Yadagiri | ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ, 7 ಗಂಟೆ ನಿರಂತರ ವಿದ್ಯುತ್ ನೀಡಲು ರೈತ ಸಂಘದಿಂದ ಆಗ್ರಹ
ಯಾದಗಿರಿ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ರೈತರ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರೈತರನ್ನುದ್ದೇಶಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ರಾಷ್ಟ್ರೀಯ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕೃಷಿಗೆ ಆದ್ಯತೆ ನೀಡುವ ಭರವಸೆಯಂತೆ ರೈತರಿಗೆ ಎಡೆಬಿಡದೆ ಏಳು ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ, ಸರ್ಕಾರವೇ ಖರೀದಿ ಮಾಡಬೇಕು. ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಇನ್ನೂ ಭರ್ತಿಯಾಗಿರುವುದರಿಂದ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ, ರೈತರು ಎರಡು ಬೆಳೆ ಬೆಳೆಯಲು ಅನುಕೂಲವಾಗುವಂತೆ ನೀರಿನ ಸಮರ್ಪಕ ಬಳಕೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಐಆರ್ ಹಾಗೂ ಪಡಿತರ ಕಾರ್ಡ್‌ಗಳಿಗೆ ಸಂಬಂಧಿಸಿದ ಗೊಂದಲಗಳನ್ನು ಶೀಘ್ರವಾಗಿ ನಿವಾರಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣು ವಿ. ಮಂದಾರವಾಡ, ಮುದ್ರಣ್ಣ ಅಮ್ಮಾಪುರ, ಮಲ್ಲಣ್ಣ ಎಸ್. ಚಿಂತಿ, ಬುಚ್ಚಪ್ಪ ನಾಯಕ್, ಮಲ್ಲಣ್ಣ ನೀಲಳ್ಳಿ, ಭೀಮರಾಯ ಎಲೇರಿ, ಪ್ರಭಾಕರ್ ಕೊಂಗಂಡಿ, ಮಹದೇವ ಬಿರಾದಾರ, ಫಕೀರ್ ಅಹ್ಮದ್ ಸಾಬ್, ಭೀಮರಾಯ ಹಾಲಗೇರಾ, ಶರಣಪ್ಪ, ರುದ್ರಂಬಿಕ, ಸುಭಾಷ್, ಮಲ್ಲಪ್ಪ, ಗುರಣ್ಣ ದೇಸಾಯಿ, ವಿಶ್ವನಾಥ್ ಗೊಬ್ದುರ್, ಅನಿಲ್ ಕುಮಾರ್, ಮಲ್ಲು ಯಕ್ಷಂತಿ, ಶರಣು ಯಕ್ಷಂತಿ, ದುರ್ಗಪ್ಪ ಕೋನಳ್ಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡೆ ವೀರೇಶ್ ಅವರು ರೈತರ ಮನವಿ ಸ್ವೀಕರಿಸಿದರು.