Yadgiri | ಗ್ಯಾರಂಟಿ ಯೋಜನೆಗಳ ಸೌಲಭ್ಯ ಎಲ್ಲರಿಗೂ ತಲುಪಿಸಲು ಗ್ರಾಮ, ವಾರ್ಡ್ ಮಟ್ಟದಲ್ಲಿ ಸಮಿತಿ
ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಆರು ಸದಸ್ಯರ ಸಮಿತಿ ರಚನೆ: ಶ್ರೇಣಿಕುಮಾರ ದೋಖಾ
ಯಾದಗಿರಿ: ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುವುದು ಎಂದು ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ದೋಖಾ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಈಗಾಗಲೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಇದೀಗ ಸ್ಥಳೀಯ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿಗೆ ಆರು ಸದಸ್ಯರ ಸಮಿತಿ ರಚಿಸಲಾಗುವುದು. ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರು, ಮಹಿಳೆಯರು, ಇತರೆ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹರಿಗೆ ದೊರೆತಿದೆಯೇ ಎಂಬುದನ್ನು ಸಮಿತಿಗಳು ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಲಿವೆ. ಸೌಲಭ್ಯದಿಂದ ವಂಚಿತರಾದವರನ್ನು ಗುರುತಿಸಿ, ಅವರಿಗೆ ಯೋಜನೆಗಳ ಪ್ರಯೋಜನ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಿವೆ ಎಂದರು.
ನಗರ ಪ್ರದೇಶದಲ್ಲೂ ಸಮಿತಿ :
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಮತ್ತು ವಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ಸಮಿತಿಗಳ ರಚನೆ ನಡೆಯಲಿದೆ. ಪಟ್ಟಣ ಪಂಚಾಯಿತಿಯಲ್ಲಿ ಎಂಟು ವಾರ್ಡ್‌ಗಳಿಗೆ ಒಂದು, ಪುರಸಭೆಯಲ್ಲಿ ಆರು ವಾರ್ಡ್‌ಗಳಿಗೆ ಒಂದು, ಗ್ರೇಡ್-2 ನಗರಸಭೆಯಲ್ಲಿ ನಾಲ್ಕು ವಾರ್ಡ್‌ಗಳಿಗೆ ಒಂದು ಹಾಗೂ ಗ್ರೇಡ್-1 ನಗರಸಭೆಯಲ್ಲಿ ಎರಡು ವಾರ್ಡ್‌ಗಳಿಗೆ ಒಂದು ಸಮಿತಿ ರಚಿಸಲಾಗುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಒಂದು ಸಮಿತಿ ಇರಲಿದೆ.
ಪ್ರತಿ ಸಮಿತಿಯಲ್ಲಿ ಆರು ಸದಸ್ಯರಿದ್ದು, ವಿವಿಧ ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗುವುದು. ಅಲ್ಪಸಂಖ್ಯಾತರ ಪ್ರಾತಿನಿಧ್ಯ ಲಭ್ಯವಿಲ್ಲದ ಸಂದರ್ಭದಲ್ಲಿ ಸಾಮಾನ್ಯ ವರ್ಗದ ಸದಸ್ಯರನ್ನು ನೇಮಿಸಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ನೇಮಕಾಧಿಕಾರ :
ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ಗ್ಯಾರಂಟಿ ಸಮಿತಿಗಳ ಸದಸ್ಯರನ್ನು ನೇಮಿಸುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ. ಸಮಿತಿಗಳು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.
ಎಂಟು ದಿನಗಳಲ್ಲಿ ಪ್ರಕ್ರಿಯೆ ಪೂರ್ಣ :
ಪಂಚಾಯಿತಿ ಮಟ್ಟದ ಸಮಿತಿಗಳ ರಚನೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಎಂಟು ದಿನಗಳೊಳಗೆ ಸದಸ್ಯರ ವಿವರಗಳನ್ನು ಸಂಗ್ರಹಿಸಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಬಳಿಕ ಸಮಿತಿಗಳನ್ನು ಕಾರ್ಯರೂಪಕ್ಕೆ ತಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುವುದು ಎಂದು ಶ್ರೇಣಿಕುಮಾರ ದೋಖಾ ಹೇಳಿದರು.
ಈ ವೇಳೆ ಸಂಜೀವ್ ಕವಲಿ, ಹೊನ್ನೇಶ್ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.