ಯಾದಗಿರಿ | ಸಾಮಾಜಿಕ ಬಹಿಷ್ಕಾರಕ್ಕೆ ವಿರೋಧ : ವಿವಿಧ ಸಮುದಾಯಗಳ ಮುಖಂಡರಿಂದ ದಲಿತ ಕುಟುಂಬಗಳಿಗೆ ಬೆಂಬಲ

Update: 2026-08-09 19:06 IST

ಸುರಪುರ: ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿದೆ ಎನ್ನಲಾದ ಸಾಮಾಜಿಕ ಬಹಿಷ್ಕಾರ, ಬೆದರಿಕೆ, ನಿರ್ಲಕ್ಷ್ಯವನ್ನು ಖಂಡಿಸಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಕಾರ್ಯಕರ್ತರು ರವಿವಾರ ಗ್ರಾಮಕ್ಕೆ ಭೇಟಿ ನೀಡಿ ದಲಿತ ಕುಟುಂಬಗಳಿಗೆ ಬೆಂಬಲ ಸೂಚಿಸಿದರು.

ಕನಸು ಸೇವಾ ಸಂಸ್ಥೆ ಅಧ್ಯಕ್ಷ ಸಂತೋಷ್ ಕುಮಾರ್ ಎಸ್.ಪಿ. ನೇತೃತ್ವದಲ್ಲಿ ಲಿಂಗಾಯತ, ಕಬ್ಬಲಿಗ, ಕುರುಬ, ಜಂಗಮ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಗ್ರಾಮಕ್ಕೆ ತೆರಳಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ನೊಂದ ದಲಿತ ಕುಟುಂಬಗಳನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.

ಈ ಸಂದರ್ಭದಲ್ಲಿ ದಲಿತ ಮಹಿಳೆಯರು ತಮಗಾದ ಕಿರುಕುಳ ಹಾಗೂ ಬೆದರಿಕೆಗಳ ಕುರಿತು ಅಳಲು ತೋಡಿಕೊಂಡರು. ನೊಂದ ಕುಟುಂಬಗಳಿಗೆ ಧೈರ್ಯ ತುಂಬಿ ನಿಮ್ಮ ಹೋರಾಟದಲ್ಲಿ ನಾವೂ ನಿಮ್ಮೊಂದಿಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.

ದಲಿತ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಸೌಲಭ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದ ಮುಖಂಡರು, ಕುಡಿಯುವ ನೀರಿನ ವಾಲ್ವ್ ಧ್ವಂಸ, ದಿನಸಿ ಅಂಗಡಿ ಹಾಗೂ ಹಿಟ್ಟಿನ ಗಿರಣಿ ಬಂದ್, ವಿದ್ಯುತ್ ಸಂಪರ್ಕ ತಡೆ ಮತ್ತು ಮಹಿಳೆಯರಿಗೆ ಜೀವ ಬೆದರಿಕೆ ಹಾಕಿರುವ ಆರೋಪಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ 17 ಮಂದಿಯನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ರೌಡಿಶೀಟ್ ತೆರೆಯಬೇಕು. ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಕುಡಿಯುವ ನೀರು, ವಿದ್ಯುತ್, ಹಿಟ್ಟಿನ ಗಿರಣಿ ಹಾಗೂ ದಿನಸಿ ಅಂಗಡಿಗಳ ಸೌಲಭ್ಯಗಳನ್ನು ತಕ್ಷಣ ಮರುಸ್ಥಾಪಿಸಬೇಕು. ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ದಲಿತರಿಗೆ ನ್ಯಾಯ ದೊರಕಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡಲಾಗುತ್ತದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದರೊಂದಿಗೆ ಸುರಪುರ ಬಂದ್‌ಗೆ ಕರೆ ನೀಡಲಾಗುವುದು. ಅಗತ್ಯಬಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.

ಬಳಿಕ ದಲಿತ ಕುಟುಂಬಗಳ ಮನೆಗಳಿಗೆ ತೆರಳಿದ ಮುಖಂಡರು ಸಹಭೋಜನ ನಡೆಸುವ ಮೂಲಕ ಸಾಮಾಜಿಕ ಬಹಿಷ್ಕಾರದ ವಿರುದ್ಧ ಒಗ್ಗಟ್ಟಿನ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಅಣವೀರಗೌಡ ಬಿರಾದಾರ, ಚನ್ನವೀರ ದಸ್ತಪುರ್, ರಾಚಯ್ಯ ಸ್ವಾಮಿ ಹಿರೇಮಠ, ಶೈಲೇಶ್ ಸೋನಾಳೆ, ಭೀಮಣ್ಣ ಕೋರಿ, ಸಿದ್ದು ದೊಡ್ಮನಿ, ಸಿದ್ದು ಪಾಟೀಲ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News