Yadgiri | ದಿಲ್ಲಿಯಲ್ಲಿ ಲಾಠಿಚಾರ್ಜ್ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪಂಜಿನ ಪ್ರತಿಭಟನೆ

ಧರ್ಮೇಂದ್ರ ಪ್ರಧಾನ್, ಅಮಿತ್ ಶಾ ರಾಜೀನಾಮೆಗೆ ಆಗ್ರಹ

Update: 2026-07-24 21:47 IST

ಯಾದಗಿರಿ: ದಿಲ್ಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಗರದ ಅಂಬೇಡ್ಕರ್ ಚೌಕ್‌ನಲ್ಲಿ ಪಂಜಿನ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಪರೀಕ್ಷಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಧಮ್ಮಚಾರಿ ನಿಂಗಪ್ಪ ಕೊಲ್ಲೂರಕರ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮಾನಸಿಕ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹5 ಕೋಟಿ ಪರಿಹಾರ ನೀಡಬೇಕು. ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಹಾಗೂ ಸಮಯಬದ್ಧ ತನಿಖೆ ನಡೆಸಬೇಕು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಪಾರದರ್ಶಕ ಹಾಗೂ ಸುರಕ್ಷಿತ ಪರೀಕ್ಷಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಬಳಿಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಯಿತು.

ಪ್ರತಿಭಟನೆಯಲ್ಲಿ ಡಾ. ಭಗವಂತ ಅನವಾರ, ಗೋಪಾಲ ತೆಳಗೇರಿ, ಮಹ್ಮದ್ ಜಿಲಾನಿ, ಮಹಮದ್, ವಿಹಬ್ಬಳ್ಳಿ ಶಿರಗೋಳ, ತಾಜ್ ಮುಲ್ಲಾ, ಸೈದಪ್ಪ ಕೂಲೂರು, ಭೀಮರಾಯ ಹೊಸಮನಿ, ಪರಶುರಾಮ ಒಡೆಯರ್, ಸಂಪತ್ ಚಿನ್ನಾಕಾರ, ವಸಂತ ಸುಂಗಲಕರ್, ಮರಿಲಿಂಗಪ್ಪ ಕುರಕುಂಬಳ, ಭೀಮಣ್ಣ ಸುಂಗಲಕರ್, ಪ್ರಶಾಂತ ಸುಂಗಲಕರ್, ಗಾಲಿ ಪಟೇಲ್, ಮಹ್ಮದ್ ಸಲೀಂಸಾಬ್, ಮಹ್ಮದ್ ಜಿಲಾನಿ ಸಾಬ್, ಡಾ.ಮುಹಮ್ಮದ್‌ ಶಫಿ ತುನ್ನೂರು, ಬದ್ರುದ್ದೀನ್ ಸಾಬ್, ರಾಜು ಹಬ್ಬಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News