ಯಾದಗಿರಿ | ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಮುಖ್ಯಮಂತ್ರಿಗೆ ರೈತ ಸಂಘ ಮನವಿ
ಸುರಪುರ: ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿಗಳ ಪರಿಹಾರ ನೀಡುವಂತೆ ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರಂಗನಾಥಗೌಡ ಬೈರಿಮರಡಿ ಮಾತನಾಡಿ, ಯಾದಗಿರಿ ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕೃಷಿ ಚಟುವಟಿಕೆ ತೋಟಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಒತ್ತುಕೊಟ್ಟು ಮೂಲಭೂತ ಸೌಕರ್ಯಗಳನ್ನು ನೀಡಿ ಹಾಗೂ ಸುರಪುರ ತಾಲೂಕಿನ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ವಿನಂತಿಸಿದರು.
ಜಿಲ್ಲೆಯ ಜೀವನಾಡಿಯಾಗಿರುವ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಬೇಕು. ಬೋನಾಳ ಏತ ನೀರಾವರಿ ಯೋಜನೆಯಿಂದ ಸರಿಯಾಗಿ ನೀರು ಹರಿಯುತ್ತಿಲ್ಲ. ಇದರಿಂದ ಸಾವಿರಾರು ಎಕರೆಗೆ ಅನುಕೂಲವಿದ್ದು ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗೆ ಎಲ್ಲ ವಿಭಾಗದ ತಜ್ಞ ವೈದ್ಯರುಗಳನ್ನು ನೇಮಿಸಬೇಕು. ಪಶು ಇಲಾಖೆಯಿಂದ ಜಾನುವಾರು, ಕುರಿ ಮೇಕೆಗಳಿಗೆ ಸರಿಯಾದ ಚಿಕಿತ್ಸೆಗಾಗಿ ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಮುಖ್ಯಮಂತ್ರಿಗೆ ವಿನಂತಿಸಿದರು.
ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮಹಾದೇವಪ್ಪ, ತಾಲೂಕ ಗೌರವಾಧ್ಯಕ್ಷ ಹನುಮಂತ ಗೌಡ ಬಿಚ್ಚದಕೇರಿ, ಪ್ರಧಾನ ಕಾರ್ಯದರ್ಶಿ ಭೀಮಣ್ಣ ಕೆಂಗೂರಿ, ನಗರ ಘಟಕದ ಅಧ್ಯಕ್ಷೀಯ ಮಾನಪ್ಪ ಇಟ್ಟಂಗಿ, ಆಲ್ದಾಳ ಗ್ರಾಮ ಘಟಕದ ಅಧ್ಯಕ್ಷ ಹಣಮಂತ್ರಾಯ ದೊರೆ ಇತರರು ಉಪಸ್ಥಿತರಿದ್ದರು.