಅಪಾಯಕಾರಿ, ಪ್ರದೇಶ, ವಲಸಿಗ ಕಾರ್ಮಿಕರ ಮಕ್ಕಳು, ಜಿಲ್ಲೆಗೆ ಆಗಮಿಸುವ ಕಾರ್ಮಿಕರ ಹಾಗೂ ವಿವಿಧ ಸಮುದಾಯ ವ್ಯಾಪ್ತಿಯಲ್ಲಿನ ಮಕ್ಕಳನ್ನು, ಗುರುತಿಸಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಶಾಲಾ ಮಕ್ಕಳ ಮೂಲಕ ಜಾಗೃತಿ ಜಾಥಾ, ಪಾಲಕರಲ್ಲಿ ಅರಿವು, ಸೂಕ್ತ ಜಾಗೃತಿ ಕಾರ್ಯಕ್ರಮ, ಶಿಕ್ಷಕರ ಮೂಲಕ ಮಕ್ಕಳಿಗೆ ಲಸಿಕೆ ಹಾಕಿಸಲು ಅವಶ್ಯಕ ಕ್ರಮ ಕೈಗೊಳ್ಳಬೇಕು. ಲಸಿಕಾ ಸಿಬ್ಬಂದಿಗಳಿಗೆ ಸೂಕ್ತ ವಾಹನಗಳ ವ್ಯವಸ್ಥೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ 1,66,693 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಒಟ್ಟು 664 ಬೂತ್ ಮಟ್ಟದ ಲಸಿಕಾ ತಂಡಗಳನ್ನು ರಚಿಸಲಾಗಿದ್ದು, 37 ಟ್ರಾನ್ಸಿಟ್(ಸಂಚಾರಿ) ತಂಡಗಳನ್ನು ನೇಮಿಸಲಾಗಿದೆ. 1,412 ಲಸಿಕಾ ಸಿಬ್ಬಂದಿಗಳು, 5 ಸಂಚಾರಿ ತಂಡಗಳು, 261 ಹೈರಿಸ್ಕ್ ಪ್ರದೇಶದ ತಂಡಗಳನ್ನು ನೇಮಿಸಲಾಗಿದೆ. 403 ತಂಡಗಳು ಮನೆ ಮನೆಗೆ ಭೇಟಿ ನೀಡಲಿವೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ, ಜಿಲ್ಲಾ ಆರ್.ಸಿ ಹೆಚ್ ಅಧಿಕಾರಿ ಮಲ್ಲಪ್ಪ ಕೆ., ಡಬ್ಲ್ಯೂಹೆಚ್ ಓ , ಎಸ್ಎಮ್ಓ ಡಾ.ಅನಿಲ್ ಕುಮಾರ್ ತಾಳಿಕೋಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News