ಯಾದಗಿರಿ: ಭವಿಷ್ಯದ ಆರೋಗ್ಯದ ಕಾಳಜಿ ವಹಿಸುವುದರ ಜತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಅಖಿಲ ಭಾರತೀಯ ಫಾರ್ಮಾಸಿಸ್ಟ್ ಸಂಘದ (ಎಐಪಿಎ) ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ಹೇಳಿದರು.

ಮಂಗಳವಾರ ನಗರದ ಕನಕವೃತ್ತದ ಸಮೀಪದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೈದ್ಯರು ರೋಗ ನಿರ್ಣಯ ಮಾಡಿದ ಬಳಿಕ, ಚಿಕಿತ್ಸೆಯನ್ನು ಯಶಸ್ವಿಗೊಳಿಸುವಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರವೂ ಪ್ರಮುಖವಾಗಿದೆ. ರೋಗಿಗಳಿಗೆ ಔಷಧಿಗಳ ಡೋಸ್ ಹಾಗೂ ಅವುಗಳನ್ನು ಸೇವಿಸುವ ವಿಧಾನದ ಕುರಿತು ಸರಿಯಾಗಿ ತಿಳಿಹೇಳಬೇಕು ಎಂದು ಹೇಳಿದರು.

ರೋಗಿಗಳಿಗೆ ಔಷಧಿಗಳನ್ನು ವಿತರಿಸುವ ಮುನ್ನ ಔಷಧಿಗಳ ಅವಧಿ ಮುಗಿದಿದೆಯೇ ಎಂಬುದನ್ನು ಪರಿಶೀಲಿಸುವುದು ಸೇರಿದಂತೆ ಔಷಧಿಗಳ ಕುರಿತು ಸಮರ್ಪಕವಾಗಿ ಪರಿಶೀಲನೆ ನಡೆಸಿ, ಯಾವುದೇ ತಪ್ಪು ಸಂಭವಿಸದಂತೆ ಎಚ್ಚರಿಕೆಯಿಂದ ಔಷಧಿ ನೀಡಬೇಕು. ಒಂದು ವೇಳೆ ತಪ್ಪು ಸಂಭವಿಸಿದರೆ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಫಾರ್ಮಾಸಿಸ್ಟ್‌ಗಳು ತಾಳ್ಮೆಯಿಂದ ಕೆಲಸ ಮಾಡುವ ಜತೆಗೆ, ಪ್ರೀತಿ ಮತ್ತು ವಿಶ್ವಾಸದಿಂದ ಸೇವೆ ಸಲ್ಲಿಸಬೇಕು ಎಂದರು.

ಇತ್ತೀಚೆಗೆ ವೈದ್ಯಕೀಯ ಪ್ರಮಾಣಪತ್ರಗಳ ದುರುಪಯೋಗವಾಗುತ್ತಿರುವುದನ್ನು ತಡೆಯಬೇಕಿದೆ. ರಾಜ್ಯದಲ್ಲಿ ಔಷಧಿಗಳನ್ನು ಸಮರ್ಪಕವಾಗಿ ಸಂಗ್ರಹಿಸಲು ಸೂಕ್ತ ಔಷಧ ಉಗ್ರಾಣಗಳ ಅವಶ್ಯಕತೆಯಿದೆ ಎಂದು ತಿಳಿಸಿದರು.

ಡಿಎಚ್‌ಒ ಡಾ. ಮಹೇಶ್ ಬಿರಾದಾರ್ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಫಾರ್ಮಾಸಿಸ್ಟ್‌ಗಳು ರೋಗಿಗಳಿಗೆ ಔಷಧಿಗಳನ್ನು ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತಾರೆ. ಔಷಧಿಗಳ ಸೇವನೆ ಹಾಗೂ ಡೋಸ್ ಕುರಿತು ಅರಿವು ಮೂಡಿಸುವ ಮೂಲಕ ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದರು.

ಜಿಲ್ಲಾ ನೋಡಲ್ ಅಧಿಕಾರಿ ಡಾ. ಡಿ.ಆರ್. ಶಿವಪ್ಪ ಮಾತನಾಡಿ, ಫಾರ್ಮಾಸಿಸ್ಟ್‌ಗಳ ಜವಾಬ್ದಾರಿ ಪ್ರಮುಖವಾಗಿದೆ. ವೈದ್ಯರು ಬರೆದಿರುವ ಔಷಧಿಗಳನ್ನು ಸರಿಯಾಗಿ ವಿತರಿಸಬೇಕು. ಔಷಧಿ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಔಷಧಿಗಳ ದಾಸ್ತಾನು ಕುರಿತು ಆನ್‌ಲೈನ್ ಮಾಹಿತಿಯನ್ನು ಸಮರ್ಪಕವಾಗಿ ಅಪ್‌ಡೇಟ್ ಮಾಡಬೇಕು. ಅಗತ್ಯ ಔಷಧಿಗಳು ಲಭ್ಯವಿಲ್ಲದೆ ರೋಗಿಗಳು ವಾಪಸ್ ಹೋಗದಂತೆ ಮುನ್ನೆಚ್ಚರಿಕೆ ವಹಿಸಿ, ತಮ್ಮ ಸಂಸ್ಥೆಯಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ , ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ಕೆಎಸ್ ಜಿಪಿಒಎ ) ರಾಜ್ಯಾಧ್ಯಕ್ಷ ಸಂತೋಷ ಕುಸುಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ. ರಿಜ್ವಾನಾ ಆಫ್ರೀನ್, ಡಾ‌.ಮಲ್ಲಪ್ಪ ಕೆ. ನಾಯ್ಕಲ್, ಡಾ.ಪದ್ಮಾನಂದ ಗಾಯಕ್ವಾಡ್, ಡಾ. ರಾಜ ವೇಂಕಪ್ಪ ನಾಯಕ್, ಡಾ. ಹಣಮಂತರೆಡ್ಡಿ ಮದನಿ, ಡಾ. ಸಂಜೀವ್ ಕುಮಾರ ರಾಯಚೂರುಕರ್, ಡಾ.ಎಂ.ಎ.ಸಾಜೀದ್, ಡಾ.ಜ್ಯೋತಿ ಕಟ್ಟಿಮನಿ, ಡಾ. ಯಲ್ಲಪ್ಪ,ಮಲ್ಲನಗೌಡ ಕೌಳೂರು, ರಾಯಪ್ಪಗೌಡ ಹುಡೇದ್, ಅಶೋಕ್ ಕಲಾಲ್, ವಿಜಯಕುಮಾರ್ ಸೌದ್ರಿ, ಅಬ್ದುಲ್ ರಫೀಕ್, ಮಹ್ಮದ್ ಇಲಿಯಾಸ್, ಸುರೇಶ್ ಮೊರಗೇರಿ, ವಿಜಯಕುಮಾರ್ , ಉಮೇಶ್ ಬಾಬು, ಹಾರೂನ್ ರಷೀದ್ , ಸಾಹೇಬಗೌಡ, ಎನ್.ಗಿರೀಶ್ ಸೇರಿದಂತೆ ಇನ್ನಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor