ಸುರಪುರ | ಮೆಡಿಕಲ್ ಶಾಪ್‌ಗಳಲ್ಲಿ ಜಿಎಸ್‌ಟಿ ಬಿಲ್ ಕಡ್ಡಾಯಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮನವಿ
ಸುರಪುರ: ತಾಲೂಕಿನ ಎಲ್ಲಾ ಮೆಡಿಕಲ್ ಶಾಪ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಜಿಎಸ್‌ಟಿ ಬಿಲ್ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ವತಿಯಿಂದ ತಾಲೂಕು ಆರೋಗ್ಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಮಾತನಾಡಿ, ತಾಲೂಕಿನ ಅನೇಕ ಮೆಡಿಕಲ್ ಶಾಪ್‌ಗಳಲ್ಲಿ ಗ್ರಾಹಕರಿಗೆ ಔಷಧಿ ನೀಡಿದರೂ ಜಿಎಸ್‌ಟಿ ಬಿಲ್ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಯಾವ ಔಷಧಿ ನೀಡಲಾಗಿದೆ, ಅದರ ನಿಜವಾದ ಬೆಲೆ ಎಷ್ಟು ಎಂಬ ಮಾಹಿತಿ ಗ್ರಾಹಕರಿಗೆ ತಿಳಿಯುತ್ತಿಲ್ಲ. ಔಷಧಿಯ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪಗಳೂ ಕೇಳಿಬರುತ್ತಿದ್ದು, ರೋಗಿಗಳು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಆದ್ದರಿಂದ ತಾಲೂಕಿನ ಎಲ್ಲಾ ಮೆಡಿಕಲ್ ಶಾಪ್‌ಗಳಲ್ಲಿ ಜಿಎಸ್‌ಟಿ ಬಿಲ್ ಕಡ್ಡಾಯವಾಗಿ ನೀಡುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಖಾಸಗಿ ಕ್ಲಿನಿಕ್‌ಗಳಲ್ಲಿ ಕೆಲವು ಹಿರಿಯ ವೈದ್ಯರು ಸ್ವತಃ ರೋಗಿಗಳನ್ನು ಪರೀಕ್ಷಿಸದೇ, ತಮ್ಮ ಬಳಿ ಕೆಲಸ ಮಾಡುವ ಸಿಬ್ಬಂದಿಯಿಂದ ಇಂಜೆಕ್ಷನ್ ಸೇರಿದಂತೆ ಚಿಕಿತ್ಸಾ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಉದ್ದೇಶಿಸಿ ಬರೆದ ಮನವಿಯನ್ನು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಅವರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ, ಪ್ರಕಾಶ ಕಟ್ಟಿಮನಿ, ಪರಶುರಾಮ ಮಹಲ್ ರೋಜಾ, ಗೊಲ್ಲಾಳಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಹಾದಿಮನಿ, ಕೆಂಚಪ್ಪ, ಹೊನ್ನಪ್ಪ ಕಟ್ಟಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.