ಕಾಂಗ್ರೆಸ್ನಿಂದ ಎಸ್‌ಐಆರ್ ಪ್ರಕ್ರಿಯೆ ಕುರಿತು ಆಧಾರರಹಿತ ಆರೋಪ : ಎಂಎಲ್‌ಸಿ ಎನ್.ರವಿಕುಮಾರ್
ಯಾದಗಿರಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಮೂವರು ಚುನಾವಣಾ ಆಯುಕ್ತರು ಜಂಟಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದೇಶದ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಎಸ್‌ಐಆರ್ ಪ್ರಕ್ರಿಯೆ ಕುರಿತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದು, ಇದರಿಂದ ದೇಶದ ಜನರಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಇದುವರೆಗೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಡಿರುವ ಆರೋಪಗಳು ಸಾಬೀತಾಗಿಲ್ಲ. ಒಂದರ ನಂತರ ಮತ್ತೊಂದು ವಿಷಯವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಪಕ್ಷವಾಗಿ ಕಾಂಗ್ರೆಸ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇವಿಎಂ ಕುರಿತು ಹಿಂದೆ ಆರೋಪ ಮಾಡಲಾಗಿತ್ತು, ಈಗ ಎಸ್‌ಐಆರ್ ಪ್ರಕ್ರಿಯೆ ಕುರಿತು ಆರೋಪ ಮಾಡಲಾಗುತ್ತಿದೆ. ಇವು ಆಧಾರರಹಿತ ಆರೋಪಗಳಾಗಿವೆ ಎಂದು ಎನ್. ರವಿಕುಮಾರ್ ಟೀಕಿಸಿದರು.
ಚುನಾವಣೆ ಗೆಲ್ಲಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಎಸ್‌ಐಆರ್ ವಿಚಾರವನ್ನು ಮುಂದಿಟ್ಟುಕೊಂಡಿದೆ ಎಂದು ಆರೋಪಿಸಿದ ಅವರು, ಚುನಾವಣಾ ಆಯುಕ್ತರು ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಬಿ.ಜಿ. ಪಾಟೀಲ್, ಜಿಲ್ಲಾದ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಮಾಜಿ ರಾಜ್ಯ ಉಪಾದ್ಯಕ್ಷೆ ಶ್ರೀಮತಿ ನಾಗರತ್ನಾ ಕುಪ್ಪಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ದೇವಿಂದ್ರನಾಥ ನಾದ, ಸಿದ್ದರಡ್ಡಿ ಬಲ್ಕಲ್, ದೇವರಾಜ ನಾಯಕ, ಪರಶುರಾಮ ಕುರಕುಂದಿ, ವೆಂಕಟರಡ್ಡಿ ಅಬ್ಬೆತುಮಕೂರು, ಲಿಂಗಪ್ಪ ಹತ್ತಿಮನಿ, ಚಂದ್ರು ಕಡೇಸೂರ ಸೇರಿದಂತೆ ಇನ್ನಿತರರು ಇದ್ದರು.